“ಬೆಂಕಿಯಲ್ಲಿ ಅರಳಿದ ಹೂವು’-ಸುಹಾಸಿನಿ ನಾಯಕಿಯಾಗಿದ್ದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಕೆ.ಬಾಲಚಂದರ್ ನಿರ್ದೇಶಿಸಿದ ಈ ಚಿತ್ರ 1983ರಲ್ಲಿ ತೆರೆಕಂಡಿತ್ತು. ಈಗ ಮತ್ತೆ ಬೆಂಕಿಯಲ್ಲಿ ಹೂ ಅರಳಲು ತಯಾರಾಗಿದೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಇದು ಹೊಸ ಸಿನಿಮಾ ಸುದ್ದಿ. “ಬೆಂಕಿಯಲ್ಲಿ ಅರಳಿದ ಹೂವು’ ಎಂಬ ಸಿನಿಮಾವೊಂದು ಸದ್ದಿಲ್ಲದೇ ಆರಂಭವಾಗಿ ಬಹುತೇಕ ಚಿತ್ರೀಕರಣ ಕೂಡಾ ಪೂರ್ಣಗೊಳಿಸಿದೆ.
ಈಗ ಹಳೆಯ ಯಶಸ್ವಿ ಸಿನಿಮಾಗಳ ಟೈಟಲ್‌ಗಳನ್ನು ಇಟ್ಟು ಸಿನಿಮಾ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅದರಂತೆ ಹೊಸಬರ ತಂಡ “ಬೆಂಕಿಯಲ್ಲಿ ಅರಳಿದ ಹೂವು’ ಸಿನಿಮಾ ಮಾಡಿದೆ. ಈ ಸಿನಿಮಾದಲ್ಲಿ ಅನುಪಮಾ ಗೌಡ ನಾಯಕಿ. ಕಿರುತೆರೆಯಲ್ಲಿ “ಅಕ್ಕ’ ಧಾರಾವಾಹಿ ಮೂಲಕ ಜನಪ್ರಿಯರಾಗಿ ಆ ನಂತರ “ಬಿಗ್‌ಬಾಸ್’ನಲ್ಲಿ ಕಾಣಿಸಿಕೊಂಡ ಅನುಪಮಾ ಗೌಡಗೆ “ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ.
“ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರದಲ್ಲಿ ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಹೋಗುವ ಮಹಿಳೆಯರ ಸಮಸ್ಯೆ, ಗಂಡ ಕೆಲಸಕ್ಕೆ ಹೋಗದೇ ಇದ್ದಾಗ ಆ ಮನೆಯ ಪರಿಸ್ಥಿತಿ ಹೇಗಿರುತ್ತದೆ. ಹೆಂಡತಿ ಹೇಗೆ ಸಂಸಾರವನ್ನು ನಿಭಾಹಿಸುತ್ತಾಳೆಂಬ ಅಂಶದೊಂದಿಗೆ ಸಾಗುತ್ತದೆಯಂತೆ. ಅನುಪಮಾ ಇಲ್ಲಿ ಗಾರ್ಮೆಂಟ್ ಉದ್ಯೋಗಿಯಾಗಿ ಕಾಣಿಸಿಕೊಂಡಿದ್ದಾರೆ. “ಪಾತ್ರ ತುಂಬಾ ಚೆನ್ನಾಗಿದೆ.
ಮಧ್ಯಮ ವರ್ಗದ ಕುಟುಂಬದಲ್ಲಿನ ಸಮಸ್ಯೆಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಕಥೆ ತುಂಬಾ ಚೆನ್ನಾಗಿದೆ. ಈಗಾಗಲೇ ಬಹುತೇಕ ಚಿತ್ರೀಕರಣವಾಗಿದ್ದು, ಇನ್ನೆರಡು ದಿನವಷ್ಟೇ ಬಾಕಿ ಇದೆ’ ಎನ್ನುತ್ತಾರೆ ಅನುಪಮಾ. ದೇವಿಶ್ರೀಪ್ರಸಾದ್ ಈ ಸಿನಿಮಾದ ನಿರ್ದೇಶಕರು. ಬಹುತೇಕ ಹೊಸಬರೇ ಸೇರಿಕೊಂಡು ಈ ಸಿನಿಮಾ ಮಾಡಿದ್ದಾರೆ. ಚಿತ್ರಕ್ಕೆ ವಿ.ಮನೋಹರ್ ಅವರು ಸಂಗೀತ ನೀಡಿದ್ದಾರೆ.
ಇನ್ನು, “ಬಿಗ್‌ಬಾಸ್’ನಿಂದ ಬಂದ ಅನುಪಮಾಗೆ ಸಿನಿಮಾದಿಂದಲೂ ಸಾಕಷ್ಟು ಅವಕಾಶಗಳು ಬರುತ್ತಿವೆ. ಈಗಾಗಲೇ ದಯಾಳ್ ನಿರ್ದೇಶನದ “ಆ ಕರಾಳ ರಾತ್ರಿ’ ಚಿತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. “ಸಿನಿಮಾದಿಂದಲೂ ಒಂದಷ್ಟು ಅವಕಾಶಗಳು ಬರುತ್ತಿವೆ. ಆದರೆ, ನಾನು “ಆ ಕರಾಳ ರಾತ್ರಿ’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದೇನೆ.
ನಿಧಾನವಾಗಿಯಾದರೂ ಒಳ್ಳೆಯ ಸಿನಿಮಾಗಳನ್ನು ಮಾಡುವ ಆಸೆ ಇದೆ’ ಎನ್ನುವುದು ಅನುಪಮಾ ಮಾತು. ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅನುಪಮಾಗೆ ಕಿರುತೆರೆಯಿಂದಲೂ ಅವಕಾಶಗಳು ಬರುತ್ತಿವೆಯಂತೆ. ಆದರೆ, ಸದ್ಯಕ್ಕೆ ಕಿರುತೆರೆಗೆ ಹೋಗುವ ಯೋಚನೆ ಅನುಪಮಾಗಿಲ್ಲ. “ಈಗಷ್ಟೇ ಸಿನಿಮಾರಂಗಕ್ಕೆ ಬಂದಿದ್ದೇನೆ. ಇಲ್ಲಿ ಒಂದಷ್ಟು ಪ್ರಯತ್ನಿಸಬೇಕು. ಆ ನಂತರ ಕಿರುತೆರೆಯತ್ತ ಯೋಚನೆ ಮಾಡುತ್ತೇನೆ’ ಎನ್ನುತ್ತಾರೆ ಅನುಪಮಾ.