ಬೆಂಗಳೂರು: ನಗರದಲ್ಲಿ ಬುಧವಾರ ಮತ್ತೆ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟುವುದರ ಜತೆಗೆ ಅತಿ ಹೆಚ್ಚು ಸಾವನ್ನಪ್ಪಿದ ಘಟನೆಗೆ ಸಾಕ್ಷಿಯಾಗಿದೆ. ಒಂದೇ ದಿನದಲ್ಲಿ 1,148 ಪ್ರಕರಣಗಳು ದಾಖಲಾಗಿದ್ದು, ಒಂದೇ ದಿನ 24 ಜನ ಬಲಿಯಾಗಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 12,509ಕ್ಕೆ ಏರಿಕೆಯಾಗಿದ್ದು, ಒಟ್ಟಾರೆ ಇದುವರೆಗೆ ಕೋವಿಡ್ 19 ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ 177 ಆಗಿದೆ.
ಮಂಗಳವಾರ ಸೋಂಕಿತರ ಸಂಖ್ಯೆ 800 ಇತ್ತು. ಈ ಮಧ್ಯೆ 418 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 418 ಸೋಂಕಿತರು ಬಿಡುಗಡೆಯಾಗಿದ್ದಾರೆ. ಕಳೆದ ವಾರಕ್ಕೆ ಹೋಲಿಸಿದರೆ ಗುಣಮುಖರ ಪ್ರಮಾಣ ತುಸು ಹೆಚ್ಚಳವಾಗಿದೆ. ಜು. 6ರಂದು 278, ಜು. 7ರಂದು 265 ಗುಣಮುಖರಾಗಿದ್ದರು. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ 10,103 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಧಿಕಾರಿಗಳ ಎಡವಟ್ಟು: ಕೋವಿಡ್ 19 ಲಕ್ಷಣ ರಹಿತ ಸೋಂಕಿತರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವಲ್ಲಿ ಅಧಿಕಾರಿಗಳು ಎಡವಟ್ಟು ಮಾಡುತ್ತಿದ್ದಾರೆ. ಗಂಟಲು ದ್ರವ ಪರೀಕ್ಷೆ ಮಾಡಿಸಿದಾಗ ಸೋಂಕು ಇರುವುದು ದೃಢಪಟ್ಟು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಏಳು ದಿನಗಳ ನಂತರ ಇವರನ್ನು ಮತ್ತೆ ಪರೀಕ್ಷೆಗೊಳಪಡಿಸಿ, ಸೋಂಕು ದೃಢಪಡಿಸಿಕೊಂಡು ಬಿಡುಗಡೆ ಮಾಡಬೇಕು. ಆದರೆ, ಪರೀಕ್ಷೆಗೆ ಒಳಪಡಿಸದೆ ಕಳುಹಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಸೋಂಕಿತ ಗರ್ಭಿಣಿಯರ ಚಿಕಿತ್ಸೆಗೆ 24 ಹಾಸಿಗೆ ಮೀಸಲು: ನಗರದಲ್ಲಿ ಗರ್ಭಿಣಿಯರಲ್ಲಿ ಸೋಂಕು ದೃಢಪಡುತ್ತಿರುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ 19 ಇರುವ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ಹಾಗೂ ಹೆರಿಗೆ ಸೌಲಭ್ಯಕ್ಕೆ ವಿಲ್ಸನ್ ಗಾರ್ಡನ್ ಆಸ್ಪತ್ರೆಯಲ್ಲಿ 24 ಹಾಸಿಗೆಗಳ ವ್ಯವಸ್ಥೆ ಮಾಡಿ ಬಿಬಿಎಂಪಿ ಮುಖ್ಯ ಅರೋಗ್ಯ ಅಧಿಕಾರಿ (ಕ್ಲಿನಿಕಲ್) ಡಾ. ನಿರ್ಮಲಾ ಬುಗ್ಗಿ ಆದೇಶ ಹೊರಡಿಸಿದ್ದಾರೆ. ನಗರದ ವಿವಿಧ ಹೆರಿಗೆ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ತಪಾಸಣೆ ಮತ್ತು ಹೆರಿಗೆ ಮಾಡಿಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಇವರಿಗೂ ಹೆರಿಗೆಗೆ 15 ದಿನಗಳು ಇರುವಂತೆ ಕಡ್ಡಾಯವಾಗಿ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ವೇಳೆ ಸೋಂಕು ದೃಢಪಟ್ಟರೆ, ಆ ನಿರ್ದಿಷ್ಟ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗುತ್ತಿದೆ. ಇದರಿಂದ ಉಳಿದ ರೋಗಿಗಳಿಗೂ ತೊಂದರೆಯಾಗುತ್ತಿದೆ. ಅಲ್ಲದೆ, ಸೋಂಕು ಹಬ್ಬುವ ಆತಂಕ ಸೃಷ್ಟಿಯಾಗುತ್ತಿದೆ. ಹೀಗಾಗಿ, ವಿಲ್ಸನ್ ಗಾರ್ಡನ್ ಆಸ್ಪತ್ರೆಯಲ್ಲಿ 24 ಹಾಸಿಗೆಗಳನ್ನು ಸೋಂಕು ದೃಢಪಟ್ಟ ಹಾಗೂ ಶಂಕಿತ ಗರ್ಭಿಣಿಯರಿಗೆ ಮೀಸಲಿಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಎಫ್‌ಎಸ್‌ಎಲ್ ಕೇಂದ್ರಕ್ಕೂ ಸೋಂಕು: ಪೊಲೀಸ್, ಅಗ್ನಿಶಾಮಕದಳ, ಹೋಮ್ ಗಾರ್ಡ್, ಸಿಸಿಬಿ ಸಿಬ್ಬಂದಿಗೆ ತಟ್ಟಿದ್ದ ಸೋಂಕು ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ (ಎಫ್ ಎಸ್ ಎಲ್) ಕೇಂದ್ರದ ಇಬ್ಬರು ಸಿಬ್ಬಂದಿಗೆ ಸೋಂಕು ತಗುಲಿದೆ. ಕೇಂದ್ರದಲ್ಲಿ ರಾಸಾಯನಿಕ ಸಿಂಪಡಿಸಿದ್ದು, ಮೂರು ದಿನ ಸೀಲ್‌ಡೌನ್ ಮಾಡಲಾಗಿದೆ.
ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ: ಶಕ್ತಿಗಣಪತಿನಗರದ ಆಟೋ ಚಾಲಕನಿಗೆ ಕೋವಿಡ್ 19 ವೈರಸ್ ದೃಢಪಟ್ಟಿದ್ದು, ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ಕುಟುಂಬದವರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಸುಮನಹಳ್ಳಿ ಚಿತಗಾರದಲ್ಲಿ ಮೃತರ ಅಂತ್ಯಕ್ರಿಯೆ ನಡೆದಿದ್ದು, ಅವರ ಪುತ್ರಿ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.
75 ವಾರ್ಡ್‌ಗಳಲ್ಲಿ 50ಕ್ಕೂ ಅಧಿಕ ಸೋಂಕಿತರು: ಬಿಬಿಎಂಪಿಯ ಒಟ್ಟಾರೆ 198 ವಾರ್ಡ್‌ಗಳ ಪೈಕಿ 75 ವಾರ್ಡ್‌ಗಳಲ್ಲಿ ತಲಾ 50ಕ್ಕೂ ಅಧಿಕ ಸೋಂಕಿತರಿದ್ದಾರೆ. ಬಹುತೇಕ ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ವಲಯಗಳಲ್ಲಿನ ವಾರ್ಡ್‌ಗಳಲ್ಲೇ ಹೆಚ್ಚಿದ್ದಾರೆ. ಪೂರ್ವ ವಲಯದಲ್ಲಿ 1,932, ಪಶ್ಚಿಮ 1,962, ದಕ್ಷಿಣ 2,703 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.