Advertisement

ಅಫಜಲಪುರ: ಸರ್ಕಾರಿ ಕಚೇರಿಗಳಿಗೆ ಖಾಸಗಿ ಕಟ್ಟಡಗಳೇ ಗತಿ

02:57 PM Jun 25, 2018 | Team Udayavani |

„ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ: ಸರ್ಕಾರ ಕೋಟ್ಯಂತರ ರೂ. ಅನುದಾನ ಖರ್ಚು ಮಾಡಿ ಸರ್ಕಾರಿ ಕಚೇರಿ, ಕಟ್ಟಡಗಳನ್ನು ಕಟ್ಟಿಸುತ್ತದೆ. ಆದರೆ ಕೆಲವೊಂದು ಇಲಾಖೆಗಳ ಕಚೇರಿಗಳಿಗೆ ಖಾಸಗಿ ಕಟ್ಟಡಗಳೇ ಗತಿಯಾಗಿದ್ದು ದುಬಾರಿ ಬಾಡಿಗೆ ನೀಡುವಂತಾಗಿದೆ.

Advertisement

ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ರೇಷ್ಮೆ ಇಲಾಖೆ, ಕೈಗಾರಿಕಾ ಇಲಾಖೆ, ಅಬಕಾರಿ, ಶಿಶು ಅಭಿವೃದ್ಧಿ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ದುಬಾರಿ ಬಾಡಿಗೆಯಲ್ಲಿ ನಡೆಯುತ್ತಿವೆ.

ಕಚೇರಿಗಳ ಆರಂಭದಿಂದ ಇಂದಿನವರೆಗೂ ಬಾಡಿಗೆ ಕಟ್ಟಡಗಳೇ ಗತಿ: ಪಟ್ಟಣದಲ್ಲಿ ಈ ಕಚೇರಿಗಳು ಆರಂಭವಾದಾಗಿನಿಂದ ಬಾಡಿಗೆ ಕಟ್ಟಡಗಳಲ್ಲಿಯೇ ಕಾರ್ಯಾರಂಭ ಮಾಡುತ್ತಿವೆ. ಸರ್ಕಾರದ ನಿವೇಶನಗಳಲ್ಲಿ ಆಗಲಿ, ಖಾಸಗಿ ನಿವೇಶನ ಖರೀದಿಸಿಯಾಗಲಿ ಸ್ವಂತ ಕಟ್ಟಡ ನಿರ್ಮಿಸಿಕೊಂಡಿಲ್ಲ. ದುಬಾರಿ ಬಾಡಿಗೆ ನೀಡಿ ಕಚೇರಿಗಳನ್ನು ನಡೆಸಲಾಗುತ್ತಿದೆ. ಅಲ್ಲದೆ ಕಚೇರಿಗಳು ಯಾವ ಖಾಸಗಿ ಕಟ್ಟಡದಲ್ಲಿಯೂ ಶಾಶ್ವತವಾಗಿ ಉಳಿಯುವುದಿಲ್ಲ.
ಹೀಗಾಗಿ ಜನಸಾಮಾನ್ಯರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಬರಬೇಕಾದರೆ ಕಟ್ಟಗಳಿಂದ ಕಟ್ಟಡಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಚೇರಿಗಳ ಸುತ್ತ ನೈರ್ಮಲ್ಯ ಸಮಸ್ಯೆ: ಖಾಸಗಿ ಕಟ್ಟಡಗಳಲ್ಲಿ ಸರ್ಕಾರಿ ಕಚೇರಿಗಳನ್ನು ಆರಂಭಿಸಿದರೂ ಪರವಾಗಿಲ್ಲ. ಕೆಲವೊಂದು ಕಚೇರಿಗಳಿಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆಗಳಿಲ್ಲ, ಕಚೇರಿ ಇರುವ ಕಟ್ಟಡಗಳ ಅಕ್ಕ ಪಕ್ಕದಲ್ಲಿ ಚರಂಡಿ ನೀರು ನಿಲ್ಲುತ್ತದೆ, ಗಿಡಗಂಟಿಗಳು ಬೆಳೆದು ಸಾಂಕ್ರಾಂಮಿಕ ರೋಗಗಳ ತಾಣಗಳಾಗಿ ಮಾರ್ಪಟ್ಟಿವೆ.

ಜನಪ್ರತಿನಿಧಿಗಳು ಮೌನ: ಹೀಗೆ ಅನೇಕ ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿದ್ದರೂ ಪುರಸಭೆಯಾಗಲಿ, ಸಂಬಂಧಪಟ್ಟ ಇಲಾಖೆಗಳಾಗಲಿ, ಶಾಸಕರಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸ್ವಂತ ಕಟ್ಟಡಗಳನ್ನು ನಿರ್ಮಿಸಿ ದುಬಾರಿ ಬಾಡಿಗೆ ನೀಡುವುದನ್ನು ತಪ್ಪಿಸಬೇಕಾಗಿದೆ. ದುಬಾರಿ ಬಾಡಿಗೆ ನೀಡುವ ಹಣದಲ್ಲಿ ಹೊಸ ಸ್ವಂತ ಕಚೇರಿಯೇ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ.

Advertisement

ದುಬಾರಿ ಬಾಡಿಗೆ: ಪಟ್ಟಣದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಖಾಸಗಿ ಕಟ್ಟಡಗಳಲ್ಲಿ ದುಬಾರಿ ಬಾಡಿಗೆ ನೀಡಲಾಗುತ್ತಿದೆ. ಸಿಡಿಪಿಒ ಇಲಾಖೆ ಕಚೇರಿಗೆ ಪ್ರತಿ ತಿಂಗಳು 20 ಸಾವಿರ ರೂ. ಬಾಡಿಗೆ ಪಾವತಿಸಲಾಗುತ್ತಿದೆ, ಬಿಸಿಎಂ ಇಲಾಖೆ ಕಚೇರಿಗೆ 12 ಸಾವಿರ ರೂ., ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ 5400 ರೂ. ಸೇರಿದಂತೆ ಇತರ ಬಾಡಿಗೆ ಕಟ್ಟಡದಲ್ಲಿರುವ ಇಲಾಖೆಗಳಿಗೂ ದುಬಾರಿ ಬಾಡಿಗೆ ನೀಡಲಾಗುತ್ತದೆ.

ಕೆಲವೊಂದು ಇಲಾಖೆ ಕಚೇರಿಗಳು ಜನರಿಗೆ ಗೊತ್ತೇ ಇಲ್ಲ: ಬಾಡಿಗೆ ಕಟ್ಟಡಗಳಲ್ಲಿದ್ದರೂ ಕೂಡ ಇಲಾಖೆಗಳ ಕಚೇರಿಗಳು ಜನರಿಗೆ ಗೊತ್ತಾಗುವ ಅಥವಾ ಜನನಿಬೀಡ ಸ್ಥಳಗಳಲ್ಲಿ ಇರಬೇಕು. ಆದರೆ ಕೆಲವೊಂದು ಇಲಾಖೆಗಳ ಕಚೇರಿಗಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಲ್ಲಿಗಳಲ್ಲಿ ಅಲೆದಾಡಿ ಹುಡುಕಾಡಿದರು ಇಲಾಖೆಗಳ ಕಚೇರಿಗಳು ಕಾಣುವುದಿಲ್ಲ. ಹೀಗಾಗಿ ಪಟ್ಟಣದಲ್ಲಿರುವ ಕೆಲವೊಂದು ಇಲಾಖೆಗಳ ಕಚೇರಿಗಳು ಕಾಣುವುದೇ ಇಲ್ಲ. 

ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ, ರೇಷ್ಮೆ ಇಲಾಖೆ ಸೇರಿದಂತೆ ಅನೇಕ ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ. ಅವು ಕೂಡ ಒಂದರ ಮೇಲೊಂದರಂತೆ ಖಾಸಗಿ ಕಟ್ಟಡಗಳು ಬದಲಾವಣೆಯಾಗುತ್ತವೆ ಇದರಿಂದ ನಮಗೆ ಭಾರಿ ಸಮಸ್ಯೆ ಆಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ನಿವೇಶನ ಇಲ್ಲದ್ದರಿಂದ ಖಾಸಗಿ ಕಟ್ಟಡಗಳಲ್ಲಿ ಕೆಲವೊಂದು ಇಲಾಖೆಗಳು ಬಾಡಿಗೆ ಇವೆ. ಹಿಂದಿನ ಶಾಸಕರು ಕಲಬುರಗಿ ರಸ್ತೆಗೆ ನೀರಾವರಿ ಇಲಾಖೆಗೆ ಸೇರಿದ ನಿವೇಶನ ತೋರಿಸಿದ್ದಾರೆ. ಅದು ಸರ್ಕಾರದ ಮಟ್ಟದಲ್ಲಿದ್ದು, ಪರವಾನಗಿ ದೊರೆತ ಬಳಿಕ ಇಲಾಖೆಗಳ ಕಟ್ಟಡ ಕಾಮಗಾರಿ ಆರಂಭವಾಗಲಿದೆ.
ಇಸ್ಮಾಯಿಲ್‌ ಮುಲ್ಕಿಸಿಪಾಯಿ, ತಹಶೀಲ್ದಾರ್‌

ಪಟ್ಟಣದಲ್ಲಿರುವ ಸರ್ಕಾರಿ ನಿವೇಶನಗಳನ್ನು ಗುರುತಿಸಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ
ಸರ್ಕಾರಿ ಕಚೇರಿ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. 
ಎಂ.ವೈ. ಪಾಟೀಲ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next