Advertisement

ಗ್ರಾಪಂ ಕ್ಲರ್ಕ್‌ ಶವವಿಟ್ಟು ಪ್ರತಿಭಟನೆ

11:38 AM Jan 09, 2020 | Naveen |

ಅಫಜಲಪುರ: ತಾಲೂಕಿನ ಕೋಗನೂರ ಗ್ರಾ.ಪಂ ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರೊಬ್ಬರು ಪಿಡಿಒ ಹಾಗೂ ಕೆಲವು ಗ್ರಾಪಂ ಸದಸ್ಯರು ನೀಡಿದ ಕಿರುಕುಳದಿಂದ ರಕ್ತದೊತ್ತಡ ಹೆಚ್ಚಾಗಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ, ಗ್ರಾಪಂ ಎದುರು ಶವವನ್ನಿಟ್ಟು ಪ್ರತಿಭಟನೆ ಮಾಡಲಾಯಿತು.

Advertisement

ಜಾಲೇಂದ್ರನಾಥ ಜಮಾದಾರ (41) ಎನ್ನುವರು ಮೃತಪಟ್ಟವರು. ಪ್ರತಿಭಟನೆಯಲ್ಲಿ ಮಾತನಾಡಿದ ಅವರ ಪತ್ನಿಯರಾದ ಯಶೋಧಾ ಹಾಗೂ ಮಾಧುರಿ, ಪಿಡಿಒ ಸಿದ್ದರಾಮ ಬಬಲೇಶ್ವರ, ಗ್ರಾಪಂ ಸದಸ್ಯರಾದ ಶರಣು ಪಡಶೆಟ್ಟಿ, ವಿಶ್ವನಾಥ ಚೋಡೋಜಿ, ಶಿವರುದ್ರ ಶೆಗಜಿ ಎನ್ನುವವರು ನಮ್ಮ ಪತಿಗೆ ಮಾನಸಿಕವಾಗಿ ಕಿರುಕುಳ ಕೊಟ್ಟಿದ್ದರು. ಇದರಿಂದಾಗಿ ಮನನೊಂದಿದ್ದ ಅವರಿಗೆ ರಕ್ತದೊತ್ತಡ ಹೆಚ್ಚಾಗಿತ್ತು. ಕಳೆದ ಎರಡು ವರ್ಷದಿಂದ ವೇತನ ನೀಡದೇ ಸತಾಯಿಸಲಾಗಿತ್ತು. ನಮಗೆ ಇಬ್ಬರು ಪುತ್ರಿಯರಿದ್ದಾರೆ. ಯಾವುದೇ ಆಸ್ತಿ ಇಲ್ಲ, ನಾವು ಈಗ ಜೀವನ ನಡೆಸುವುದು ಹೇಗೆ? ನಮ್ಮ ಪತಿಯ ಸಾವಿಗೆ ನ್ಯಾಯ ಬೇಕು ಎಂದು ಆಗ್ರಹಿಸಿದರು.

ಡಾಟಾ ಎಂಟ್ರಿ ಆಪರೇಟರ್‌ಗಳ ಸಂಘದ ಜಿಲ್ಲಾಧ್ಯಕ್ಷ ಮಲಕಯ್ಯ ಎಂ. ಹಿರೇಮಠ ಮಾತನಾಡಿ, ಜಾಲಿಂದ್ರನಾಥ ಜಮಾದಾರ ಅವರಿಗೆ ಇಲ್ಲಿನ ಪಿಡಿಒ ಸಿದ್ದರಾಮ ಬಬಲೇಶ್ವರ ಮಾನಸಿಕ ಹಿಂಸೆ ನೀಡಿದ್ದಲ್ಲದೆ 36 ತಿಂಗಳಿಂದ ವೇತನ ನೀಡಲು ಸಹಕರಿಸಿಲ್ಲ. ಗ್ರಾ.ಪಂ ಪಾಸವರ್ಡ್‌ ನೀಡಲು ಸಹಕರಿಸದೇ ಉದ್ದೇಶಪೂರ್ವಕವಾಗಿ ಪಂಚತಂತ್ರದಲ್ಲಿ ಹೆಸರು ತೆಗೆದು ಅಮಾನವೀಯ ಕೆಲಸ ಮಾಡಿದ್ದಾರೆ.

ಈ ಕುರಿತಂತೆ ಜಾಲಿಂದ್ರನಾಥ ಸಾಕಷ್ಟು ಬಾರಿ ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಕಾರಣಕ್ಕೆ ಅವರ ರಕ್ತದೊತ್ತಡ ಹೆಚ್ಚಾಗಿ ಮೃತಪಟ್ಟಿದ್ದಾರೆ. ಹೀಗಾಗಿ ಅವರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೇ ಸಂಘದ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ತಾ.ಪಂ ಕಾರ್ಯನಿರ್ವಾಹಕ ಅಧಿ ಕಾರಿ ಬಿ. ಗೋಪಾಲಕೃಷ್ಣ ಪ್ರತಿಕ್ರಿಯಿಸಿ, ಈಗಾಗಲೇ ಪಿಡಿಒಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ. ಮೃತರ ಬಾಕಿ ಇರುವ ಸಂಬಳ ಹಾಗೂ ಅನುಕಂಪದ ಆಧಾರದ ಮೇಲೆ ಕುಟುಂಬದ ಒಬ್ಬ ಸದಸ್ಯರನ್ನು ಸೇವೆಗೆ ತೆಗೆದುಕೊಳ್ಳುವಂತೆ ಮೇಲಧಿ ಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

Advertisement

ಸಂಘದ ಪದಾಧಿ ಕಾರಿಗಳಾದ ಸಂತೋಷ ಶೀಲವಂತ, ಗೌರಿಶಂಕರ ಸೊನ್ನ, ನಿತೀನ್‌ ಆಯ್‌. ರಡ್ಡಿ, ಸುರೇಶ ಶೃಂಗೇರಿ, ಅಮೃತ ಎಸ್‌. ಕಟ್ಟಿಮನಿ, ಡೇಟಾ ಎಂಟ್ರಿ ಆಪರೇಟರ್‌ಗಳಾದ ಗೌರಿಶಂಕರ ಸೊನ್ನ, ಸೈಫನ್‌ ದೇವರಮನಿ, ಶ್ರೀಕಾಂತ ದೊಡ್ಮನಿ, ಅರುಣ ಜಮಾದಾರ, ಸುರೇಶ ಅವರಳ್ಳಿ, ಸುನೀಲ ಹೂಮನ್‌, ದತ್ತು ಯಂಕಂಚಿ, ರಮೇಶ ನಾಟೀಕಾರ ಮುಂತಾದವರು ಪ್ರತಿಭಟಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು.

ಗ್ರಾ.ಪಂ ಪಿಡಿಒ ವಜಾಗೊಳಿಸಲು ಮತ್ತು ಮೃತನ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಧನ ನೀಡಬೇಕು. ಮೃತನ ಮನೆಯ ಒಬ್ಬರನ್ನು ಪಂಚಾಯಿತಿಯಲ್ಲಿ ಖಾಯಂ ನೌಕರಿಗೆ ತೆಗೆದುಕೊಳ್ಳಬೇಕು ಎಂದು ಮುಖಂಡರಾದ ಶಂಕರ ಮ್ಯಾಕೇರಿ, ಅವ್ವಣ್ಣ ಮ್ಯಾಕೇರಿ, ದೇವೆಂದ್ರ ಜಮಾದಾರ, ರಾಜು ಉಕ್ಕಲಿ, ವಿಠuಲ ನಾಟೀಕಾರ, ದಿಗಂಬರ ಕಾಡಪ್ಪಗೋಳ, ಮಹಾಂತೇಶ ಬಡಿಗೇರ, ಅವಧೂತ ಬನ್ನೆಟ್ಟಿ ಆಗ್ರಹಿಸಿದರು.

ಗ್ರಾ.ಪಂ ಅಧ್ಯಕ್ಷ ಮಹಾಂತಯ್ಯ ಹಿರೇಮಠ ಸದಸ್ಯರಾದ ಲಕ್ಷ್ಮಣ ಇಮ್ಮನ್‌, ವಿಜಯಕುಮಾರ ಜಂಬೆನಾಳ ಇದ್ದರು. ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿ, ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಸಿಪಿಐ ಮಹಾದೇವ ಪಂಚಮುಖೀ ನೇತೃತ್ವದ ತಂಡ ಪರಿಸ್ಥಿತಿ ಶಾಂತಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next