ಅಫಜಲಪುರ: ಎಸ್ಸೆಸ್ಸೆಲ್ಸಿ, ಪಿಯುಸಿ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಜಿಲ್ಲೆಗೆ ಮೊದಲ ಸ್ಥಾನದಲ್ಲಿ ಬರುವ ಮೂಲಕ ಶೈಕ್ಷಣಿಕ ಹಬ್ ಆಗಿ ಅಫಜಲಪುರ ಬೆಳೆಯುತ್ತಿದೆ ಎಂದು ಎಚ್‌ಕೆಇ ಸಂಸ್ಥೆಯ ನಿರ್ದೇಶಕ ಅರುಣಕುಮಾರ ಪಾಟೀಲ್ ಹೇಳಿದರು.
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ, ಇನ್ಫೋಸಿಸ್ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಕಾಲೇಜಿಗೆ ಬಂದ ಕಂಪ್ಯೂಟರ್‌ಗಳ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು.
ಡಿಪ್ಲೊಮಾ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ. ಮತಕ್ಷೇತ್ರದ ಫಿರೋಜಾಬಾದ್ ಬಳಿ 1500 ಎಕರೆಯಲ್ಲಿ ಟೆಕ್ಟ್‌ಟೈಲ್ ಪಾರ್ಕ್ ಸ್ಥಾಪನೆಯಾಗಲಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಲಿದೆ. ಹೀಗಾಗಿ ಶ್ರದ್ಧೆಯಿಂದ ಓದಿ ಎಂದು ಸಲಹೆ ನೀಡಿದರು.
ಪಾಲಿಟೆಕ್ನಿಕ್ ಅಫಜಲಪುರಕ್ಕೆ ಬಂದಿರಲಿಲ್ಲ. ರಾಮನಗರಕ್ಕೆ ಮಂಜೂರಾಗಿತ್ತು. ಆಗಿನ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮನವೊಲಿಸಿ ಅಫಜಲಪುರಕ್ಕೆ ಕಾಲೇಜು ತಂದಿದ್ದು, ನಮ್ಮ ತಂದೆ ಶಾಸಕ ಎಂ.ವೈ. ಪಾಟೀಲ್ ಅವರು. ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಬಹಳ ಒತ್ತು ನೀಡುತ್ತಾರೆ. ಹೀಗಾಗಿ ತಾಲೂಕಿನಾದ್ಯಂತ ಶಾಲಾ ಕಾಲೇಜುಗಳ ಸ್ಥಾಪನೆ, ಮೂಲ ಸೌಕರ್ಯ ಕಲ್ಪಿಸುವಲ್ಲಿ ಹಿಂದೆ ಬೀಳುವುದಿಲ್ಲ. ಅವರ ಪ್ರಯತ್ನದ ಫಲವಾಗಿ ಕೆಕೆಆರ್ ಡಿಬಿ ಯೋಜನೆ ಅಡಿ 6 ಕೋಟಿ ವೆಚ್ಚದಲ್ಲಿ 14 ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಆಗಲಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೂ ಅನುಕೂಲವಾಗಲಿದೆ ಎಂದರು.
ರೋಟರಿ ಕ್ಲಬ್ ಡಿಜಿಎನ್ ಮಾಣಿಕ ಪವಾರ ಮಾತನಾಡಿ, ಶತಮಾನಗಳಷ್ಟು ಹಳೆಯದಾದ ರೋಟರಿ ಕ್ಲಬ್ ಜಗತ್ತಿನ 164 ದೇಶಗಳಲ್ಲಿ ಕೆಲಸ ಮಾಡುತ್ತಿದೆ. 14 ಲಕ್ಷಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಇನ್ಫೋಸಿಸ್ ಸಹಕಾರದೊಂದಿಗೆ ಕಾಲೇಜುಗಳಿಗೆ ಕಂಪ್ಯೂಟರ್ ವಿತರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಪ್ರಾಚಾರ್ಯ ಮಲ್ಲಿಕಾರ್ಜುನಪ್ಪ ಶಾವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿವಕುಮಾರ ಕಲ್ಯಾಣಿ, ಡಾ| ಅನಿಲ್, ಸಿದ್ದಪ್ಪ ತಳವಾರ, ಸುನಿತಾ ಕುಮಾರಿ, ನವ್ಯ ಎನ್, ಅಂಬರೀಷ ಬುರಲಿ, ವಿಜಯಕುಮಾರ ಮಾಡಗಿ, ಜಗದೀಶ ಗಾಜರೆ, ಸೌಮ್ಯ ಗಾಜರೆ, ಸುವರ್ಣ ಕಲ್ಯಾಣಿ, ಪ್ರಕಾಶ ರಾಠೊಡ, ಅನುರಾಧಾ, ಮಾಜೀದ್ ಪಟೇಲ್ ಇದ್ದರು.