ಅಫಜಲಪುರ: ಕೊರೊನಾ ವೈರಸ್ ಭೀತಿ ಎಲ್ಲೆಡೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ವಾರದ ಸಂತೆ ಮಾಡುವಂತಿಲ್ಲ ಎಂದು ನಿಷೇಧಿಸಿದೆ. ಆದರೆ, ತಾಲೂಕಿನಾದ್ಯಂತ ವಾರದ ಸಂತೆಗಳು ಯಥಾ ಸ್ಥಿತಿಯಲ್ಲಿ ನಡೆಯುತ್ತಿವೆ.
ತಾಲೂಕಿನ ಭೋಸಗಾ ಗ್ರಾಮದಲ್ಲಿ ನೂತನವಾಗಿ ವಾರದ ಸಂತೆ ಆರಂಭ ಮಾಡಲಾಗಿದೆ. ಗ್ರಾಮದಲ್ಲಿ ವಾರದ ಸಂತೆ ಆರಂಭವಾಗಿದ್ದರಿಂದ ಗ್ರಾಮಸ್ಥರಲ್ಲಿ ಖುಷಿ ಮೂಡಿದೆ. ಆದರೂ ಕೊರೊನಾ ವೈರಸ್ ಭೀತಿ ಇರುವ ಸಂದರ್ಭದಲ್ಲಿ ವಾರದ ಸಂತೆ ಆರಂಭಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಜ್ಞಾವಂತರು ಪ್ರಶ್ನಿಸಿದ್ದಾರೆ.
ಬಂದರವಾಡ ಗ್ರಾಮದಲ್ಲಿ ಸಂತೆ ಯಥಾಸ್ಥಿತಿ ನಡೆಸಿಕೊಂಡು ಬರಲಾಗುತ್ತಿದೆ. ಕೊರೊನಾ ವೈರಸ್ ಹರಡುವ ಭೀತಿ ಇರುವುದರಿಂದ ವಾರದ ಸಂತೆಗಳನ್ನು ನಿಷೇಧ ಮಾಡಿರುವ ತಾಲೂಕು ಆಡಳಿತದ ಆದೇಶ ಉಲ್ಲಂಘಿಸಿ ಯಥಾಸ್ಥಿತಿಯಾಗಿ ವಾರದ ಸಂತೆ ನಡೆಸಲಾಗುತ್ತಿದೆ. ಬಂದರವಾಡದಲ್ಲಿ ಪ್ರತಿ ಮಂಗಳವಾರಕ್ಕೊಮ್ಮೆ ವಾರದ ಸಂತೆ ನಡೆಯುತ್ತಿದ್ದು, ಗ್ರಾಮಸ್ಥರು, ವಿವಿಧ ಗ್ರಾಮಗಳ ಸಾರ್ವಜನಿಕರು ವಾರದ ಸಂತೆಗೆ ಬಂದು ತರಕಾರಿ, ದಿನ ಬಳಕೆ ವಸ್ತುಗಳನ್ನು ಖರೀದಿಸಿದರು.
ಹೀಗಾಗಿ ಸಂಬಂಧ ಪಟ್ಟವರು ಕೂಡಲೇ ಜಾಗೃತರಾಗಿ ತಾಲೂಕಿನಾದ್ಯಂತ ನಡೆಯುವ ವಾರದ ಸಂತೆಗಳನ್ನು ಸ್ಥಗಿತ ಮಾಡಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.