Advertisement

Food: ಮಧ್ಯಾಹ್ನದ ಬಿಸಿಯೂಟ ಯೋಜನೆ ಆಹಾರ ಇಲಾಖೆ ತೆಕ್ಕೆಗೆ ?

11:12 PM Sep 15, 2023 | Team Udayavani |

ಬೆಂಗಳೂರು: ಶಾಲೆಗಳಿಗೆ ಪೂರೈಕೆ ಮಾಡುವ ಮಧ್ಯಾಹ್ನದ ಬಿಸಿಯೂಟ ಯೋಜನೆ ಆಹಾರ ಮತ್ತು ನಾಗರಿಕ ಪೂರೈಕೆ ಲಾಖೆ ವ್ಯಾಪ್ತಿಗೆ ವರ್ಗಾವಣೆಯಾಗುವ ಸಾಧ್ಯತೆ ಬಗ್ಗೆ ಸರಕಾರದ ಹಂತದಲ್ಲಿ ಚರ್ಚೆ ಪ್ರಾರಂಭವಾಗಿದ್ದು, ಮುಂದಿನ ವಾರ ನಡೆಯುವ ಮಹತ್ವದ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗುವ ಸಾಧ್ಯತೆ ಇದೆ.

Advertisement

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ನೇತೃತ್ವದಲ್ಲಿ ಜರಗಿದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಬಿಸಿಯೂಟ ಯೋಜನೆಗೆ ಈಗಿರುವುದಕ್ಕಿಂತ ಗುಣಮಟ್ಟದ ಅಕ್ಕಿ ಪೂರೈಕೆ ಮಾಡುವಂತೆ ಶಿಕ್ಷಣ ಇಲಾಖೆ ಮನವಿ ಮಾಡಿದೆ. ಆದರೆ ಇದಕ್ಕೆ ಅನುದಾನದ ಕೊರತೆ ಸೃಷ್ಟಿಯಾಗಲಿದೆ. ಹೀಗಾಗಿ ಯೋಜನೆಯನ್ನು ನಮ್ಮ ವ್ಯಾಪ್ತಿಗೆ ವರ್ಗಾಯಿಸುವಂತೆ ಆಹಾರ ಇಲಾಖೆ ಪ್ರಸ್ತಾವ ಮುಂದಿಟ್ಟಿದೆ. ಈ ಬಗ್ಗೆ ಸಹಮತ ಮೂಡದ ಹಿನ್ನೆಲೆಯಲ್ಲಿ ಮತ್ತೂಂದು ಸುತ್ತಿನ ಸಭೆ ನಡೆಸಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ.

9ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪಡಿತರ ವ್ಯವಸ್ಥೆಯಲ್ಲಿ ಹಾಗೂ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಎಫ್ಸಿಐನಿಂದ ಇ-ಹರಾಜು ಮೂಲಕ ಖರೀದಿಸಲಾಗುತ್ತದೆ. ರಾಜ್ಯದ ಪಡಿತರ ವ್ಯವಸ್ಥೆ ಮೂಲಕ ಪ್ರತಿ ಕೆಜಿಗೆ 34 ರೂ.ನಂತೆ ಅಕ್ಕಿ ಖರೀದಿಸಿದರೆ, ಎಫ್ಸಿಐನಿಂದ ಪಡೆಯುವ ಅಕ್ಕಿಗೆ ಪ್ರತಿ ಕೆಜಿಗೆ 26 ರೂ. ನೀಡಲಾಗುತ್ತಿದೆ. ಆದರೆ ಗುಣಮಟ್ಟದ ಅಕ್ಕಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಹೆಚ್ಚಿನ ದರ ನಿಗದಿ ಮಾಡುವುದಾಗಿ ಹೇಳಿದೆ. ಇದರಿಂದ ಇಲಾಖೆಗೆ ಹೆಚ್ಚಿನ ಹೊರೆ ಬೀಳುತ್ತದೆ ಎಂಬ ವಾದ ಮಂಡಿಸಲಾಗಿದೆ. ಹೀಗಾಗಿ ಬಿಸಿಯೂಟ ಯೋಜನೆಯನ್ನೇ ನಮ್ಮ ವ್ಯಾಪ್ತಿಗೆ ವರ್ಗಾಯಿಸಿ ಎಂಬ ಪ್ರಸ್ತಾವ ಇಡಲಾಗಿದೆ ಎಂದು ತಿಳಿದು ಬಂದಿದೆ.

ಸಭೆ ಬಳಿಕ ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ, ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪಡಿತರ ವ್ಯವಸ್ಥೆ ಅಡಿಯಲ್ಲಿ ತರುವ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಮಕ್ಕಳಿಗೆ ಪೂರೈಕೆ ಮಾಡುವ ಆಹಾರದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಬಿಸಿಯೂಟ ಯೋಜನೆಗೆ ಅಕ್ಕಿ ಕೊರತೆ ಇಲ್ಲ: ಮಧು
ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಅಕ್ಕಿ ಕೊರತೆ ಇಲ್ಲ. ಶಾಲೆಗಳಿಗೆ ಗುಣಮಟ್ಟದ ಅಕ್ಕಿ ಪೂರೈಸುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಅಕ್ಕಿ ಪೂರೈಕೆ ಸಂಬಂಧಿಸಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿ ಗುಣಮಟ್ಟವನ್ನು ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು. ಈ ಹಿಂದೆ ವಿದ್ಯಾರ್ಥಿಗಳಿಗೆ ಒಂದು ಮೊಟ್ಟೆ ಕೊಡುತ್ತಿದ್ದರು. ನಾವು ಬಂದ ಮೇಲೆ ಎರಡು ಮೊಟ್ಟೆ ಕೊಡುತ್ತಿದ್ದೇವೆ. ಇಲಾಖೆಗೆ ಸಂಬಂಧಪಟ್ಟಂತೆ ಕಟ್ಟಡ ನಿರ್ಮಾಣ, ಶಿಕ್ಷಕರ ಕೊರತೆ ನೀಗಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ಮೊಟ್ಟೆ, ಬಾಳೆ ಹಣ್ಣು, ಚಿಕ್ಕಿಯನ್ನು ನಾವೇ ಕೊಡುತ್ತಿದ್ದೇವೆ. ಫ‌ುಡ್‌ ಪ್ರೊಟೀನ್‌ ಬಗ್ಗೆ ಅಜೆಂಡಾ ಕೊಟ್ಟಿದ್ದೇವೆ. ಆಹಾರದ ಕೊರತೆ ನಮ್ಮ ಇಲಾಖೆಗೆ ಇಲ್ಲ ಎಂದು ಹೇಳಿದರು.

Advertisement

ಕೆಲವೆಡೆ ಅನ್ನ ಸರಿಯಾಗಿ ಬೆಂದಿರುವುದಿಲ್ಲ, ಬೇಳೆ ಸರಿ ಇರುವುದಿಲ್ಲ ಎಂಬ ಆರೋಪಗಳಿವೆ. ಅದಕ್ಕೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇರುವ ಆಹಾರ ಪದ್ಧತಿ ಆಧರಿಸಿ ಬಿಸಿಯೂಟ ನೀಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next