ಹೊಸದಿಲ್ಲಿ : ಕಪ್ತಾನ ವಿರಾಟ್ ಕೊಹ್ಲಿ ಅವರು ಹೆಗಲು ನೋವಿನಿಂದಾಗಿ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಆಡಲಾರರು ಎಂಬ ಆಘಾತಕಾರಿ ಸುದ್ದಿ ಬಹಿರಂಗವಾದ ಮರುದಿನವೇ ಈಗ ಕೆ ಎಲ್ ರಾಹುಲ್ ಕೂಡ ಹೆಗಲು ನೋವಿನಿಂದಾಗಿ 2017ರ ಐಪಿಎಲ್ ಕೂಟದಿಂದಲೇ ಹೊರಬಿದ್ದಿರುವ ಆಘಾತಕಾರಿ ವಿಷಯ ಬಹಿರಂಗವಾಗಿದೆ. ಇದರಿಂದಾಗಿ ಆರ್‌ಸಿಬಿ ತಂಡಕ್ಕೆ ಭಾರೀ ಹೊಡೆತ, ಹಿನ್ನಡೆ ಉಂಟಾಗಿದೆ.
ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ಮಾಡಿರುವ ವರದಿಯ ಪ್ರಕಾರ 24ರ ಹರೆಯದ ರಾಹುಲ್ ಶಸ್ತ್ರ ಚಿಕಿತ್ಸೆಗಾಗಿ ಸದ್ಯದಲ್ಲೇ ಲಂಡನ್‌ಗೆ ಪ್ರಯಾಣಿಸಲಿದ್ದಾರೆ.
ರಾಹುಲ್‌ಗೆ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೇ ಗಾಯ ಉಂಟಾಗಿತ್ತು. ಆದರೂ ಅವರು ನೋವನ್ನು ಸಹಿಸಿಕೊಂಡು ಸರಣಿಯ ಉಳಿದ ಪಂದ್ಯಗಳನ್ನು ಆಡಿದ್ದರು.
ಆಸ್ಟ್ರೇಲಿಯ ಎದುರಿನ ಈಗಷ್ಟೇ ಮುಗಿದಿರುವ ನಾಲ್ಕು ಪಂದ್ಯಗಳ ಸರಣಿಯಲ್ಲಿ ಕೆ ಎಲ್ ರಾಹುಲ್ ಆರು ಅರ್ಧ ಶತಕಗಳನ್ನು ಬಾರಿಸಿ ಮಿಂಚಿದ್ದರು. ಭಾರತವು ಈ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ವಿಕ್ರಮ ಮೆರೆದಿತ್ತು.
ಕಪ್ತಾನ ವಿರಾಟ್ ಕೊಹ್ಲಿ ಹೆಗಲು ನೋವಿನಿಂದಾಗಿ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.