ಕೈರೋ:ಭಾರತದಲ್ಲಿ ಕೋವಿಡ್ 19 ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಕುವೈಟ್ ಸರಕಾರ ಕೂಡಾ ಭಾರತದಿಂದ ಆಗಮಿಸುವ ವಾಣಿಜ್ಯ ನಾಗರಿಕ ವಿಮಾನ ಸಂಚಾರ ರದ್ದುಪಡಿಸಿರುವುದಾಗಿ ಶನಿವಾರ(ಏಪ್ರಿಲ್ 24) ತಿಳಿಸಿದೆ.
ಇಂದಿನಿಂದ ಅನ್ವಯವಾಗುವಂತೆ ಭಾರತದಿಂದ ಕುವೈಟ್ ಗೆ ಆಗಮಿಸುವ ಎಲ್ಲಾ ವಾಣಿಜ್ಯ ನಾಗರಿಕ ವಿಮಾನ ಸಂಚಾರವನ್ನು ರದ್ದುಗೊಳಿಸಿದ್ದು, ಮುಂದಿನ ಆದೇಶದವರೆಗೂ ಈ ನಿರ್ಬಂಧ ಮುಂದುವರಿಯಲಿದೆ ಎಂದು ಕುವೈಟ್ ನ ನಾಗರಿಕ ವಿಮಾನಯಾನದ ಡೈರೆಕ್ಟರೇಟ್ ಜನರಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಜಾಗತಿಕವಾಗಿ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಆರೋಗ್ಯ ಸಚಿವಾಲಯದ ಸೂಚನೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದೆ.
ಭಾರತದಿಂದ ನೇರವಾಗಿ ಅಥವಾ ಇತರ ದೇಶಗಳಿಂದ ಆಗಮಿಸುವ ಎಲ್ಲಾ ಪ್ರಯಾಣಿಕರನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ. ಕುವೈಟ್ ನಾಗರಿಕರು, ದೇಶೀಯ ಉದ್ಯೋಗಿಗಳ ಸಂಚಾರಕ್ಕೆ ಅನುಮತಿ ಇದೆ. ಕಾರ್ಗೋ(ಸರಕು ಸಾಗಾಣೆ ವಿಮಾನ) ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ವರದಿ ತಿಳಿಸಿದೆ.
ಈಗಾಗಲೇ ಭಾರತದಿಂದ ಆಗಮಿಸುವ ವಿಮಾನಗಳಿಗೆ ಯುಎಇ, ಕೆನಡಾ, ಇಂಗ್ಲೆಂಡ್ ಕೂಡಾ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದು, ಇದೀಗ ಕುವೈಟ್ ಕೂಡಾ ವಿಮಾನ ಸಂಚಾರಕ್ಕೆ ನಿಷೇಧ ಹೇರಿದೆ ಎಂದು ವರದಿ ವಿವರಿಸಿದೆ.