ವಾಷಿಂಗ್ಟನ್: ಟ್ವಿಟರ್ ನಂತೆ ಫೇಸ್ ಬುಕ್ ಮೆಟಾ ಕೂಡ ವೆರಿಫೈಡ್ ಖಾತೆಗಳಿಗೆ ಮಾಸಿಕ ಶುಲ್ಕವನ್ನು ವಿಧಿಸುವ ಯೋಜನೆಯನ್ನು ಶೀಘ್ರ ಆರಂಭಿಸುವುದಾಗಿ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಭಾನುವಾರ ಘೋಷಿಸಿದ್ದಾರೆ.
ಈ ಬಗ್ಗೆ ಜುಕರ್‌ಬರ್ಗ್ ಈ ವಾರ ನಾವು ಮೆಟಾ ವೆರಿಫೈಡ್ ಖಾತೆಗಳಿಗೆ ಶುಲ್ಕವನ್ನು ವಿಧಿಸುವ ಯೋಜನೆಯನ್ನು ಆರಂಭಿಸಲಿದ್ದೇವೆ ಎಂದು ಹೇಳಿದ್ದಾರೆ.
ಏನೇನು ಇರಲಿದೆ?: ಈಗಾಗಲೇ ವೆರಿಫೈಡ್ ಆಗಿರುವ ಖಾತೆಗಳಿಗೆ ತಿಂಗಳಿಗೆ ಇಂತಿಷ್ಟು ಶುಲ್ಕವನ್ನು ವಿಧಿಸಬೇಕಾಗುತ್ತದೆ. ಅಥವಾ ಹೊಸದಾಗಿ ವೆರಿಪೈಡ್ ಆಗುವ ಖಾತೆಗಳು ಶುಲ್ಕವನ್ನು ಪಾವತಿಸಬೇಕು.ಇದರಲ್ಲಿ ಸರ್ಕಾರಿ ದಾಖಲೆಗಳನ್ನು ಪಡೆದುಕೊಂಡು ಖಾತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ವೆರಿಫೈಡ್ ಬ್ಯಾಡ್ಜ್ ನ್ನು ನೀಡಲಾಗುತ್ತದೆ. ನಕಲಿ ಖಾತೆಯಿಂದ ರಕ್ಷಣೆ ಸಿಗಲಿದೆ. ಉತ್ತಮ ಗ್ರಾಹಕ ಸೇವೆ ಸಿಗಲಿದೆ. ಹೆಚ್ಚು ಜನರಿಗೆ ಖಾತೆ ತಲುಪಲಿದೆ. ಸ್ಟೋರಿ ಹಾಗೂ ಸ್ಟಿಕರ್ ಗಳಲ್ಲಿ ಹೆಚ್ಚಿನ ಫೀಚರ್ಸ್ ಗಳು ಸಿಗಲಿವೆ. ಆದರೆ ಈ ವೆರಿಫೈಡ್ ಖಾತೆಗಳಲ್ಲಿ ಜಾಹೀರಾತುಗಳಿಗೆ ಯಾವುದೇ ಮಿತಿಯನ್ನು ಹಾಕಿಲ್ಲ.
ಇದನ್ನೂ ಓದಿ: ವಿವಾಹಕ್ಕೆ ನಿರಾಕರಿಸಿದ ಅಪ್ರಾಪ್ತೆಗೆ ಹಲ್ಲೆ: ಜುಟ್ಟು ಹಿಡಿದು ಎಳೆದೊಯ್ದ 47 ವರ್ಷದ ವ್ಯಕ್ತಿ
ಶುಲ್ಕವೆಷ್ಟು? : ಆರಂಭಿಕವಾಗಿ ವೆರಿಫೈಡ್ ಖಾತೆಗಳಿಗೆ ಮಾಸಿಕ ಶುಲ್ಕ ವಿಧಿಸುವ ಯೋಜನೆಯನ್ನು ನ್ಯೂಜಿಲೆಂಡ್, ಆಸ್ಟ್ರೇಲಿಯಾದಲ್ಲಿ ಜಾರಿ ಮಾಡಲಾಗುತ್ತದೆ. ವೆಬ್ ನಲ್ಲಿ ಮಾಸಿಕವಾಗಿ $11.99 (ಸುಮಾರು ರೂ 990) ರೂ. , ಐಫೋನ್ ನಲ್ಲಿ $14.99 (ಸುಮಾರು ರೂ 1,240) ರೂ.ವನ್ನು ನಿಗದಿಪಡಿಸಲಾಗಿದೆ.
ಭಾರತದಲ್ಲಿ ಇದುವರೆಗೆ ಇದರ ಬೆಲೆ ಎಷ್ಟು ಇರಬಹುದು ಎನ್ನುವುದನ್ನು ಅಂದಾಜಿಸಿಲ್ಲ. ಒಂದು ವೇಳೆ 1200 ರೂ ಇದ್ದರೆ, ಟ್ವಿಟರ್ ನ 900 ರೂ. ಗಿಂತ ದುಬಾರಿ ಆಗುತ್ತದೆ. ಮುಂದಿನ ದಿನಗಳಲ್ಲಿ ಇದರ ಬೆಲೆ ಎಷ್ಟಿರಬಹುದು ಎಂದು ಕಾದುನೋಡಬೇಕಿದೆ.
ಫೇಸ್ ಬುಕ್ ನೊಂದಿಗೆ, ಇನ್ಸ್ಟಾಗ್ರಾಮ್ ಗೂ ಇದು ಅನ್ವಯವಾಗಲಿದೆ.