Advertisement
ಐಐಟಿಯಂಥ ಮಹತ್ವದ ಸಂಸ್ಥೆಯಂತೆ ಏಮ್ಸ್ ಕೂಡ ಧಾರವಾಡ ಪಾಲಾಗುವ ಲಕ್ಷಣಗಳು ದಟ್ಟವಾಗಿದ್ದು, ಜಿಲ್ಲೆಗೆ ಮತ್ತೊಮ್ಮೆ ಅನ್ಯಾಯವಾಗುತ್ತಿದೆ. ಶತಾಯ ಗತಾಯ ಜಿಲ್ಲೆಗೆ ಏಮ್ಸ್ ತಂದೇ ತರುತ್ತೇವೆ ಎಂದು ಜಂಬ ಕೊಚ್ಚಿಕೊಂಡಿದ್ದ ಜಿಲ್ಲೆಯ ಜನಪ್ರತಿನಿಧಿಗಳು ಅನಗತ್ಯ ಕಾಲಕ್ಷೇಪ ಮಾಡಿದ್ದು, ಸದ್ದಿಲ್ಲದೇ ಧಾರವಾಡದಲ್ಲಿ ಏಮ್ಸ್ ಸ್ಥಾಪನೆಗೆ ತಜ್ಞರ ತಂಡ ಸ್ಥಳ ಪರಿಶೀಲನೆ ಮಾಡಿದೆ ಎಂದು ತಿಳಿದು ಬಂದಿದೆ. ಆ ಮೂಲಕ ಜಿಲ್ಲೆಯ ಜನತೆಗೆ ಜನ ನಾಯಕರ ನಯವಂಚನೆ ಮುಂದುವರಿದಿದೆ.
Related Articles
Advertisement
ಬೇಡವಾದದ್ದು ಮಾತ್ರ ಲಭ್ಯ
ಈ ಹಿಂದೆ ಐಐಟಿ ಸಂಸ್ಥೆಯನ್ನು ಜಿಲ್ಲೆಗೆ ನೀಡಬೇಕು ಎನ್ನುವ ಕುರಿತು ದೊಡ್ಡ ಹೋರಾಟ ನಡೆಸಲಾಗಿತ್ತು. ಆಗಿನ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಮೂರು ಜಿಲ್ಲೆಗಳ ಹೆಸರು ಶಿಫಾರಸು ಮಾಡಿದ್ದರಿಂದ ಅದು ಧಾರವಾಡ ಪಾಲಾಯಿತು. ಆಗ ಜಿಲ್ಲೆಗೆ ಅನ್ಯಾಯವಾಗಿದ್ದು, ಏಮ್ಸ್ ನೀಡುವ ಮೂಲಕ ನ್ಯಾಯ ನೀಡಲಾಗುವುದು ಎಂದು ಜನಪ್ರತಿನಿಧಿಗಳು ವಿಶ್ವಾಸ ವ್ಯಕ್ತಪಡಿಸಿದ್ದರು.
ಈಗ ಅದು ಕೂಡ ಕೈ ತಪ್ಪುವ ಹಂತದಲ್ಲಿದೆ. ಈಚೆಗೆ ಟೆಕ್ಸ್‌ಟೈಲ್ ಪಾರ್ಕ್ ವಿಚಾರದಲ್ಲೂ ವಿಜಯಪುರ, ಕಲಬುರಗಿ ಜಿಲ್ಲೆಗಳ ಹೆಸರನ್ನು ಶಿಫಾರಸು ಮಾಡಲಾಗಿದೆ. ಆದರೆ, ಜಿಲ್ಲೆಗೆ ಬೇಡವಾದ ವೈಟಿಪಿಎಸ್ ಪವರ್ ಪ್ಲಾಂಟ್‌ನಂಥ ಯೋಜನೆಗಳು ನೀಡಲಾಗುತ್ತಿದೆ. ಇಎಸ್‌ಐ, ಜಯದೇವ ಹೃದ್ರೋಗ ಕೇಂದ್ರಗಳಂಥ ವೈದ್ಯಕೀಯ ಸಂಸ್ಥೆಗಳು ಮಾತ್ರ ಕಲಬುರಗಿ ಪಾಲಾಗುತ್ತಿವೆ.
ಇನ್ನೂ ಕಾಲ ಮಿಂಚಿಲ್ಲ
ರಾಜ್ಯ ಸರ್ಕಾರ ಶಿಫಾರಸು ಮಾಡಿದ ಮಾತ್ರಕ್ಕೆ, ಕೇಂದ್ರ ಸರ್ಕಾರ ಸ್ಥಳ ಪರಿಶೀಲನೆ ಮಾಡಿದ ತಕ್ಷಣ ಏಮ್ಸ್ ಸ್ಥಾಪನೆಯಾದಂತೆ ಅಲ್ಲ. ರಾಯಚೂರು ಜಿಲ್ಲೆಗೆ ಏಮ್ಸ್ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಗಟ್ಟಿ ನಿಲುವು ಪ್ರದರ್ಶಿಸಲು ಇನ್ನೂ ಕಾಲಾವಕಾಶ ಇದೆ. ಅದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಗಟ್ಟಿಯಾಗಿ ನಿಲ್ಲಬೇಕಿದೆ. ಧಾರವಾಡಕ್ಕೆ ಐಐಟಿ ನೀಡಿದ್ದು, ರಾಯಚೂರಿಗೆ ಏಮ್ಸ್ ಸ್ಥಳಾಂತರಿಸಲಿ ಎಂಬ ಹಕ್ಕೊತ್ತಾಯ ಮಾಡಬೇಕಿದೆ. ಸಂಸದರ ನೇತೃತ್ವದ ನಿಯೋಗ ಅವಿರತ ಶ್ರಮಿಸಬೇಕಿದೆ. ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳ ನೆಪ ಹೇಳುತ್ತಿದ್ದು, ಜಿಲ್ಲೆಯಲ್ಲಿ ಈಗಾಗಲೇ ಆ ಯೋಜನೆಗಳು ಜಾರಿಯಲ್ಲಿವೆ ಎಂದು ಮನವರಿಕೆ ಮಾಡಿಕೊಡಬೇಕಿದೆ. ಏಮ್ಸ್ ಕೇವಲ ಕರ್ನಾಟಕ ಮಾತ್ರವಲ್ಲದೇ ಆಂಧ್ರ, ತೆಲಂಗಾಣದ ಗಡಿಭಾಗದ ಜನರಿಗೆ ಅನುಕೂಲವಾಗಲಿದೆ ಎಂಬ ವಿಚಾರವನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಜಿಲ್ಲೆಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕಿದೆ.