ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಮನೆಯಲ್ಲಿ ಹೊಸ 2 ಸಾವಿರ ಮುಖಬೆಲೆಯ ಲಕ್ಷಾಂತರ ರೂ. ಹಾಗೂ ಅಕ್ರಮವಾಗಿ 4.78 ಕೋಟಿ ರೂ. ಪತ್ತೆಯಾದ ಪ್ರಕರಣದಲ್ಲಿ ಸಿಬಿಐ ಪೊಲೀಸರ ಬಂಧನಕ್ಕೆ ಒಳಾಗಿರುವ ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಂಗೆ ಫೆ.2ರ ನಂತರ ಅನ್ವಯವಾಗುವಂತೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ರಾಮಲಿಂಗಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ರಾಮಲಿಂಗಂ ಪರ ವಕೀಲರು ವಾದಿಸಿ, ಅರ್ಜಿದಾರರು ಗುತ್ತಿಗೆದಾರರಾಗಿದ್ದು, ಅವರ ಅಧೀನದಲ್ಲಿ 3 ಸಾವಿರಕ್ಕೂ ಹೆಚ್ಚು ಕೆಲಸಗಾರರಿದ್ದಾರೆ. 17 ಸಾವಿರ ಕೋಟಿ ರೂ. ಮೊತ್ತದ 22 ಯೋಜನೆಗಳನ್ನು ಇವರು ನಿರ್ವಹಿಸುತ್ತಿದ್ದು, ಕೆಲಸಗಾರರಿಗೆ ವೇತನ ನೀಡುವುದಕ್ಕಾಗಿ ಇಷ್ಟು ಹಣ ಸಂಗ್ರಹಿಸಲಾಗಿತ್ತು.
ಆದರೆ, ಇದೀಗ ಅರ್ಜಿದಾರರು ಜೈಲಿನಲ್ಲಿರುವುದರಿಂದ ಕೆಲಸಗಾರರಿಗೆ ವೇತನ ಇಲ್ಲವಾಗಿದ್ದು, ಜಾಮೀನು ನೀಡಬೇಕು. ನ್ಯಾಯಾಲಯ ಜಾಮೀನಿಗೆ ಯಾವುದೇ ಷರತ್ತು ವಿಧಿಸಿದರೂ ಪಾಲಿಸಲಾಗುವುದು ಎಂದು ಕೋರಿದರು. ಈ ವಾದ ಮಾನ್ಯ ಮಾಡಿದ ನ್ಯಾಯಪೀಠವು ಒಂದು ಹಂತದಲ್ಲಿ ಆರೋಪಿ ರಾಮಲಿಂಗಂಗೆ ಜಾಮೀನು ಮಂಜೂರು ಮಾಡಿ ಜಾಮೀನಿಗೆ ಷರತ್ತುಗಳನ್ನು ವಿಧಿಸಲು ಮುಂದಾಗಿತ್ತು.
ಆಗ ಮಧ್ಯಪ್ರವೇಶಿಸಿದ ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್, ಆರೋಪಿ ಮೇಲಿರುವುದು ದೊಡ್ಡ ಆರೋಪ. ಪ್ರಕರಣದಲ್ಲಿ ಇನ್ನೂ ಹಲವರು ಶಾಮೀಲಾಗಿರುವ ಶಂಕೆಯಿದ್ದು, ಈ ಬಗ್ಗೆ ಸಿಬಿಐ ತನಿಖಾಧಿಕಾರಿಗಳು ತನಿಖೆ ನಡೆಸಬೇಕಿದೆ. ಇದಕ್ಕಾಗಿ ರಾಮಲಿಂಗಂ ಅವರನ್ನು ಇನ್ನಷ್ಟು ವಿಚಾರಣೆ ಗೊಳಪಡಿಸಬೇಕಿದ್ದು, ಜಾಮೀನು ಮಂಜೂರು ಮಾಡಿದರೆ ಅವರು ತನಿಖೆ ಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಪ್ರಭಾವಿಯಾಗಿರುವುದರಿಂದ ಸಾಕ್ಷ್ಯಾಧಾರ ನಾಶಪಡಿಸಲು ಮುಂದಾಗಬಹುದು.
ಅಲ್ಲದೆ, ಅವರನ್ನು ಮತ್ತೆ ವಶಕ್ಕೆ ಪಡೆಯ ಬೇಕಾದರೆ ಕಾನೂನಾತ್ಮಕ ತೊಡಕುಗಳಿವೆ. ಆದ್ದರಿಂದ ಜಾಮೀನು ಮಂಜೂರು ಮಾಡಬಾರದು ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಜಾಮೀನು ನೀಡಿದ್ದ ಆದೇಶ ತಿದ್ದುಪಡಿ ಮಾಡಿ, ರಾಮಲಿಂಗಂಗೆ ಫೆ.2ರ ನಂತರ ಅನ್ವಯವಾಗುವಂತೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು. ಫೆ.2ವರೆಗೆ ಅವರು ನ್ಯಾಯಾಂಗ ಬಂಧನದಲ್ಲಿ ಮುಂದುವರಿಯಬೇಕು.
ಅಲ್ಲಿಯವರೆಗೆ ಆತನನ್ನು ಜೈಲು ಪ್ರಾಧಿಕಾರಗಳು ಬಿಡುಗಡೆ ಮಾಡುವಂತಿಲ್ಲ. ಫೆ.1ರೊಳಗೆ ಅಗತ್ಯವಿದ್ದಲ್ಲಿ ಸಿಬಿಐ ತನಿಖಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಬಹುದು. ಆದರೆ, ಫೆ.2ರ ನಂತರ ಸಿಬಿಐ ತನಿಖಾಧಿಕಾರಿಗಳು ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರೂ ಅಥವಾ ಸಲ್ಲಿಸದಿದ್ದರೂ ಆರೋಪಿಯನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
ಪ್ರಕರಣವೇನು?
ಕಪ್ಪು ಹಣ ಬಿಳಿ ಮಾಡುತ್ತಿದ್ದ ಹಿನ್ನೆಲೆ ಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಗುತ್ತಿಗೆದಾರ ಚಂದ್ರಕಾಂತ್ ರಾಮ ಲಿಂಗಂ ಮನೆಯಲ್ಲಿ 2000 ರೂ. ಮುಖಬೆಲೆಯ 48 ಲಕ್ಷ ರೂ. ಸಿಕ್ಕಿತ್ತು. ರಾಮಲಿಂಗಂನನ್ನು ಸಿಬಿಐ ಪೊಲೀಸರು ಬಂಧಿಸಿದ್ದು, ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.