ಲಕ್ನೋ : ಮಾಜಿ ಸಂಸದ ಅತೀಕ್ ಅಹ್ಮದ್ ಪುತ್ರ ಅಸದ್ ಮತ್ತು ಅವರ ಆಪ್ತ ಶೂಟರ್ ಗುಲಾಮ್ ಎನ್‌ಕೌಂಟರ್ ಬಳಿಕ ಸಿಎಂ ಯೋಗಿ ಆದಿತ್ಯನಾಥ್ ಅವರು ಗುರುವಾರ ಮಹತ್ವದ ಕಾನೂನು ಸುವ್ಯವಸ್ಥೆ ಕುರಿತು ಸಭೆ ನಡೆಸಿದರು.
ಯುಪಿ ಎಸ್‌ಟಿಎಫ್, ಡಿಜಿಪಿ, ವಿಶೇಷ ಡಿಜಿ ಕಾನೂನು ಮತ್ತು ಸುವ್ಯವಸ್ಥೆ ಇಡೀ ತಂಡವನ್ನು ಸಿಎಂ ಯೋಗಿ ಶ್ಲಾಘಿಸಿದರು. ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಅವರು ಎನ್‌ಕೌಂಟರ್ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಸಿಎಂ ಮುಂದೆ ವರದಿ ಸಲ್ಲಿಸಲಾಗಿದೆ.
ಈ ಕ್ರಮಕ್ಕಾಗಿ ನಾನು UP STF ಅನ್ನು ಅಭಿನಂದಿಸುತ್ತೇನೆ. ಅವರ ಮೇಲೆ ಗುಂಡು ಹಾರಿಸಿದ ನಂತರ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಅಪರಾಧಿಗಳಿಗೆ ಇದು ನವ ಭಾರತ ಎಂಬ ಸಂದೇಶ. ಯುಪಿಯಲ್ಲಿ ಅಪರಾಧಿಗಳಿಗೆ ರಕ್ಷಣೆ ನೀಡಿದ್ದು ಸಮಾಜವಾದಿ ಪಕ್ಷವೇ ಹೊರತು ಯೋಗಿ ಸರ್ಕಾರವಲ್ಲ ಎಂದು ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಇಬ್ಬರು ಆರೋಪಿಗಳಿಂದ ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಶೇಷ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಇನ್ನೊಂದೆಡೆ ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಅತೀಕ್ ಅಹ್ಮದ್ ರನ್ನು ಇಂದು ಪ್ರಯಾಗ್‌ರಾಜ್‌ಗೆ ಸಿಜೆಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು.