Advertisement

CM Siddaramaiah ಚುನಾವಣೆ ಅನಂತರ ಬಿಜೆಪಿಯ ಭಿನ್ನಮತದ ಮಹಾಸ್ಫೋಟ

11:05 PM May 14, 2024 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ ಸರಕಾರ ಪತನದ ಬಗ್ಗೆ ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಹೇಳಿಕೆ ವಿರುದ್ಧ ವಾಗ್ಧಾಳಿ ಮುಂದುವರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಸರಕಾರದ ಚಿಂತೆ ಬಿಡಿ. ಲೋಕಸಭಾ ಚುನಾವಣೆ ಫ‌ಲಿತಾಂಶದ ಅನಂತರ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ ಆಗಲಿದೆ ಎಂದು ಎಚ್ಚರಿಸಿದ್ದಾರೆ.

Advertisement

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ಬಿಜೆಪಿ ನಾಯಕರೇ, ನಮ್ಮ ಸರಕಾರದ ಚಿಂತೆ ಮಾಡುವುದು ಬಿಡಿ, ಅದು ಸುಭದ್ರವಾಗಿ ಐದು ವರ್ಷ ಪೂರ್ಣಗೊಳಿಸಲಿದೆ. ನಿಮ್ಮ ಪಕ್ಷದ ಬಗ್ಗೆ ಯೋಚನೆ ಮಾಡಿ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ವಂಚಿತ ಅತೃಪ್ತ ನಾಯಕರೆಲ್ಲ ತಮಗೆ ಆಗಿರುವ ಅನ್ಯಾಯದ ವಿರುದ್ಧ ಸೇಡಿಗಾಗಿ ತಹತಹಿಸುತ್ತಿದ್ದಾರೆ. ಚುನಾವಣ ಫ‌ಲಿತಾಂಶ ಹೊರಬಿದ್ದ ತತ್‌ಕ್ಷಣ ಈ ಸೇಡಿನ ಜ್ವಾಲೆ ಧಗಧಗಿಸಲಿದೆ ಎಂದು ಹೇಳಿದ್ದಾರೆ.

ಚುನಾವಣ ಫ‌ಲಿತಾಂಶದ ಅನಂತರ ರಾಜ್ಯದ ಕಾಂಗ್ರೆಸ್‌ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಮೊದಲು ತಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು. ಈ ಪಕ್ಷದ್ರೋಹಿ ಶಿಂಧೆ ಅವರ ಪಕ್ಷ ಈ ಚುನಾವಣೆಯಲ್ಲಿ ಧೂಳೀಪಟ ಆಗುವುದು ಮಾತ್ರವಲ್ಲ; ಮಹಾರಾಷ್ಟ್ರದ ರಾಜಕೀಯದಲ್ಲಿ ಅವರು ಮೂಲೆ ಸೇರುವುದು ಖಚಿತ. ಈ ಹತಾಶೆಯಿಂದ ಏನೋ ಬಡಬಡಿಸಿದ್ದಾರೆ. ಅವರ ಮಾತನ್ನು ಗಂಭೀರವಾಗಿ ಸ್ವೀಕರಿಸುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.

ರಾಜ್ಯ ಬಿಜೆಪಿಯ ಮುಕ್ಕಾಲು ಪಾಲು ನಾಯಕರು ಬಿಜೆಪಿಯ ಈಗಿನ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ತಲೆದಂಡಕ್ಕಾಗಿ ವ್ಯೂಹ ರಚನೆಯಲ್ಲಿ ತೊಡಗಿದ್ದಾರೆ. ಚುನಾವಣೆಯಲ್ಲಿನ ಹಿನ್ನಡೆಯನ್ನು ತಂದೆ-ಮಕ್ಕಳ ತಲೆಗೆ ಕಟ್ಟಿ ಅವರನ್ನು ಮೂಲೆಗೆ ತಳ್ಳುವ ಕಸರತ್ತಿನ ತಯಾರಿ ಭರದಿಂದ ನಡೆಯುತ್ತಿದೆ. ಇದಕ್ಕೆ ಆರೆಸ್ಸೆಸ್‌ನ ಒಂದು ಬಣದ ಆಶೀರ್ವಾದ ಕೂಡ ಇದೆ ಎಂದು ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ವಂಚಿತರಾಗಿದ್ದ ನಾಯಕರು, ಚುನಾವಣ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ. ಈ ಚುನಾವಣೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಮತ್ತು ಮಕ್ಕಳು ಪಕ್ಷವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸದಿದ್ದರೆ, ತಾವೆಲ್ಲ ಶಾಶ್ವತವಾಗಿ ಮೂಲೆ ಸೇರುವುದು ಖಚಿತ ಎನ್ನುವ ಆತಂಕದಲ್ಲಿದ್ದಾರೆ. ಇದರಿಂದಾಗಿ ಚುನಾವಣೆ ಅನಂತರ ಕಮಲದಲ್ಲಿ ಭಿನ್ನಮತದ ಮಹಾಸ್ಫೋಟ ಖಚಿತ ಎಂದು ಸಿಎಂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next