Advertisement

Government ವಿಪಕ್ಷ ಮುಡಾ ಫೈಟ್‌: ಚರ್ಚೆಗೆ ಆಗ್ರಹಿಸಿ ಉಭಯ ಸದನಗಳಲ್ಲಿ ಕದನ

01:26 AM Jul 25, 2024 | Team Udayavani |

ಬೆಂಗಳೂರು: ವಿಧಾನಮಂಡಲದ ಉಭಯ ಸದನಗಳಲ್ಲಿ ಮುಡಾ ಹಗರಣದ ಚರ್ಚೆಗೆ ಅವಕಾಶ ಲಭಿಸದೇ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಬುಧವಾರ ಅಹೋರಾತ್ರಿ ಧರಣಿ ಪ್ರಾರಂಭಿಸಿದ್ದು, ಮುಖ್ಯಮಂತ್ರಿ ರಾಜೀನಾಮೆಗೆ ಪಟ್ಟು ಹಿಡಿದಿವೆ. ನಿಲುವಳಿ ಸೂಚನೆಗೆ ಸ್ಪೀಕರ್‌ ತಿರಸ್ಕಾರ ಮಾಡಿರುವುದು ವಿಪಕ್ಷಗಳನ್ನು ಕೆರಳಿಸಿದ್ದು, ತಾರ್ಕಿಕ ಅಂತ್ಯಕ್ಕೆ ಪ್ರಕರಣವನ್ನು ಕೊಂಡೊಯ್ಯು ವುದಾಗಿ ಹೇಳಿವೆ.

Advertisement

ಎರಡೂ ಸದನಗಳಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ನೀಡಿದ್ದ ನೋಟಿಸನ್ನು ಸ್ಪೀಕರ್‌ ಯು.ಟಿ. ಖಾದರ್‌ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ತಿರಸ್ಕರಿಸಿದರು. ಸಿಟ್ಟಿಗೆದ್ದ ವಿಪಕ್ಷಗಳು ಸ್ಪೀಕರ್‌ ಪೀಠದ ಬಳಿ ಪ್ರತಿಭಟನೆ ನಡೆಸಿದವು. ಪ್ರತಿಭಟನೆ ಮಧ್ಯೆಯೇ 4 ಮಸೂದೆಗಳಿಗೆ ಧ್ವನಿಮತದ ಅಂಗೀಕಾರ ನೀಡಲಾಯಿತು. ಧನವಿನಿಯೋಗ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗದವರಿಗೆ ಸರಕಾರಿ ಹೊರಗುತ್ತಿಗೆ ನೌಕರಿ ಯಲ್ಲಿ ಮೀಸಲು ಕಲ್ಪಿಸುವುದು ಸೇರಿದಂತೆ ಆರು ಮಸೂದೆಗಳನ್ನು ಮಂಡಿಸಲಾಯಿತು.

ಒಪ್ಪದ ಸ್ಪೀಕರ್‌, ಸಿಎಂ ಮಧ್ಯಪ್ರವೇಶ!
ವಿಪಕ್ಷಗಳು ಎಷ್ಟೇ ಒತ್ತಡ ಹೇರಿದರೂ ಸ್ಪೀಕರ್‌ ಖಾದರ್‌ ಚರ್ಚೆಗೆ ಅವಕಾಶ ನೀಡಲಿಲ್ಲ. ಈ ಹಂತದಲ್ಲಿ ಮಧ್ಯಪ್ರವೇಶ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಸಭಾಧ್ಯಕ್ಷರು ಒಮ್ಮೆ ರೂಲಿಂಗ್‌ ಕೊಟ್ಟ ಬಳಿಕ ಮತ್ತೆ ಅದೇ ವಿಚಾರದ ಬಗ್ಗೆ ಪ್ರಸ್ತಾವ ಮಾಡುವುದಕ್ಕೆ ಸಾಧ್ಯವಿಲ್ಲ. ನೀವು ಇಷ್ಟ ಬಂದ ಹಾಗೆ ಸದನ ನಡೆಸಲಾಗುವುದಿಲ್ಲ’ ಎಂದರು. ಇದು ವಿಪಕ್ಷಗಳನ್ನು ಕೆರಳಿಸಿದ್ದಲ್ಲದೆ, ಸರಕಾರದ ವಿರುದ್ಧ ದೊಡ್ಡ ಧನಿಯಲ್ಲಿ ಘೋಷಣೆ ಕೂಗಲಾಯಿತು.

ಸಭಾಧ್ಯಕ್ಷರತ್ತ ತಿರುಗಿದ ವಿಪಕ್ಷ ಸಿಟ್ಟು
“ಸಿದ್ದರಾಮಯ್ಯ ಪತ್ನಿಗೆ 14 ಸೈಟು, ಬಡವರಿಗೆಲ್ಲ ಖಾಲಿ ಸೌಟು’, “ಸಿದ್ರಾಮಣ್ಣ ಸಿದ್ರಾಮಣ್ಣ, ಮಾತಾ ಡಣ್ಣ ಮಾತಾಡಣ್ಣ’, ಓಡೋದ್ರಣ್ಣ ಓಡೋದ್ರಣ್ಣ, ಸಿದ್ರಾಮಣ್ಣ ಸಿದ್ರಾಮಣ್ಣ’ ಎಂದು ವಿಪಕ್ಷ ಸದಸ್ಯರು ಧಿಕ್ಕಾರ ಕೂಗಿದರು.

ಸ್ಪೀಕರ್‌ ಖಾದರ್‌ ಜಗ್ಗದಿದ್ದಾಗ, ವಿಪಕ್ಷ ಕೋಪ ಸಭಾಧ್ಯಕ್ಷರ ಕಡೆ ಹೊರಳಿತು.

Advertisement

10 ನಿಮಿಷ ಮುಂದೂಡಿಕೆ
“ನೀವು ಪೀಠಾಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರಲ್ಲ. ಏಕಪಕ್ಷೀಯ ನಿಲುವು ತೆಗೆದುಕೊಳ್ಳುವುದನ್ನು ನೋಡಿದರೆ ನಿಮಗೆ ನಿವೇಶನದ ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ’ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ವ್ಯಂಗ್ಯವಾಡಿದರು. “ಅರಿಶಿನ ಕುಂಕುಮದ ಹೆಸರಿನಲ್ಲಿ ಸಿದ್ದರಾಮಯ್ಯಗೆ ಮೂರೂವರೆ ಎಕರೆ ಜಮೀನು ಸಿಕ್ಕಿದೆ. ಇಂಥ ಭಾವ-ಮೈದುನನನ್ನು ಪಡೆಯುವುದು ಹೇಗೆ ಎಂಬ ಬಗ್ಗೆಯಾದರೂ ಚರ್ಚೆ ಮಾಡೋಣ ಎಂದು ವಿ. ಸುನಿಲ್‌ ಕುಮಾರ್‌ ಕಿಚಾಯಿಸಿದರು. ಕೊನೆಗೆ 10 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಲಾಯಿತು.

ಇಂದಿಗೆ ಕಲಾಪ ಮುಂದೂಡಿಕೆ
ಮರಳಿ ಕಲಾಪ ಪ್ರಾರಂಭವಾದ ಮೇಲೆಯೂ ಬಿಜೆಪಿ ಹಾಗೂ ಜೆಡಿಎಸ್‌ ಪ್ರತಿಭಟನೆ ತೀವ್ರಗೊಂಡಿತು. ಆಗ ಸ್ಪೀಕರ್‌ ಗಮನ ಸೆಳೆಯುವ ಸೂಚನೆಯನ್ನು ಕೈಗೆತ್ತಿಕೊಂಡರು. ಈ ನಡುವೆಯೇ ವಿಪಕ್ಷ ನಾಯಕ ಆರ್‌. ಅಶೋಕ್‌, ಮುಡಾ ಹಗರಣದ ಬಗ್ಗೆ ಮಾತನಾಡಲಾರಂಭಿಸಿದರು. ಮುಡಾದಲ್ಲಿ ಹೆಗ್ಗಣಗಳಿವೆ ಎಂದು ಆರೋಪಿಸಿದ್ದ ಸಿದ್ದರಾಮಯ್ಯಗೆ 14 ಸೈಟ್‌ಗಳು ಲಭಿಸಿವೆ. ದಲಿತರಿಗೆ ಪಂಗನಾಮ ಹಾಕಿ ಜಮೀನು ಹೊಡೆದುಕೊಂಡಿದ್ದಾರೆ. ಬಿಜೆಪಿ ಕಾಲದಲ್ಲಿ ಸೈಟ್‌ ಮಂಜೂರಾಗಿದೆ ಎಂದು ಸಿದ್ದರಾಮಯ್ಯ ತಪ್ಪಿಸಿಕೊಳ್ಳು ತ್ತಿದ್ದಾರೆ. ಆದರೆ ಅವರು ಉಪ ಮುಖ್ಯಮಂತ್ರಿಯಾಗಿದ್ದಾಗಲೇ ಈ ಜಾಗವನ್ನು ಡಿನೋಟಿಫಿಕೇಶನ್‌ ಮಾಡಿಸಿ ಕೊಂಡಿದ್ದಾರೆ ಎಂದು ಆರೋಪಿಸಿದರು. ಆರೋಪ- ಪ್ರತ್ಯಾರೋಪದ ಮಧ್ಯೆ ಕಲಾಪ ನಡೆಸುವುದು ಕಷ್ಟವಾದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 9.30ಕ್ಕೆ ಸ್ಪೀಕರ್‌ ಕಲಾಪ ಮುಂದೂಡಿದರು. ಈ ಮಧ್ಯೆ ಸರಕಾರದ ವಿರುದ್ಧ ಪ್ಲೆಕಾರ್ಡ್‌ ಪ್ರದರ್ಶನ ಮಾಡಲಾಗಿದೆ.

ಕುಡ್ಲದ ಮರ್ಯಾದೆ ದೆಪ್ಪುವರಾ?
ವಿಪಕ್ಷಗಳ ಮನವಿಯನ್ನು ಖಾದರ್‌
ಕೇಳದೇ ಇದ್ದಾಗ “ಅವರಿಗೆ ಕನ್ನಡ ಅರ್ಥವಾಗುವುದಿಲ್ಲ, ತುಳುವಿನಲ್ಲಿ ಮಾತಾಡು’ ಎಂದು ವಿ. ಸುನಿಲ್‌ ಕುಮಾರ್‌ಗೆ ವಿಪಕ್ಷ ನಾಯಕ ಆರ್‌. ಅಶೋಕ್‌ ಸೂಚಿಸಿದರು. “ಓಯ್‌ ಅಧ್ಯಕ್ಷರೇ ಇಂಚಿ ತೂಲೆ’ (ಅಧ್ಯಕ್ಷರೆ ತಿರುಗಿ ನೋಡಿ) ಎಂದರು. ಪೀಠದಲ್ಲಿದ್ದ ಖಾದರ್‌ ಪನ್ಲೆ ಪನ್ಲೆ (ಹೇಳಿ, ಹೇಳಿ) ಎಂದರು. “ವುಂದು ಸಭೆ ನಡಪಾವುನ ಪೊರ್ಲಾ? (ಇದು ಸಭೆ ನಡೆಸುವ ಚಂದವಾ) ಎಂದು ಸುನಿಲ್‌ ಕುಮಾರ್‌ ಪ್ರಶ್ನಿಸಿದರೆ, “ನಿಕ್ಲು ಇಂಚ ಮಲ್ಪುನ ಪೊರ್ಲಾ’ (ನೀವು ಈ ರೀತಿ ವರ್ತಿಸುವುದು ಚಂದವಾ?) ಎಂದು ಖಾದರ್‌ ತಿರುಗೇಟು ಕೊಟ್ಟರು. ಓಯ್‌ ಅಧ್ಯಕ್ಷೆರೆ, ಕುಡ್ಲದ ಮರ್ಯಾದೆ ದೆಪ್ಪುವರಾ? (ಅಧ್ಯಕ್ಷರೇ ಮಂಗಳೂರಿನ ಮರ್ಯಾದೆ ತೆಗೀತೀರಾ) ಎಂದಾಗ “ಎಂಥದು ಮಾರಾಯಾ’ ಎಂಬರ್ಥದಲ್ಲಿ ಖಾದರ್‌ ಹಣೆ ಮುಟ್ಟಿ ಕೈ ತಿರುಗಿಸಿದರು.

ಬಿಜೆಪಿ-ಜೆಡಿಎಸ್‌ ಆಗ್ರಹ ಏನು?
-ಮುಡಾ ಹಗರಣದ ಚರ್ಚೆಗೆ ಅವಕಾಶ ಕೊಡಬೇಕು
-ಹಗರಣದ ತನಿಖೆಯನ್ನು ಸಿಬಿಐ ಸಂಸ್ಥೆಗೆ ವಹಿಸಬೇಕು
-ಸ್ವಜನಪಕ್ಷಪಾತದಿಂದ ನಿವೇಶನ ಮಾಡಿಕೊಂಡಿರುವ ಸಿಎಂ
-ಸಿಎಂ ತನಿಖೆಗೆ ಆದೇಶ ನೀಡಿದರೆ ನ್ಯಾಯ ಸಿಗಲು ಸಾಧ್ಯವೇ?
-ಅಕ್ರಮ ಮಾಡಿಲ್ಲ ಎಂದಾದರೆ ಚರ್ಚೆ ಮಾಡಲು ಭಯ ಏಕೆ?
-ಚರ್ಚೆಗೆ ಅವಕಾಶ ಕೊಡಿ, ವಿಪಕ್ಷದವರ ಹಕ್ಕು ಹತ್ತಿಕ್ಕಬೇಡಿ

ಸರಕಾರದ ನಿಲುವೇನು?
-ಮುಡಾ ಹಗರಣದ ಕುರಿತ ಚರ್ಚೆಯೇ ಈಗ ಅಪ್ರಸ್ತುತ
-ಇದು ಸದ್ಯದ ತುರ್ತು ವಿಚಾರವೇ ಅಲ್ಲ
-ನ್ಯಾಯಮೂರ್ತಿಗಳ ಆಯೋಗದಿಂದ ತನಿಖೆ ಆಗ್ತಾ ಇದೆ
-ತನಿಖೆಯ ಹಂತದಲ್ಲಿ ಚರ್ಚೆ ನಡೆಸುವ ಅಗತ್ಯ ಇಲ್ಲ
-ಸಭಾಧ್ಯಕ್ಷರು ರೂಲಿಂಗ್‌ ಕೊಟ್ಟ ಮೇಲೆ ಮತ್ತೆ ಅದೇ ವಿಚಾರ ಪ್ರಸ್ತಾವ ಮಾಡುವಂತಿಲ್ಲ
-ಇದೊಂದು ರಾಜಕೀಯ ಉದ್ದೇಶವೇ ಹೊರತು ಬೇರೇನೂ ಅಲ್ಲ

Advertisement

Udayavani is now on Telegram. Click here to join our channel and stay updated with the latest news.

Next