ಮುಂಬಯಿ: ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಮಾಡಿದ ಹೃದಯಸ್ಪರ್ಶಿ ಮನವಿಗೆ ಫುಟ್‌ಬಾಲ್ ಅಭಿಮಾನಿಗಳು ಕರಗಿದ್ದಾರೆ. “ನೀವು ನಮಗೆ ಬೈದರೂ ಪರವಾಗಿಲ್ಲ, ಮೈದಾನಕ್ಕೆ ಬಂದು ಪಂದ್ಯ ನೋಡಿ’ ಎಂದು ಅವರು ನಿನ್ನೆಯಷ್ಟೇ ನೀಡಿದ ಕರೆಗೆ ಮುಂಬಯಿ ಅಭಿಮಾನಿಗಳು ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಿದ್ದಾರೆ. ಸೋಮವಾರದ ಭಾರತ-ಕೀನ್ಯಾ ಪಂದ್ಯದ ಎಲ್ಲ ಟಿಕೆಟ್‌ಗಳೂ ಮಾರಾಟವಾಗಿವೆ. ಅಂದಹಾಗೆ ಸೋಮವಾರ ರಾತ್ರಿ ನಡೆದ ಕೀನ್ಯಾ ವಿರುದ್ಧ ಪಂದ್ಯದಲ್ಲಿ ಭಾರತ ಜಯಗಳಿಸಿದೆ. ಇದು ಚೆಟ್ರಿಗೆ 100ನೇ ಪಂದ್ಯವೂ ಎಂಬ ಕಾರಣಕ್ಕೆ ಭಾರೀ ಮಹತ್ವ ಪಡೆದಿತ್ತು.
ಮುಂಬಯಿ ಫುಟ್‌ಬಾಲ್ ಮೈದಾನದ ಆಸನ ಸಾಮರ್ಥ್ಯ 18,000. ನಮ್ಮ ಪಂದ್ಯ ನೋಡಲು ಜನರಿಲ್ಲ ಎಂದು ನಾಯಕ ಚೆಟ್ರಿಯೇ ಕೊರಗಿದ್ದನ್ನು ನೋಡಿದ ಅಭಿಮಾನಿಗಳು ಇಷ್ಟೂ ಆಸನವನ್ನು ಭರ್ತಿ ಮಾಡಿದ್ದಾರೆ!
ಚೆಟ್ರಿಯ ಈ ಮನವಿಗೆ ಕಾರಣವೂ ಇದೆ. ಮೊನ್ನೆಯಷ್ಟೇ ಮುಂಬಯಿ ಮೈದಾನದಲ್ಲೇ ಭಾರತ, ಚೀನಾ ತೈಪೆ ವಿರುದ್ಧ 5-0 ಅಂತರದಿಂದ ಗೆದ್ದಿತ್ತು. ಈ ಪಂದ್ಯದಲ್ಲಿ ಪ್ರಾಯೋಜಕತ್ವದಿಂದ ಬಂದಿದ್ದ ಅಂದಾಜು 2,000 ಅಭಿಮಾನಿಗಳನ್ನು ಹೊರತುಪಡಿಸಿದರೆ ಉಳಿದಂತೆ ಇಡೀ ಸ್ಟೇಡಿಯಂ ಖಾಲಿ ಹೊಡೆದಿತ್ತು. ಇದರಿಂದ ಚೆಟ್ರಿ ನೊಂದಿದ್ದರು.
ಚೆಟ್ರಿ ಹೇಳಿದ್ದೇನು?: “ರೊನಾಲ್ಡೊ, ಮೆಸ್ಸಿ, ನೇಯ್ಮರ್‌ರನ್ನು ನೋಡುವ ಅಭಿಮಾನಿಗಳೇ ದಯವಿಟ್ಟು ಭಾರತ ತಂಡದ ಪಂದ್ಯಗಳನ್ನು ನೋಡಿ. ನನಗಾಗಿ ಅಲ್ಲ, ಭಾರತಕ್ಕಾಗಿ ನೋಡಿ. ಅಲ್ಲಿ ಬಂದು ನಮಗೆ ಬೈಯಿರಿ, ಕೂಗಿ, ಅರಚಿ, ಆದರೆ ದಯವಿಟ್ಟು ಬನ್ನಿ. ನಿಮ್ಮ ಬೈಗುಳದಿಂದ ನಾವು ಬದಲಾಗಿ ನೀವು ಹೊಗಳುವಂತಹ ದಿನಗಳೂ ಬರಬಹುದು ಎಂದು ಸುನೀಲ್ ಚೆಟ್ರಿ ಹೇಳಿದ್ದರು.