ಜೈಪುರ್: ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕ್ರಮ ತೆಗೆದುಕೊಳ್ಳದಿರುವುದನ್ನು ಪ್ರತಿಭಟಿಸಿ ಸಾಧುವೊಬ್ಬರು ಬೆಂಕಿ ಹಚ್ಚಿಕೊಂಡ ಘಟನೆ ರಾಜಸ್ಥಾನದ ಭರತ್ ಪುರ್ ಜಿಲ್ಲೆಯಲ್ಲಿ ನಡೆದಿದೆ. ಸಾಧುವನ್ನು ವಿಜಯ್ ದಾಸ್ ಎಂದು ಗುರುತಿಸಲಾಗಿದ್ದು, ಚಿಕಿತ್ಸೆಗಾಗಿ ದೆಹಲಿಗೆ ಕರೆದೊಯ್ಯಲಾಗಿದೆ. ದಾಸ್ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಏಳು ದಿನದ ಬಳಿಕ ಪತ್ತೆಯಾಯಿತು ತುಂಗಾ ನದಿಗೆ ಹಾರಿದ ಯುವಕನ ಮೃತದೇಹ
ಭಗವಾನ್ ಶ್ರೀಕೃಷ್ಣನ ಜೀವನಕ್ಕೆ ಸಂಬಂಧಪಟ್ಟ ಹಾಗೂ ಪವಿತ್ರ ಎಂದು ಪರಿಗಣಿಸಲಾದ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ನಿಷೇಧಿಸಬೇಕೆಂದು ಬ್ರಜ್ ಪರ್ವತ್ ಏವಂ ಪರ್ಯಾವರಣ್ ಸಂರಕ್ಷಣಾ ಸಮಿತಿಯ ಸ್ವಾಮೀಜಿಗಳು ಪ್ರತಿಭಟನೆ ನಡೆಸುತ್ತಿದ್ದರು.
ಕಲ್ಲು ಗಣಿಗಾರಿಕೆ ನಿಷೇಧಿಸಬೇಕೆಂದು ನಾರಾಯಣ್ ದಾಸ್ ಎಂಬ ಮತ್ತೊಬ್ಬ ಸಾಧು ಟೆಲಿಫೋನ್ ಕಂಬವನ್ನೇರಿ ಪ್ರತಿಭಟಿಸಿದ್ದು, ಬಳಿಕ ಪೊಲೀಸರು ನಾರಾಯಣ್ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಿರುವುದಾಗಿ ವರದಿ ತಿಳಿಸಿದೆ.
ಈ ಪ್ರದೇಶದಲ್ಲಿ ಕಾನೂನುಬದ್ಧವಾಗಿ ಗಣಿಗಾರಿಕೆ ನಡೆಯುತ್ತಿದೆ. ಒಂದು ವೇಳೆ ಏಕಾಏಕಿ ಗಣಿಗಾರಿಕೆ ನಿಲ್ಲಿಸಿದರೆ ಸುಮಾರು 2,500 ಜನರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ನೇತೃತ್ವದ ರಾಜಸ್ಥಾನ್ ಸರ್ಕಾರ ಸಮಜಾಯಿಷಿ ನೀಡಿದೆ.
ಹಳೆಯ ಗಣಿಗಾರಿಕೆಯನ್ನು ಬಂದ್ ಮಾಡುವುದಾಗಿ ಸರ್ಕಾರ ಭರವಸೆ ನೀಡಿದ ನಂತರ ಸಾಧುಗಳು ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದರು. ಆದರೆ ರಾಜಸ್ಥಾನ ಸರ್ಕಾರ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕೆಂಬ ಸಾಧುಗಳ ಬೇಡಿಕೆಯನ್ನು ಕೇಳಿಸಿಕೊಳ್ಳುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.