ಹೈದರಾಬಾದ್: ಕರ್ನಾಟಕದ ಅಂಜನಾದ್ರಿಯಲ್ಲಿರುವ ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರದ ತೀವ್ರ ಆಕ್ಷೇಪಣೆ ನಡುವೆಯೇ, ಆಂಧ್ರ ಪ್ರದೇಶದ ತಿರುಮಲದಲ್ಲಿ ಬುಧವಾರ “ಹನುಮಾನ್ ಜನ್ಮಭೂಮಿ, ಅಕ್ಷರಗಂಗಾ’ ಹೆಸರಿನಲ್ಲಿ ಅಭಿವೃದ್ಧಿ ಕೈಗೊಳ್ಳಲು ಶಂಕುಸ್ಥಾಪನೆ ನೆರವೇರಿಸಲು ಎಲ್ಲಾ ಸಿದ್ಧತೆಗಳು ನಡೆದಿವೆ.
ಈ ಕಾರ್ಯಕ್ರಮಕ್ಕಾಗಿ ದೇಶದ ವಿವಿಧೆಡೆಯ ಸ್ವಾಮೀಜಿಗಳು, ಪುರೋಹಿತರಿಗೆ ಅಹ್ವಾನ ನೀಡಲಾಗಿದೆ. ಬುಧವಾರ ಬೆಳಗ್ಗೆ 9.30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಟಿಟಿಡಿ ತಿಳಿಸಿದೆ.
ಕರ್ನಾಟಕದಲ್ಲಿರುವ ಹಂಪಿಯೇ ಆಂಜನೇಯನ ಹುಟ್ಟಿದ ಸ್ಥಳ ಎಂಬುದು ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರದ ಶ್ರೀಗಳ ವಾದ. ಆದರೆ, ಇದನ್ನು ತಳ್ಳಿಹಾಕಿರುವ ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ, ತಿರುಮಲದ ಬಳಿ ಇರುವ ಅಂಜನಾದ್ರಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.
ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್‌ನ ಪ್ರಕಾರ, ವಾಲ್ಮೀಕಿ ರಾಮಾಯಣದಲ್ಲಿ ಹೇಳಿರುವಂತೆ ಹಂಪಿ ಅಥವಾ ಕಿಷ್ಕಿಂಧೆಯೇ ಹನುಮಂತದ ಜನ್ಮಸ್ಥಳ. ಇಲ್ಲಿನ ಅಂಜನಾಹಳ್ಳಿಯಲ್ಲೇ ಆಂಜನೇಯ ಹುಟ್ಟಿದ್ದು. ಆದರೆ, ಇದನ್ನು ಆಂಧ್ರ ಪ್ರದೇಶದ ಟಿಟಿಡಿ ಒಪ್ಪುತ್ತಿಲ್ಲ. ಈ ಬಗ್ಗೆ ಅಧ್ಯಯನಕ್ಕಾಗಿ ಅದು ಸಮಿತಿಯೊಂದನ್ನು ರಚಿಸಿದ್ದು, ಅದು ತಿರುಮಲದಲ್ಲಿರುವ ಅಂಜನಾದ್ರಿಯೇ ಹನುಮಂತನ ಜನ್ಮಸ್ಥಳ ಎಂದಿದೆ.
ಇದನ್ನೂ ಓದಿ:ಗೋವಾ ಚುನಾವಣೆ : ಶೇ 78.94% ಮತದಾನ, ಮಾರ್ಚ್ 10 ಕ್ಕೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಈ ವಿಚಾರವಾಗಿ ಕಳೆದ ವರ್ಷವೇ ದೊಡ್ಡ ಮಟ್ಟದ ಚರ್ಚೆಯಾಗಿದೆ. ಅಂಜನಾದ್ರಿಯೇ ಹನುಮಂತನ ಜನ್ಮÕಸ್ಥಳ ಎಂಬುದಕ್ಕೆ ತಮ್ಮಲ್ಲಿ ಸಾಕ್ಷ್ಯಗಳಿವೆ ಎಂದು ಟಿಟಿಡಿ ಬುಕ್‌ಲೆಟ್‌ವೊಂದನ್ನು ಮಾಡಿ ಹಂಚಿದೆ. ಜತೆಗೆ ನಾವು ಪೌರಾಣಿಕ, ಸಾಹಿತ್ಯಾತ್ಮಕ ಮತ್ತು ಪುರಾತತ್ವ ದಾಖಲೆಗಳು ಇದನ್ನೇ ಹೇಳುತ್ತಿವೆ ಎಂದು ಟಿಟಿಡಿ ಹೇಳಿದೆ. ಇದಕ್ಕೆ ಪ್ರತಿಯಾಗಿ ಹನುಮತ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕೂಡ 6 ಪುಟಗಳ ಪತ್ರ ಬರೆದು, ಹನುಮಂತ ಹಂಪಿಯಲ್ಲೇ ಹುಟ್ಟಿದ್ದು ಎಂದು ವಾದಿಸಿದೆ.