ಹೊಸದಿಲ್ಲಿ : ಬಾಲಿವುಡ್ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ವಿವಾದಿತ ಐತಿಹಾಸಿಕ ಕಥಾ ಚಿತ್ರ “ಪದ್ಮಾವತ್’ ಬಿಡುಗಡೆಯನ್ನು ರಾಜಸ್ಥಾನ, ಗುಜರಾತ್ ಬಳಿಕ ಹರಿಯಾಣ ಸರಕಾರ ತಡೆಹಿಡಿದಿದೆ.
ಪದ್ಮಾವತ್ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಭಾರೀ ಸಂಖ್ಯೆಯ ಜನರು ಭಾವಿಸಿರುವುದರಿಂದ ಚಿತ್ರದ ಬಿಡುಗಡೆಯನ್ನು ರಾಜ್ಯದಲ್ಲಿ ತಡೆಹಿಡಿಯುವ ನಿರ್ಧಾರವನ್ನು ಇಂದಿನ ಸಂಪುಟ ಸಭಯಲ್ಲಿ ಕೈಗೊಳ್ಳಲಾಯಿತು ಎಂದು ಮೂಲಗಳು ಹೇಳಿವೆ.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಈ ಹಿಂದೆ “ಪದ್ಮಾವತಿ ಚಿತ್ರಕ್ಕೆ ಕೇಂದ್ರ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್ ನೀಡಿದ ಬಳಿಕ ಅದನ್ನು ರಾಜ್ಯದಲ್ಲಿ ಬಿಡುಗಡೆ ಮಾಡುವುದರ ಬಗ್ಗೆ ನಿರ್ಧರಿಸಲಾಗುವುದು’ ಎಂದು ಹೇಳಿದ್ದರು.
ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಿಡುವ ದೃಷ್ಟಿಯಲ್ಲಿ ಪದ್ಮಾವತ್ ಚಿತ್ರವನ್ನು ನಿಷೇಧಿಸಬೇಕೆಂಬ ಪ್ರಸ್ತಾವವನ್ನು ಹರಿಯಾಣ ಸಚಿವ ಅನಿಲ್ ವಿಜ್ ಮುಂದಿಟ್ಟಿದ್ದರು. ಆದರೆ ಚಿತ್ರ ಬಿಡುಗಡೆಯನ್ನು ಸದ್ಯಕ್ಕೆ ತಡೆಹಿಡಿಯಲು ಸಂಪುಟ ಸಭೆ ನಿರ್ಧರಿಸಿತು.
ಪದ್ಮಾವತ್ ಚಿತ್ರಕ್ಕೆ ಕೇಂದ್ರ ಸೆನ್ಸಾರ್ ಮಂಡಳಿ ಯು/ಎ ಸರ್ಟಿಪಿಕೇಟ್ ನೀಡಿರುವ ಹೊರತಾಗಿಯೂ ರಾಜಸ್ಥಾನ ಮತ್ತು ಗುಜರಾತ್ ಸರಕಾರಗಳು ಆ ಚಿತ್ರದ ಬಿಡುಗಡೆಗೆ ತಮ್ಮ ರಾಜ್ಯದಲ್ಲಿ ನಿಷೇಧ ಹೇರಿವೆ.
ಪದ್ಮಾವತ್ ಚಿತ್ರ ಇದೇ ಜನವರಿ 25ರಂದು ತೆರೆ ಕಾಣಲಿದೆ.