ಯಾದಗಿರಿ: ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿಯಲ್ಲಿ ಕೊಂಚ ಪ್ರವಾಹದ ನೀರು ಇಳಿಕೆಯಾಗಿದ್ದು ಇದೀಗ ವಿಷ ಜಂತುಗಳ ಕಾಟ ಜನರನ್ನು ಕಾಡುತ್ತಿದೆ.
ಸನ್ನತಿ ಬ್ಯಾರೇಜ್‌ನಿಂದ 3 ಲಕ್ಷ ಕ್ಯೂಸೆಕ್ ಗೂ ಹೆಚ್ಚು ನೀರು ಹರಿಸಿದ್ದರಿಂದ ನದಿ ಪಾತ್ರದ ಹುರಸಗುಂಡಗಿಯಲ್ಲಿ ಮನೆಗಳೆಲ್ಲಾ ಜಲಾವೃತಗೊಂಡು ಗ್ರಾಮಸ್ಥರು ಪರದಾಡುವಂತಾಗಿತ್ತು. ಪ್ರವಾಹಕ್ಕೆ ತುತ್ತಾಗುತ್ತಿರುವುದರಿಂದ ಗ್ರಾಮಸ್ಥರನ್ನು ಹೊಸ ಗ್ರಾಮಕ್ಕೆ ಸರ್ಕಾರ ಸುಮಾರು ವರ್ಷಗಳ ಹಿಂದೆಯೇ ಸ್ಥಳಾಂತರಗೊಳಿಸಿದರೂ ಗ್ರಾಮದಶೇ.75ರಷ್ಟು ಜನರು ಹಳೆ ಗ್ರಾಮದಲ್ಲಿಯೇ ವಾಸವಾಗಿದ್ದು, ಪ್ರವಾಹಕ್ಕೆ ಸಿಲುಕುವಂತಾಗಿದೆ.
ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆಹಿನ್ನೆಲೆ ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆಜಿಲ್ಲಾಡಳಿತ ಸ್ಥಳಾಂತರಿಸಿದ್ದು, ಗ್ರಾಮಸ್ಥರಿಗೆ ಸೂಕ್ತ ಸೌಲಭ್ಯಗಳಿಲ್ಲದ ಕಾರಣ ಹೊಸ ಗ್ರಾಮಕ್ಕೆ ತೆರಳಲು ಮುಂದಾಗುತ್ತಿಲ್ಲ ಎನ್ನಲಾಗಿದೆ. ಇದೀಗ ಪ್ರವಾಹ ಸ್ವಲ್ಪ ಇಳಿಕೆಯಾಗಿದ್ದು ನೀರಿನಲ್ಲಿದ್ದ ವಿಷಜಂತುಗಳು ಮನೆಯಲ್ಲಿ ಸೇರುತ್ತಿರುವುದು ಎಲ್ಲಿ ವಾಸಿಸುವುದು ಎನ್ನುವುದು ತೋಚದಂತಾಗಿದೆ ಎಂದು ಜನರು ಅಳಲು ತೋಡಿಕೊಂಡರು. ಪ್ರವಾಹದಿಂದ ಬಾಣಂತಿಗೆ ಸೂಕ್ತ ಆರೈಕೆ ಮಾಡಲು ಆಗದೇ ಕಷ್ಟಕ್ಕೆ ಸಿಲುಕಿರುವ ಕುಟುಂಬವೊಂದು ಹಳೆ ಬಸ್ ತಂಗುದಾಣದಲ್ಲಿಯೇ ಮಂಚ ಹಾಕಿ ವ್ಯವಸ್ಥೆ ಮಾಡಿಕೊಂಡಿದ್ದು ಕಂಡು ಬಂತು. ಮುನ್ನೆಚ್ಚರಿಕೆಯಾಗಿ ಸ್ಥಳದಲ್ಲಿ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಅಗತ್ಯವಿದ್ದರೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಗ್ರಾಮದಲ್ಲಿ ಸಾರಿಗೆ ಬಸ್ ನಿಲ್ಲಿಸಲಾಗಿದೆ.
ಸೂಕ್ತ ಪರಿಹಾರ ಸಿಕ್ಕಿಲ್ಲ: ಮಳೆಗಾಲದಲ್ಲಿ ಪ್ರತಿ ವರ್ಷ ಭೀಮಾ ನದಿಯಿಂದ ಪ್ರವಾಹ ಎದುರಿಸುತ್ತಿರುವ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದ ಜನರು ಸಮಸ್ಯೆ ಅರಿತು ಜಿಲ್ಲಾಡಳಿತ ಗ್ರಾಮವನ್ನು ಸ್ಥಳಾಂತರಗೊಳಿಸಿದೆ. ಆದರೆ, ಸ್ಥಳಾಂತರಗೊಂಡ ಕೆಲವು ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ಸ್ಥಳೀಯರು ಕಂದಾಯ ಸಚಿವ ಆರ್ ಅಶೋಕ ಅವರಿಗೆ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಆರೋಪಿಸಿದರು. ಪ್ರವಾಹ ಪರಿಸ್ಥಿತಿ ವೀಕ್ಷಿಸಿದ ನಂತರ ಗ್ರಾಮಸ್ಥರ ಸಮಸ್ಯೆ ಆಲಿಸಿದ ಸಂದರ್ಭದಲ್ಲಿ ಸಚಿವರ ಮುಂದೆಜನರು ತಮ್ಮ ಅಳಲು ತೋಡಿಕೊಂಡರು. ಈ ಕುರಿತು ಜಿಲ್ಲಾಧಿಕಾರಿ, ಶಾಸಕರೊಂದಿಗೆ ಚರ್ಚಿಸಿ ನ್ಯಾಯ ಒದಗಿಸುವುದಾಗಿ ಸಚಿವರು ಹೇಳಿದರು.
ಸ್ಥಳಾಂತರವಾಗುವ ಕುಟುಂಬಗಳಿಗೆ ಉಚಿತ ನಿವೇಶನ ನೀಡುವ ಜೊತೆಗೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ನೀಡಲಾಗುವುದು. ಸರ್ಕಾರ ನಿಗದಿ ಪಡಿಸಿದ ಸ್ಥಳಕ್ಕೆ ತೆರಳುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದರು.
-ಅನೀಲ ಬಸೂದೆ