ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರತಿಪಕ್ಷಗಳ ನಾಯಕರು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆನ್ನುವ ಏಕೈಕ ಉದ್ದೇಶದಿಂದ ಒಂದನ್ನೂ ಬಿಡದೆ, ಎಲ್ಲ ವಿಪಕ್ಷಗಳನ್ನು ಸಂಪರ್ಕಿಸುವ ಕೆಲಸ ಅವಿರತವಾಗಿ ಸಾಗಿದೆ. ಅದರಲ್ಲೂ ಆಂಧ್ರಪ್ರದೇಶದ ಸಿಎಂ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಕಳೆದೊಂದು ವಾರದಿಂದೀಚೆಗೆ ನಿರಂತರವಾಗಿ ವಿವಿಧ ನಾಯಕರನ್ನು ಭೇಟಿಯಾಗುತ್ತಲೇ ಇದ್ದಾರೆ. ಶನಿವಾರ ಅವರು ಕಾಂಗ್ರೆಸ್, ಎನ್‌ಸಿಪಿ, ಸಿಪಿಐ ಮತ್ತು ಇತರೆ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಚುನಾವಣೋತ್ತರವಾಗಿ ಜಂಟಿ ವಿಪಕ್ಷಗಳ ಮಹಾಮೈತ್ರಿ ರಚಿಸುವ ಕುರಿತು ಅವರು ಚರ್ಚಿಸಿ ದ್ದಾರೆ. ಬಳಿಕ ಸಂಜೆ ದಿಲ್ಲಿಯಿಂದ ನೇರವಾಗಿ ಉತ್ತರಪ್ರದೇಶದ ಲಕ್ನೋಗೆ ತೆರಳಿ ಅಲ್ಲಿ ಎಸ್‌ಪಿ ನಾಯಕ ಅಖೀಲೇಶ್ ಯಾದವ್ ಮತ್ತು ಬಿಎಸ್‌ಪಿ ನಾಯಕಿ ಮಾಯಾವತಿ ಅವರೊಂದಿಗೂ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುಂಚೆಯೇ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸೇರಿದಂತೆ ವಿವಿಧ ವಿಪಕ್ಷ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆಯನ್ನು ಮುಗಿಸಿದ್ದಾರೆ.
ಮಾತುಕತೆ ಏನು?: ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂದರೆ ನಾವೆಲ್ಲರೂ ಒಂದುಗೂಡಿ, ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಈ ಎಲ್ಲ ನಾಯಕರಿಗೂ ನಾಯ್ಡು ಮನದಟ್ಟು ಮಾಡಿದ್ದಾರೆ ಎಂದು ಹೇಳಲಾಗಿದೆ. ಒಂದು ವೇಳೆ ಎನ್‌ಡಿಎಗೆ ಬಹುಮತ ಬಾರದೆಯೂ, ಅವರು ಸರಕಾರ ರಚನೆಗೆ ಹಕ್ಕು ಮಂಡಿಸಿದರೆ, ಏನು ಮಾಡಬೇಕು ಎಂಬ ಬಗ್ಗೆ ಈಗಲೇ ಕಾರ್ಯತಂತ್ರ ರಚಿಸುವಂತೆ ರಾಹುಲ್ಗೆ ನಾಯ್ಡು ಸಲಹೆ ನೀಡಿದ್ದಾರೆ.
ಮತಗಳ ಖರೀದಿಗಾಗಿಯೇ ಹೊಸ ನೋಟು: ಈ ನಡುವೆ, ಚುನಾವಣಾ ಬಾಂಡ್‌ಗಳ ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಮತಗಳನ್ನು ಖರೀದಿಸಲೆಂದೇ ನೋಟು ಅಮಾನ್ಯದ ಬಳಿಕ 500 ರೂ. ಮತ್ತು 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಜಾರಿಗೆ ತರಲಾಯಿತು ಎಂದು ಆರೋಪಿಸಿದ್ದಾರೆ.