ಬೀಜಿಂಗ್/ನವದೆಹಲಿ:ಗಾಲ್ವಾನ್ ಕಣಿವೆ ಪ್ರದೇಶದಲ್ಲಿನ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ, ಚೀನ ನಡುವೆ ಮಾತುಕತೆ ನಡೆಯುತ್ತಿದ್ದರೆ ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ದಿಢೀರ್ ಎಂದು ಲಡಾಖ್ ಗೆ ಭೇಟಿ ನೀಡಿ ಯೋಧರ ಜತೆ ಮಾತುಕತೆ ನಡೆಸಿರುವುದು ಚೀನಾದ ಹುಬ್ಬೇರಿಸುವಂತೆ ಮಾಡಿದೆ ಎಂದು ವರದಿ ತಿಳಿಸಿದೆ.
ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ಜತೆ ಚರ್ಚೆ ನಡೆಸುವ ಮೂಲಕ ಉದ್ವಿಗ್ನ ಸ್ಥಿತಿಯನ್ನು ಕಡಿಮೆಗೊಳಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯಾವುದೇ ದೇಶವಾಗಲಿ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಲು ಹೋಗಬಾರದು ಎಂದು ಚೀನ ಪ್ರತಿಕ್ರಿಯೆ ನೀಡಿದೆ.
ಇಂದು ಪ್ರಧಾನಿ ಮೋದಿ ಅವರು ಲಡಾಖ್ ಗೆ ಭೇಟಿ ನೀಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ಚೀನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಜೋ ಲಿಜಿಯಾನ್, ಉಭಯ ದೇಶಗಳ ನಡುವೆ ರಾಜತಾಂತ್ರಿಕ, ಸೇನಾ ಮಟ್ಟದಲ್ಲಿ ಚರ್ಚೆ, ಮಾತುಕತೆ ನಡೆಯುತ್ತಿರುವ ವೇಳೆ ಯಾವ ದೇಶವಾಗಲಿ ಪರಿಸ್ಥಿತಿಯನ್ನು ಬಿಗಡಾಯಿಸಲು ಅವಕಾಶ ನೀಡಬಾರದು ಎಂದು ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ, ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಜತೆ ಲಡಾಖ್ ಗೆ ಭೇಟಿ ನೀಡಿ ಗಡಿ ಪ್ರದೇಶದಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿ ಮಾಹಿತಿ ಪಡೆದಿದ್ದರು. ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ, ಚೀನ ಸೈನಿಕರ ನಡುವೆ ಘರ್ಷಣೆ ನಡೆದು 20 ಸೈನಿಕರು ಹುತಾತ್ಮರಾದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ದಿಢೀರ್ ಎಂದು ಭೇಟಿ ನೀಡುವ ಮೂಲಕ ಯೋಧರಿಗೆ ಆತ್ಮಸ್ಥೈರ್ಯ ತುಂಬಿದ್ದರು.