Advertisement

ಮುಂದಿನ ಗುರಿ ವಿಶ್ವಚಾಂಪಿಯನ್‌ಶಿಪ್‌: ಚೋಪ್ರಾ

10:08 PM Aug 10, 2021 | Team Udayavani |

ನವದೆಹಲಿ: ಟೋಕ್ಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಮನೆ ಮನೆ ಮಾತಾಗಿರುವ ನೀರಜ್‌ ಚೋಪ್ರಾ ಮುಂದಿನ ವರ್ಷ ಅಮೆರಿಕದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನ ಪಡೆಯುವ ಗುರಿ ಹೊಂದಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೋಪ್ರಾ, ನಾನು ಈಗಾಗಲೇ ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌ ಮತ್ತು ಕ್ವಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದಿದ್ದೇನೆ. ಹಾಗಾಗಿ ಮುಂದಿನ ವರ್ಷ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವುದು ನನ್ನ ಗುರಿಯಾಗಿದೆ ಎಂದರು.

ನನ್ನ ಸಾಧನೆಯನ್ನು ಸ್ಮರಣೀಯಗೊಳಿಸಲು ಎಎಫ್ಐ ಈ ತೀರ್ಮಾನ ಕೈಗೊಂಡದಕ್ಕೆ ನನಗೆ ಅತೀವ ಸಂತಸ ನೀಡಿದೆ ನನ್ನಿಂದ ಪ್ರೇರಿತಗೊಂಡು ಯುವಕರು ಜಾವಲಿನ್‌ ಕಡೆಗೆ ಮುಖಮಾಡಿದರೆ ಅದಕ್ಕಿಂತ ದೊಡ್ಡ ಗೌರವ ಮತ್ತೂಂದಿಲ್ಲಎಂದು ನೀರಜ್‌ ಚೋಪ್ರಾ ತಿಳಿಸಿದ್ದಾರೆ.

ಈ ಕೂಟ ಇದೇ ವರ್ಷ ಅಮೆರಿಕದ ಒರೆಗಾನ್‌ನಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್‌-19ನಿಂದ 2020 ಟೋಕ್ಯೊ ಒಲಿಂಪಿಕ್ಸ್‌ ಅನ್ನು ಒಂದು ವರ್ಷ ಮುಂದೂಡಿದ ನಂತರ ಇದನ್ನು 2022ಕ್ಕೆ ಮುಂದೂಡಲಾಯಿತು. ಈಗ 2022ರ ಜುಲೈ 15-24ರ ವರೆಗೆ ನಡೆಯಲಿದೆ.

ಆ.7 ರಾಷ್ಟ್ರೀಯ ಜಾವೆಲಿನ್‌ ದಿನವಾಗಿ ಆಚರಣೆ : 

Advertisement

ನವದೆಹಲಿ: ಟೋಕ್ಯೊದಲ್ಲಿ ನಡೆದ ಒಲಿಂಪಿಕ್‌ನ ಜಾವೆಲಿನ್‌ ಎಸೆತದಲ್ಲಿ ಚಿನ್ನ ಗೆದ್ದು ನೀರಜ್‌ ಚೋಪ್ರಾ ಇತಿಹಾಸ ನಿರ್ಮಿಸಿದ ಆಗಸ್ಟ್‌ 7 ಅನ್ನು ರಾಷ್ಟ್ರೀಯ ಜಾವೆಲಿನ್‌ ದಿನವನ್ನಾಗಿ ಆಚರಿಸಲಾಗುವುದು ಎಂದು ಅಥ್ಲೆಟಿಕ್ಸ್ ಫೆಡರೇಶನ್‌ ಆಫ್‌ ಇಂಡಿಯಾ (ಎಎಫ್‌ಐ) ತಿಳಿಸಿದೆ.

23 ವರ್ಷದ ನೀರಜ್‌ ಚೋಪ್ರಾ ಆಗಸ್ಟ್ 7 ಶನಿವಾರದಂದು ಟೋಕ್ಯೊದಲ್ಲಿ ವೈಯಕ್ತಿಕ ಒಲಿಂಪಿಕ್‌ ಚಿನ್ನ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 87.58 ಮೀಟರ್‌ ಜಾವೆಲಿನ್‌ ಎಸೆದು ಚಿನ್ನ ಮುಡಿಗೇರಿಸಿಕೊಂಡರು.

ಒಲಿಂಪಿಕ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳ ಅಭಿನಂದನಾ ಸಮಾರಂಭದಲ್ಲಿ ಎಎಫ್‌ಐನ ಯೋಜನಾ ಆಯೋಗದ ಅಧ್ಯಕ್ಷ ಲಲಿತ್‌ ಭಾನೋಟ್‌ ಮಾತನಾಡಿ, ಜಾವೆಲಿನ್‌ ಅನ್ನು ಪ್ರೋತ್ಸಾಹಿಸಲು ಮುಂದಿನ ವರ್ಷದಿಂದ ನಮ್ಮ ಅಂಗ ಸಂಸ್ಥೆಗಳು ತಮ್ಮ ರಾಜ್ಯಗಳಲ್ಲಿ ಜಾವೆಲಿನ್‌ ಸ್ಪರ್ಧೆಗಳನ್ನು ನಡೆಸುತ್ತವೆ ಎಂದರು.

ಜಿಲ್ಲಾ ಮಟ್ಟದಲ್ಲೂ ಜಾವೆಲಿನ್‌ ಸ್ಫರ್ಧೆ ಹಮ್ಮಿಕೊಳ್ಳಲಾಗುವುದು ಹಾಗೂ ಎಲ್ಲಾ ಫೆಡರೇಷನ್‌ಗಳಿಗೂ ಅವಶ್ಯವಿರುವ ಜಾವೆಲಿನ್‌ ಅನ್ನು ನಾವೇ ಪೂರೈಸುತ್ತೇವೆ. ಜಾವೆಲಿನ್‌ ಅನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಎಎಫ್‌ಐ 2018ರಲ್ಲಿ ರಾಷ್ಟ್ರೀಯ ಓಪನ್‌ ಜಾವೆಲಿನ್‌ ಥ್ರೋ ಚಾಂಪಿಯನ್‌ ಶಿಪ್‌ಗ್ಳನ್ನು ಆರಂಭಿಸಿತು ಮತ್ತು ಅದರ ಮೂರನೇ ಆವೃತ್ತಿಯನ್ನು ಈ ವರ್ಷದ ಅಕ್ಟೋಬರ್‌ನಲ್ಲಿ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಚೋಪ್ರಾ ಬ್ರಾಂಡ್‌ ಮೌಲ್ಯ ಹೆಚ್ಚಳ:

ಒಲಿಂಪಿಕ್‌ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ ಅವರ ಬ್ರಾಂಡ್‌ ಮೌಲ್ಯವು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಯ ಎರಡನೆ ಸ್ಥಾನದಲ್ಲಿದೆ. ಟೋಕ್ಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಕೂಡಲೇ ನೀರಜ್‌ ಚೋಪ್ರಾ ಅದೃಷ್ಟ ಸಂಪೂರ್ಣ ಬದಲಾಗಿ ಹೋಗಿದೆ. ಅವರ ಬ್ರಾಂಡ್‌ ಮೌಲ್ಯ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದು ವಿವಿಧ ಕಂಪನಿಗಳು ಅವರ ಜೊತೆ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲು ತುದಿಗಾಲಲ್ಲಿ ನಿಂತಿವೆ.

ವೇರಬಲ್ಸ್, ಇ-ಕಾಮರ್ಸ್‌, ಆಟೋಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ವಿಭಾಗಗಳಾದ್ಯಂತ ವಿವಿಧ ಬ್ರಾಂಡ್‌ಗಳು ಒಲಿಂಪಿಕ್‌ನಲ್ಲಿ ಪದಕ ಗೆದ್ದ ನೀರಜ್‌ ಚೋಪ್ರಾ, ಪಿ.ವಿ.ಸಿಂಧು, ಲವ್ಲಿನಾ ಬೊರ್ಗೊಹೈನ್‌, ಮೀರಾಬಾಯಿ ಚಾನು ಅವರ ಒಪ್ಪಂದದ ಸಹಿಗೆ ಅಣಿಯಾಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next