Advertisement

ಪಿಎನ್‌ಬಿ ಬಳಿಕ ಮತ್ತೊಂದು ಹಗರಣ ಬೆಳಕಿಗೆ: 5000 ಕೋಟಿ ಮೋಸ!

11:50 PM Feb 18, 2018 | Team Udayavani |

ಹೊಸದಿಲ್ಲಿ: ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಬಳಿಕ ಹಗರಣಗಳ ಸರಣಿಯೇ ಬೆಳಕಿಗೆ ಬರತೊಡಗಿದೆ. ಉದ್ಯಮಿ ನೀರವ್‌ ಮೋದಿ ಅವರ 11 ಸಾವಿರ ಕೋಟಿ ರೂ. ಹಗರಣ ಬಹಿರಂಗಗೊಳ್ಳುತ್ತಿದ್ದಂತೆ, ರೊಟೊಮ್ಯಾಕ್‌ ಪೆನ್ಸ್‌ ಕಂಪೆನಿಯ ಮಾಲಕ ವಿಕ್ರಮ್‌ ಕೊಠಾರಿ ಐದು ಬ್ಯಾಂಕ್‌ಗಳಿಂದ 5,000 ಕೋಟಿ ರೂ. ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಅಂಶವೂ ಬೆಳಕಿಗೆ ಬಂದಿದೆ.

Advertisement

ಅಲಹಾಬಾದ್‌ ಬ್ಯಾಂಕ್‌, ಬ್ಯಾಂಕ್‌ ಆಫ್ ಇಂಡಿಯಾ, ಬ್ಯಾಂಕ್‌ ಆಫ್ ಬರೋಡಾ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ ತನ್ನ ನಿಯಮಗಳನ್ನೇ ಬದಲಿಸಿ ಕೊಠಾರಿಗೆ ಸಾಲ ನೀಡಿದೆ. ಯೂನಿಯನ್‌ ಬ್ಯಾಂಕ್‌ನಿಂದ 485 ಕೋಟಿ ರೂ. ಮತ್ತು ಅಲಹಾಬಾದ್‌ ಬ್ಯಾಂಕ್‌ನಿಂದ 352 ಕೋಟಿ ರೂ. ಕೊಠಾರಿ ಸಾಲ ಪಡೆದಿದ್ದಾರೆ. ಅಷ್ಟೇ ಅಲ್ಲ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನಿಂದ 1,400 ಕೋಟಿ ರೂ., ಬ್ಯಾಂಕ್‌ ಆಫ್ ಇಂಡಿಯಾದಿಂದ 1,395 ಕೋಟಿ ರೂ. ಮತ್ತು ಬ್ಯಾಂಕ್‌ ಆಫ್ ಬರೋಡಾದಿಂದ 600 ಕೋಟಿ ರೂ. ಸಾಲ ಪಡೆದಿದ್ದಾರೆ.

ಒಂದು ವರ್ಷದ ಹಿಂದೆ ಸಾಲ ಪಡೆದಿದ್ದ ಕೊಠಾರಿ ಈಗಾಗಲೇ ನಾಪತ್ತೆಯಾಗಿದ್ದಾರೆ. ಸಾಲದ ಬಡ್ಡಿ ಯನ್ನಾಗಲಿ, ಅಸಲಿನ ಭಾಗವನ್ನಾಗಲಿ ಪಾವತಿ ಮಾಡಿಲ್ಲ. ಕಾನ್ಪುರದಲ್ಲಿರುವ ಕೊಠಾರಿ ಕಚೇರಿಯನ್ನು ಲಾಕ್‌ ಮಾಡಲಾಗಿದೆ. ಸಾಲದ ಮೊತ್ತವನ್ನು ಅಡಮಾನ ಇಟ್ಟಿರುವ ಸೊತ್ತುಗಳಿಂದ ತೀರಿಸಿಕೊಳ್ಳಲಾಗುತ್ತದೆ ಎಂದು ಅಲಹಾಬಾದ್‌ ಬ್ಯಾಂಕ್‌ ಹೇಳಿಕೆ ನೀಡಿದೆ. ಆದರೆ ಈತ ಅಡಮಾನ ಇಟ್ಟಿರುವ ಫ್ಲ್ಯಾಟ್‌ ಹಾಗೂ ಇತರ ಸೊತ್ತು ಗಳನ್ನು 17 ಕೋಟಿ ರೂ.ಗೆ ಹರಾಜು ಹಾಕಲಾಗಿತ್ತಾದರೂ ಅದಕ್ಕೆ ಖರೀದಿದಾರರು ಮುಂದೆ ಬಂದಿಲ್ಲ. ಇನ್ನೊಂದೆಡೆ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಸುಮಾರು 650 ಕೋಟಿ ರೂ. ವಸೂಲಿ ಮಾಡಿದೆ.

ಸಲ್ಮಾನ್‌ ಖಾನ್‌ ಬ್ರ್ಯಾಂಡ್‌ ಅಂಬಾಸಿಡರ್‌!: ರೊಟೊಮ್ಯಾಕ್‌ ಪೆನ್‌ಗಳಿಗೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದರು. ಇದ ರಿಂದಾಗಿ ಕಂಪೆನಿಯ ವ್ಯಾಪಾರ ಹೆಚ್ಚಳವಾಗಿತ್ತು. ಆದರೆ ಈಗ ವಿಕ್ರಮ್‌ ಕೊಠಾರಿ ಸುಸ್ತಿದಾರ ಆಗಿದ್ದಾರೆ. ಇವಿಷ್ಟಲ್ಲದೆ ಅವರ ಮೇಲೆ 600 ಕೋಟಿ ರೂ. ಚೆಕ್‌ ಬೌನ್ಸ್‌ ಪ್ರಕರಣವೂ ಇದೆ. ಈ ಮಧ್ಯೆ ರೊಟೊಮ್ಯಾಕ್‌ ಪೆನ್ಸ್‌ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಕೊಠಾರಿ ಕಾನ್ಪುರದಲ್ಲೇ ಇದ್ದಾರೆ. ಸಾಲ ಮರುಪಾವತಿ ಸಂಬಂಧ ಬ್ಯಾಂಕ್‌ ಜತೆಗೆ ಮಾತುಕತೆ ನಡೆದಿದೆ ಎಂದು ಹೇಳಿದೆ.

ಇನ್ನೂ ಎರಡು ಸ್ಟೋರ್‌ ತೆರೆದ ನೀರವ್‌ !
ಭಾರತದಲ್ಲಿ  ಸಿಬಿಐ ನೀರವ್‌ ಸೊತ್ತಿನ ಮೇಲೆ ದಾಳಿ ನಡೆಸಲು ನಿರ್ಧರಿಸುತ್ತಿದ್ದರೆ, ವಿದೇಶದಲ್ಲಿ ನೀರವ್‌ ಎರಡು ಮಳಿಗೆಗಳಿಗೆ ಚಾಲನೆ ನೀಡಿದ್ದಾರೆ ! ಫೆ. 5ರಂದು ಕೌಲಾಲಂಪುರದಲ್ಲಿ ಮತ್ತು ಫೆ. 9ರಂದು ಮಕಾವ್‌ನಲ್ಲಿ ಮಳಿಗೆಗಳನ್ನು ನೀರವ್‌ ತೆರೆದಿದ್ದಾರೆ. ನೀರವ್‌ ವಿರುದ್ಧ ಲುಕ್‌ಔಟ್‌ ನೋಟಿಸ್‌ ಹೊರಡಿಸಿದ ಬಳಿಕವೇ ಈ ಸ್ಟೋರ್‌ಗಳನ್ನು ತೆರೆಯಲಾಗಿದೆ.

Advertisement

200 ನಕಲಿ ಕಂಪೆನಿಗಳ ಮೇಲೆ ಕಣ್ಣು: ನೀರವ್‌ ಮೋದಿ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇ ಶನಾಲಯ ಈಗ 200 ಸಂಸ್ಥೆಗಳು ಮತ್ತು ಅವುಗಳ ಬೇನಾಮಿ ಸೊತ್ತಿನ ಮೇಲೆ ಕಣ್ಣಿಟ್ಟಿದೆ. ರವಿವಾರವೂ 45 ಕಡೆಗಳಲ್ಲಿ  ಶೋಧ ನಡೆಸಿದ ಜಾರಿ ನಿರ್ದೇಶನಾಲಯ, ಹಲವು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಆಭರಣ ಶೋರೂಂಗಳು ಮತ್ತು ವರ್ಕ್‌ಶಾಪ್‌ಗ್ಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ದೇಶ – ವಿದೇಶಗಳಲ್ಲಿ 200 ನಕಲಿ ಕಂಪೆನಿಗಳನ್ನು ಸೃಷ್ಟಿಸಿ ಅದರ ಮೂಲಕ ಸೊತ್ತುಗಳನ್ನು  ಖರೀದಿಸಲಾಗಿತ್ತು ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಈ ವರೆಗೆ 5,674 ಕೋಟಿ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರ ಗೀತಾಂಜಲಿ ಜೆಮ್ಸ್‌ ಮತ್ತು ಅದರ ಸಂಸ್ಥಾಪಕ ಮೆಹುಲ್‌ ಚೋಕ್ಸಿಗೆ ಸಂಬಂಧಿಸಿದ 9 ಬ್ಯಾಂಕ್‌ ಖಾತೆಗಳನ್ನು ವಶಪಡಿಸಿಕೊಂಡಿದೆ.

ಪರೀಕ್ಷೆ ಎದುರಿಸುವುದು ಹೇಗೆ ಎಂದು ಮಕ್ಕಳಿಗೆ 2 ಗಂಟೆ ಗಳವರೆಗೆ ಪಾಠ ಮಾಡುವ ಪ್ರಧಾನಿ ಮೋದಿ, 22 ಸಾವಿರ ಕೋಟಿ ರೂ. ಹಗರಣದ ಬಗ್ಗೆ 2 ನಿಮಿಷವೂ ಮಾತನಾಡುವುದಿಲ್ಲ. ವಿತ್ತ ಸಚಿವ ಅರುಣ್‌ ಜೇಟ್ಲಿ ಅಡಗಿಕೊಂಡಿದ್ದಾರೆ.
ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next