Advertisement

ರಾಜಕೀಯ ಅಸ್ಥಿರತೆ ಲಾಭ ಪಡೆಯುತ್ತಾ ಸೇನೆ?

04:55 AM Jul 29, 2017 | Team Udayavani |

ಇಸ್ಲಾಮಾಬಾದ್‌: ಪನಾಮಾ ಪೇಪರ್ ಹಗರಣದಲ್ಲಿ ಪಾಕ್‌ ಪ್ರಧಾನಿ ಷರೀಫ್ ಪದಚ್ಯುತಗೊಂಡ ಬೆನ್ನಲ್ಲೇ, ಅತ್ಯಂತ ಪ್ರಬಲವಾಗಿರುವ ಪಾಕ್‌ ಸೇನೆ, ಅಲ್ಲಿನ ರಾಜಕೀಯ ಅಸ್ಥಿರತೆಯ ಲಾಭ ಪಡೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಪಾಕ್‌ ಇತಿಹಾಸದಲ್ಲಿ 3 ಬಾರಿ ಸೇನಾಡಳಿತವನ್ನು ಕಂಡಿದೆ. ರಾಜಕೀಯ ಅಸ್ಥಿರತೆ, ಆಡಳಿತವನ್ನು ಬುಡಮೇಲು ಮಾಡಿಯೇ ಅಧಿಕಾರ ಹಿಡಿದ ಕುಖ್ಯಾತಿ ಅದಕ್ಕಿದೆ. ಇದಕ್ಕೆ ಕಾರಣ, ಅಲ್ಲಿನ ಸೇನಾದಂಡನಾಯಕ ಸ್ಥಾನ ಅತ್ಯಂತ ಪ್ರಬಲವಾಗಿರುವುದು. 1958-1971, 1977-1988, 1999-2008 ಅವಧಿಯಲ್ಲಿ ಪಾಕ್‌ನಲ್ಲಿ ಸೇನಾ ಆಡಳಿತವಿದ್ದು, ಪ್ರಜಾಪ್ರಭುತ್ವ ಆಡಳಿತವನ್ನು ಓವರ್‌ಟೇಕ್‌ ಮಾಡುವ ಖಯಾಲಿ ಹೊಂದಿದೆ. ಈಗಲೂ ಹಲವು ಬಾರಿ ಅಲ್ಲಿನ ಸೇನೆ ವಿವಿಧ ಕಾರಣಕ್ಕೆ ಆಡಳಿತದ ಮೇಲೆ ಪ್ರಭಾವ ಬೀರುವ ನಿದರ್ಶನವಿದೆ. ಇದಕ್ಕೆ ಗೂಢಚಾರಿಕೆ ಆರೋಪದಲ್ಲಿ ಗಲ್ಲುಶಿಕ್ಷೆ ವಿಧಿಸಲಾದ ಕುಲಭೂಷಣ್‌ ಜಾಧವ್‌ ಪ್ರಕರಣ ಒಂದು ಉದಾಹರಣೆಯಷ್ಟೇ. ಜೊತೆಗೆ ಆಫ್ಘಾನಿಸ್ಥಾನ-ಭಾರತದ ವಿಚಾರದಲ್ಲಿ ಅದು ಆಡಳಿತ ಪಕ್ಷಗಳ ಮೇಲೆ ನಿರಂತರ ಪ್ರಭಾವ ಬೀರುವ ಅಭ್ಯಾಸವನ್ನೂ ಹೊಂದಿದೆ.

Advertisement

ಮೂರು ನ್ಯಾಯಪೀಠ ಮತ್ತು 50 ವಿಚಾರಣೆ: ಷರೀಫ್ ವಿರುದ್ಧದ ವಿಚಾರಣೆ ಜನವರಿಯಲ್ಲಿ ಆರಂಭಗೊಂಡಿತ್ತು. ಪಾಕ್‌ ಸುಪ್ರೀಂಕೋರ್ಟಲ್ಲಿ 50 ವಿಚಾರಣೆಗಳು ನಡೆದಿದ್ದವು. ಏ. 20ರಂದು ಸುಪ್ರೀಂನಿಂದ ಮೊದಲ ತೀರ್ಪು ಹೊರಬಿದ್ದಿತ್ತು. ಆ ಸಂದರ್ಭದಲ್ಲಿ ಐವರು ನ್ಯಾಯಮೂರ್ತಿಗಳ ಪೀಠ 3-2ರ ಅಂತರದ ತೀರ್ಪು ನೀಡಿ, ಆರೋಪಗಳಿಗೆ ಸೂಕ್ತ ಸಾಕ್ಷ್ಯವಿಲ್ಲ ಎಂದು ಹೇಳಿತ್ತು. ಒಂದು ವೇಳೆ ಆರೋಪಗಳಿದ್ದಲ್ಲಿ ತನಿಖೆಗಾಗಿ ಜಂಟಿ ತನಿಖಾ ತಂಡ (ಜೆಐಟಿ) ರಚಿಸಲು ಆದೇಶ ನೀಡಿತ್ತು. ಅದು ಜು.10ರಂದು ವರದಿ ಸಲ್ಲಿಸಿತ್ತು. ಷರೀಫ್ ಹಾಗೂ ಕುಟುಂಬದ ವಿರುದ್ಧ 14 ಸಾವಿರ ಪುಟಗಳಷ್ಟು ದಾಖಲೆಗಳನ್ನು ಸಲ್ಲಿಸಲಾಗಿತ್ತು. ಮಾತ್ರವಲ್ಲದೆ ಒಟ್ಟು ಮೂರು ನ್ಯಾಯಪೀಠಗಳು ವಿಚಾರಣೆ ನಡೆಸಿದ್ದವು.

ಭಾರತದ ಮೇಲೆ ಏನು ಪರಿಣಾಮ? 
ಒಂದು ವೇಳೆ ಪಾಕ್‌ನಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದು, ಸೇನೆ ಕೈ ಮೇಲಾದರೆ, ಅದರ ನೇರ ಪರಿಣಾಮ ಭಾರತದ ಮೇಲಾಗುತ್ತದೆ. ಪಾಕ್‌ನಲ್ಲಿ ಪ್ರಜಾಪ್ರಭುತ್ವ ಸರಕಾರವಿದ್ದರೆ, ಅದು ಅಂತಾರಾಷ್ಟ್ರೀಯ ಮಟ್ಟದ ಒತ್ತಡದಿಂದ ಇಂತಹ ಕೃತ್ಯಕ್ಕೆ ಅಲ್ಪ ಕಡಿವಾಣ ಹಾಕುತ್ತದೆ. ಆದರೂ ಸೇನೆಯ ಕುಮ್ಮಕ್ಕಿನಿಂದ ನಡೆಯುವ ಎಲ್ಲ ಉಗ್ರ ಚಟುವಟಿಕೆ ನಿಯಂತ್ರಣಕ್ಕೆ ಸಾಧ್ಯವಾಗುವುದಿಲ್ಲ. 1990ರ ದಶಕದಲ್ಲಿ ಸೇನಾಡಳಿತದ ಅವಧಿಯಲ್ಲಿ ಅಲ್ಲಿನ ಸೇನೆ ಭಾರತದೊಂದಿಗೆ ನಿರಂತರ ಛಾಯಾ ಸಮರ ನಡೆಸಿದೆ. 1999ರಲ್ಲಿ ಕಾರ್ಗಿಲ್‌ ಆಕ್ರಮಣವೂ ಸೇನೆಯದ್ದೇ ಪ್ಲಾನ್‌ನಿಂದ ನಡೆದಿದೆ. ಸೇನಾಡಳಿತಕ್ಕೆ ಪಾಕ್‌ ಈಡಾದರೆ ಭಾರತದ ಮೇಲಾಗುವ ಪರಿಣಾಮವನ್ನು ಹೀಗೆ ಪಟ್ಟಿಮಾಡಬಹುದು.

– ಪಾಕ್‌ನೊಂದಿಗೆ ದ್ವಿಪಕ್ಷೀಯ ಮಾತುಕತೆಯ ದಾರಿಗಳು ಸಂಪೂರ್ಣ ಬಂದ್‌

– ಪಾಕ್‌ನಿಂದ ಪೂರ್ಣ ರೂಪದ ಛಾಯಾ ಸಮರ

Advertisement

– ಕಾಶ್ಮೀರ ಗಡಿಯಲ್ಲಿ ಉಗ್ರರ, ಸೇನೆಯ ಚಿತಾವಣೆ ಹೆಚ್ಚಳ 

– ಭಾರತದ ಮೇಲಿನ ವ್ಯಾಪಕ ದ್ವೇಷದಿಂದ ದಾಳಿಯ ಯತ್ನಗಳೂ ಆಗಬಹುದು

ಏನಿದು ಪನಾಮಾ ಪೇಪರ್‌?
ಪನಾಮ ಪೇಪರ್‌ ಎನ್ನುವುದು ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ಎಂಬ ಅಮೆರಿಕ ಮೂಲದ ಸರಕಾರೇತರ ಸಂಘಟನೆಯಿಂದ ಬಿಡುಗಡೆಯಾದ ದಾಖಲೆಗಳು. ಕೆಲ ಮೂಲಗಳಿಂದ ಪನಾಮ ಮೂಲದ ಕಾನೂನು ಸೇವಾ ಕಂಪನಿ (ನಕಲಿ ಕಂಪನಿಗಳನ್ನು ಸೃಷ್ಟಿಸುವ ಕುಖ್ಯಾತಿಯೂ ಇದಕ್ಕಿದೆ) ಮೊಸ್ಸಾಕ್‌ ಫೋನ್ಸೆಕಾದಿಂದ ಗುಪ್ತವಾಗಿ ಈ ಮಾಹಿತಿ ಲಭ್ಯವಾಗಿದ್ದಾಗಿ ಐಸಿಐಜೆ ಹೇಳಿತ್ತು. ಈ ದಾಖಲೆಗಳಲ್ಲಿ ವಿಶ್ವದ ಸುಮಾರು 12 ವಿವಿಧ ಈಗಿನ ಮತ್ತು ಮಾಜಿ ನಾಯಕರು, 128 ವಿವಿಧ ರಾಜಕಾರಣಿಗಳು ಮತ್ತು ಸರಕಾರಿ ಅಧಿಕಾರಿಗಳು, ಕೋಟ್ಯಧೀಶರು, ಸೆಲೆಬ್ರಿಟಿಗಳು ವಿವಿಧೆಡೆ ರಹಸ್ಯವಾಗಿ ಹಣ ಸಂಗ್ರಹಿಸಿದ ಮಾಹಿತಿ ಇದೆ. 1977 ರಿಂದ 2015 ರವರೆಗೆ 40 ವರ್ಷದ ಅವಧಿಯ ಮಾಹಿತಿಗಳು, 2.14 ಲಕ್ಷ ವಿದೇಶಿ ಸಂಸ್ಥೆಗಳ ಮಾಹಿತಿಗಳು ಇದರಲ್ಲಿವೆ. ಪನಾಮಾ ಪೇಪರ್‌ನಲ್ಲಿ ಭಾರತದ ಪೈಕಿ ನಟರಾದ ಅಮಿತಾಭ್‌ ಬಚ್ಚನ್‌, ಸೊಸೆ ಐಶ್ವರ್ಯಾ ರೈ, ಡಿಎಲ್‌ಎಫ್ ಮಾಲೀಕ ಕೆ.ಪಿ.ಸಿಂಗ್‌ ಮತ್ತು ಅವರ 9 ಮಂದಿ ಕುಟುಂಬಿಕರು, ಉದ್ಯಮಿ ಗೌತಮ್‌ ಅದಾನಿ ಸೋದರ ವಿನೋದ್‌ ಅದಾನಿ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅಳಿಯ ರಾಜೇಂದ್ರ ಪಾಟೀಲ್‌ ಸೇರಿದಂತೆ 500 ಮಂದಿ/ಕಂಪನಿಗಳ ಹೆಸರಿದ್ದುದಾಗಿ ಹೇಳಲಾಗಿದೆ.

ಷರೀಫ್ ಮುಂದಿನ ನಡೆ?
ಪ್ರಧಾನಿ ಹುದ್ದೆಯಿಂದ ಕೆಳಗಿಳಿದರೂ ಪಿಎಂಎಲ್‌-ಎನ್‌ ಪಕ್ಷದ ಮುಖ್ಯಸ್ಥರು ಅವರೇ. ಹೀಗಾಗಿ ಮುಂದಿನ ಪ್ರಧಾನಿ ಆಯ್ಕೆಯಲ್ಲಿ ಅವರ ಮಾತೇ ನಡೆಯಲಿದೆ.

ಹಿಂದೆ ಇಂಥ ಘಟನೆಗಳಾಗಿದ್ದವೇ?
2012ರಲ್ಲಿ ನ್ಯಾಯಾಂಗ ನಿಂದನೆ ಆರೋಪ ಸಂಬಂಧ ಪ್ರಧಾನಿಯಾಗಿದ್ದ ಯೂಸುಫ್ ರಾಜಾ ಗಿಲಾನಿ ಪದತ್ಯಾಗ ಮಾಡಿದ್ದರು. ಅಧ್ಯಕ್ಷರಾಗಿದ್ದ ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಪ್ರಕರಣ ತನಿಖೆಗೆ ಸುಪ್ರೀಂ ಆದೇಶ ನೀಡಿದ್ದರೂ ಅನುಷ್ಠಾನಗೊಳಿಸಲಿಲ್ಲ.

ಮೇಲ್ಮನವಿ ಸಾಧ್ಯವೇ?
ತಾಂತ್ರಿಕವಾಗಿ ಹೇಳುವುದಿದ್ದರೆ ಮೇಲ್ಮನವಿ ಸಾಧ್ಯವಿದೆ. ಆದರೆ ವಾಸ್ತವವಾಗಿ ಅಂಥ ಸಾಧ್ಯತೆ ಕಡಿಮೆ. ತೀರ್ಪಿನಲ್ಲಿ ದೋಷಪೂರಿತ ಅಂಶಗಳು ಕಂಡು ಬಂದರೆ ಷರೀಫ್ ವಕೀಲರ ತಂಡ ಆ ಕ್ರಮಕ್ಕೆ ಮನಸ್ಸು ಮಾಡಬಹುದು.

ಅವಧಿಪೂರ್ವ ಚುನಾವಣೆ?
ಅಂಥ ಸಾಧ್ಯತೆ ಕಡಿಮೆ. ಏಕೆಂದರೆ ಪ್ರಧಾನಿ ಶಿಫಾರಸಿನ ಮೇರೆಗೆ ರಾಷ್ಟ್ರಾಧ್ಯಕ್ಷರು ಆ ಕ್ರಮ ಕೈಗೊಳ್ಳುತ್ತಾರೆ. ಪಾಕಿಸ್ಥಾನದಲ್ಲಿ ಸಂಸತ್‌ ಚುನಾವಣೆ ನಿಗದಿಯಾಗಿರುವುದು 2018ಕ್ಕೆ.

ಮತ್ತೆ ಸೇನೆ ಕೈಗೆ ಆಡಳಿತ?
ಹಲವರ ಪ್ರಕಾರ ಪಾಕಿಸ್ಥಾನದಲ್ಲಿ ಮತ್ತೆ ಸೇನೆಯ ಕೈಗೆ ಆಡಳಿತ ಸಿಗುವ ಸಾಧ್ಯತೆಯೇ ಹೆಚ್ಚು. ಈಗಾಗಲೇ ಅಲ್ಲಿನ ವಿದೇಶಾಂಗ, ರಕ್ಷಣೆ ಮತ್ತು ಇನ್ನಿತರ ಪ್ರಮುಖ ನೀತಿ ನಿರೂಪಣಾ ವಿಭಾಗಗಳಲ್ಲಿ ಸೇನೆಯ ಮಾತೇ ಅಂತಿಮ. ಆದರೆ, ಜನಾಭಿಪ್ರಾಯದ ಪ್ರಕಾರ ಮತ್ತೆ ಸೇನೆಯ ಆಡಳಿತಕ್ಕೆ ಮಾನ್ಯತೆ ಸಿಗಲಾರದು.

ಅರ್ಜಿದಾರರು ಯಾರು?
ಪಾಕಿಸ್ಥಾನ ತೆಹ್ರಿಕ್‌-ಇ-ಇನ್ಸಾಫ್ ಮುಖ್ಯಸ್ಥ ಇಮ್ರಾನ್‌ ಖಾನ್‌, 
ಅವಾಮಿ ಲೀಗ್‌ ಮುಖ್ಯಸ್ಥ ಶೇಖ್‌ ರಶೀದ್‌, ಜಮಾತ್‌-ಇ-ಇಸ್ಲಾಮಿ ವರಿಷ್ಠ ಸಿರಾಜುಲ್‌ ಹಕ್‌

ರಾಜೀನಾಮೆ ಕೊಟ್ಟ 2ನೇ ಪಿಎಂ
ಪನಾಮಾ ದಾಖಲೆಗಳಿಗೆ ಸಂಬಂಧಿಸಿದಂತೆ ವಿಶ್ವದ ರಾಜಕೀಯ ಭೂಪಟದಲ್ಲಿ ತಲೆದಂಡಕ್ಕೆ ಒಳಗಾದ ಎರಡನೇ ಪ್ರಧಾನಿ ನವಾಜ್‌ ಷರೀಫ್. 2016ರ ಎ.5ರಂದು ಐಸ್‌ಲ್ಯಾಂಡ್‌ ಪ್ರಧಾನಿಯಾಗಿದ್ದ ಸಿಗು¾ಂದರ್‌ ದಾವ್ಯೋ ಗುನೌಸ್ಕೋ ಪದತ್ಯಾಗ ಮಾಡಿದ್ದರು. ಅವರ ಕುಟುಂಬ ಸದಸ್ಯರೂ ತೆರಿಗೆ ಸ್ವರ್ಗ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ.

ಯಾರ ವಿರುದ್ಧ ಕೇಸು?
ಪುತ್ರಿ ಮರಿಯಾಮ್‌
ಪುತ್ರರು- ಹಸನ್‌ ನವಾಜ್‌, ಹುಸೈನ್‌ ನವಾಜ್‌ ಷರೀಫ್

ಹೆಚ್ಚು ಬಾರಿ ಪ್ರಧಾನಿ 
ನವಾಜ್‌ ಷರೀಫ್
2013 ಜೂ.5      2017 ಜು.28
1997 ಫೆ.17      1999 ಅ.12
1990 ಅ.19      1993 ಜು.18

ಬೆನಜೀರ್‌ ಭುಟ್ಟೋ
1993 ಅ.19      1996 ನ.5
1988 ಡಿ.2      1990 ಆ.6

– ಈವರೆಗೆ 3 ಬಾರಿ ಪಾಕ್‌ನಲ್ಲಿ ಸೇನಾಡಳಿತ
– ಈಗ ಮತ್ತೆ ಆಡಳಿತ ಓವರ್‌ಟೇಕ್‌ ಮಾಡುವ ಸಾಧ್ಯತೆ

Advertisement

Udayavani is now on Telegram. Click here to join our channel and stay updated with the latest news.

Next