ಹೈದರಾಬಾದ್: ವಿಶ್ವದಾದ್ಯಂತ ಕಮಾಲ್ ಮಾಡಿದ ಪ್ರಭಾಸ್ (Prabhas) ʼಕಲ್ಕಿ 2898 ಎಡಿʼ (Kalki 2898 AD) ಥಿಯೇಟರ್ ಬಳಿಕ ಓಟಿಟಿಯಲ್ಲೂ ಸದ್ದು ಮಾಡಿದೆ. ಸಿನಿಮಾದ ಎರಡನೇ ಭಾಗಕ್ಕೆ ಪ್ರೇಕ್ಷಕರು ಕಾಯುತ್ತಿದ್ದಾರೆ.
ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 1200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ʼಕಲ್ಕಿʼ ಹತ್ತಾರು ದಾಖಲೆಗಳನ್ನು ಬ್ರೇಕ್ ಮಾಡಿದೆ. ಸಿನಿಮಾದ ಯಶಸ್ಸು ವರ್ಲ್ಡ್ ವೈಡ್ ನಲ್ಲಿ ಸದ್ದು ಮಾಡಿದೆ.
ಪೌರಾಣಿಕ ಕಥೆಯಲ್ಲಿ ಆ್ಯಕ್ಷನ್ ಅಂಶಗಳನ್ನು ಸೇರಿಸಿ ಸಿನಿಮಾವನ್ನು ಮಾಡಲಾಗಿದೆ. ಅಭಿನಯ, ಚಿತ್ರಕಥೆ ಹಾಗೂ ವಿಎಫ್ ಎಕ್ಸ್ ವಿಚಾರದಲ್ಲಿ ʼಕಲ್ಕಿʼ ಪ್ರೇಕ್ಷಕರನ್ನು ರಂಜಿಸಿದೆ.
ಓಟಿಟಿಯಲ್ಲೂ ಭರ್ಜರಿ ಪ್ರದರ್ಶನ ಕಂಡ ಬಳಿಕ ಇದೀಗ, ʼಕಲ್ಕಿ 2898 ಎಡಿʼ ಆಸ್ಕರ್‌ಗೆ (Oscars 2025) ಶಾರ್ಟ್ ಲಿಸ್ಟ್ ಆಗಿದೆ ಎನ್ನುವ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಅತ್ಯುತ್ತಮ ವಿಷುವಲ್ ಎಫೆಕ್ಟ್ಸ್ ವಿಭಾಗದಲ್ಲಿ ʼಕಲ್ಕಿ 2898 ಎಡಿʼ2025ರ ಆಸ್ಕರ್ ಗೆ ನಾಮಿನೇಟ್ ಆಗಿದೆ ಎಂದು ʼಎಕ್ಸ್ʼ ಪೋಸ್ಟ್‌ವೊಂದರಲ್ಲಿ ಹೇಳಲಾಗಿದೆ. ಈ ಪೋಸ್ಟ್ ಎಲ್ಲೆಡೆ ಹರಿದಾಡಿದ್ದು, ಕೆಲ ಪ್ರೇಕ್ಷಕರು ಇದನ್ನೇ ಸತ್ಯವೆಂದು ನಂಬಿದ್ದಾರೆ.
‘ಕಲ್ಕಿ 2898 AD’ ಅತ್ಯುತ್ತಮ ವಿಷುವಲ್ ಎಫೆಕ್ಟ್ಸ್ ವಿಭಾಗದ 26 ಸಂಭಾವ್ಯ ನಾಮಿನೇಷನ್ ಪಟ್ಟಿಯಲ್ಲೂ ಇಲ್ಲ. ಈ ವಿಭಾಗದ ಶಾರ್ಟ್ ಲಿಸ್ಟ್ ನಲ್ಲಿ 20 ಸಿನಿಮಾಗಳಿರುತ್ತವೆ. ಅದರಲ್ಲಿ ಐದನ್ನು ಮಾತ್ರ ಅಂತಿಮ ನಾಮನಿರ್ದೇಶನಕ್ಕೆ ಕಳುಹಿಸಲಾಗುತ್ತದೆ. ಶಾರ್ಟ್ ಲಿಸ್ಟ್ ನ್ನು ಡಿಸೆಂಬರ್ 17 ರಂದು ಪ್ರಕಟಿಸಲಾಗುತ್ತದೆ ಎಂದು ʼದಿ ಹಾಲಿವುಡ್ ರಿಪೋರ್ಟರ್ʼ ವರದಿ ತಿಳಿಸಿದೆ.
ಅಂದಹಾಗೆ 97ನೇ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಪ್ರವೇಶಕ್ಕಾಗಿ ‘ಕಲ್ಕಿ 2898 AD’ ಸಿನಿಮಾವನ್ನು ಸಲ್ಲಿಸಲಾಗಿತ್ತು. ಆದರೆ ಅಂತಿಮವಾಗಿ ಕಿರಣ್ ರಾವ್ ಅವರ ‘ಲಾಪತಾ ಲೇಡೀಸ್’ ಸಿನಿಮಾ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿ ರೇಸ್‌ಗೆ ಎಂಟ್ರಿ ಆಗಿದೆ.
ನಾಗ್ ಅಶ್ವಿನ್ ನಿರ್ದೇಶನದ ʼಕಲ್ಕಿʼ ಸಿನಿಮಾದಲ್ಲಿ ಪ್ರಭಾಸ್, ಅಮಿತಾಭ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮುಂತಾದವರು ನಟಿಸಿದ್ದಾರೆ.
ಸದ್ಯ ಪ್ರಭಾಸ್ ಅವರ ʼರಾಜಾ ಸಾಬ್ʼ, ʼಸ್ಪಿರಿಟ್ʼ ಹಾಗೂ ʼಸಲಾರ್ -2ʼ ಸಿನಿಮಾಗಳು ಬರಲಿದ್ದು, ಈ ಸಿನಿಮಾಗಳು ಮುಂದಿನ ವರ್ಷವೇ ತೆರೆಕಾಣುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.