ನವದೆಹಲಿ: ಕೃಷಿ ಕಾಯ್ದೆ ರದ್ದು ಮಸೂದೆ 2021 ಲೋಕಸಭೆಯಲ್ಲಿ ಸೋಮವಾರ(ನವೆಂಬರ್ 29) ಅಂಗೀಕಾರಗೊಂಡ ಬೆನ್ನಲ್ಲೇ ವಿಪಕ್ಷಗಳ ತೀವ್ರ ಕೋಲಾಹಲದ ನಡುವೆ ರಾಜ್ಯಸಭೆಯಲ್ಲಿಯೂ ಅಂಗೀಕಾರಗೊಂಡಿದೆ ಎಮದು ವರದಿ ತಿಳಿಸಿದೆ.
ಇದನ್ನೂ ಓದಿ:418 ಟೆಸ್ಟ್ ವಿಕೆಟ್ ಗಳೊಂದಿಗೆ ಹರ್ಭಜನ್ ಸಿಂಗ್ ದಾಖಲೆ ಮುರಿದ ರವಿ ಅಶ್ವಿನ್
ವಿಪಕ್ಷ ಸಂಸದರ ತೀವ್ರ ಗದ್ದಲ, ಕೋಲಾಹಲದ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇಂದು ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಕೃಷಿ ಕಾಯ್ದೆ ರದ್ದು ಮಸೂದೆ 2021 ಅನ್ನು ಮಂಡಿಸಿದ್ದರು. ಇಂದಿನಿಂದ ಸಂಸತ್ ನ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಈ ಅಧಿವೇಶನದಲ್ಲಿ ಕೃಷಿ ಕಾಯ್ದೆ ರದ್ದು ಮಸೂದೆ ಸೇರಿದಂತೆ ಒಟ್ಟು 26 ಪ್ರಮುಖ ಮಸೂದೆಗಳು ಮಂಡನೆಯಾಗಲಿದೆ.
ಕೃಷಿ ಕಾಯ್ದೆ ರದ್ದು ಮಸೂದೆ ಬಗ್ಗೆ ಚರ್ಚೆ ನಡೆಸಲು ಅವಕಾಶವೇ ಕೊಟ್ಟಿಲ್ಲ ಎಂದು ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಡೆರೇಕ್ ಒಬ್ರಿಯಾನ್ ಆರೋಪಿಸಿದ್ದಾರೆ. ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧುರಿ ಮಾತನಾಡಿ, ವಿಪಕ್ಷಗಳು ಕಲಾಪ ಸುಗಮವನ್ನು ನಡೆಯಲು ಅವಕಾಶ ನೀಡುತ್ತಿಲ್ಲ ಎಂದು ಪ್ರಧಾನಿ ಆರೋಪಿಸುತ್ತಾರೆ. ಆದರೆ ಕೃಷಿ ಕಾನೂನು ರದ್ದು ಮಸೂದೆಯನ್ನು ಯಾವುದೇ ಚರ್ಚೆ ಇಲ್ಲದೇ ಲೋಕಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ ಎಂದು ದೂರಿದರು.
ಪ್ರತಿಭಟನೆ ಮುಂದುವರಿಯಲಿದೆ: ಟಿಕಾಯತ್
ಲೋಕಸಭೆ, ರಾಜ್ಯಸಭೆಯಲ್ಲಿ ಕೃಷಿ ಕಾಯ್ದೆ ರದ್ದು ಮಸೂದೆಯನ್ನು ಅಂಗೀಕರಿಸಿದ್ದರೂ ಕೂಡಾ ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ) ಹಾಗೂ ಇತರ ವಿಚಾರಗಳ ಕುರಿತು ಚರ್ಚೆ ನಡೆಯದೇ ಪ್ರತಿಭಟನೆ ಹಿಂಪಡೆಯುವ ಪ್ರಶ್ನೆ ಇಲ್ಲ ಎಂದು ಭಾರತೀಯ ಕಿಸಾನ್ ಸಂಘದ ಮುಖಂಡ ರಾಕೇಶ್ ಟಿಕಾಯತ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.