ಹೊಸದಿಲ್ಲಿ: ಕರ್ನಾಟಕ ಹೈಕೋರ್ಟಿಂದ ಅಲಹಾಬಾದ್‌ಗೆ ವರ್ಗಾವಣೆಯಾಗಿದ್ದಕ್ಕೆ ರಾಜೀನಾಮೆ ನೀಡಿದ ನ್ಯಾ| ಜಯಂತ್ ಪಟೇಲ್ ವಿಚಾರ ಸುಪ್ರೀಂಕೋರ್ಟಲ್ಲಿ ಗುರುವಾರ ಪ್ರಸ್ತಾಪವಾಯಿತು. ನ್ಯಾಯಮೂರ್ತಿಗಳ ಉನ್ನತ ಸಮಿತಿಯ ನಿರ್ಧಾರದ ಬಗ್ಗೆ ತುರ್ತಾಗಿ ವಿಚಾರಣೆ ನಡೆಯಬೇಕು ಎಂದು ನ್ಯಾಯವಾದಿ ಮ್ಯಾಥ್ಯೂಸ್ ಜೆ.ನೆಡುಂ ಪಾರ ಒತ್ತಾಯಿಸಿದ್ದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠದ ಆಕ್ರೋಶಕ್ಕೆ ಕಾರಣವಾಯಿತು.
ಹಿರಿಯ ನ್ಯಾಯವಾದಿಗಳು ತುರ್ತು ವಿಚಾರಣೆಗೆ ಪ್ರಕರಣ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸುವ ಪದ್ಧತಿ ಸೆ.20ಕ್ಕೆ ಮುಕ್ತಾಯವಾಗಿತ್ತು.
ನ್ಯಾಯವಾದಿ ನೆಡುಂಪಾರ ನ್ಯಾ| ಜಯಂತ್ ಪಟೇಲ್ ಪ್ರಕರಣ ಪ್ರಸ್ತಾಪಿ ಸುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ತಡೆದರು. “ನೀವು ಸುಪ್ರೀಂಕೋರ್ಟಿಂದ ನೇಮಕ ಗೊಂಡ ಅಧಿಕೃತ ಹಿರಿಯ ನ್ಯಾಯವಾದಿ (ಎಒಆರ್) ಅಲ್ಲ. ಹೀಗಾಗಿ ನಿಮಗೆ ಆ ಅವಕಾಶವಿಲ್ಲ’ ಎಂದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯವಾದಿ ನ್ಯಾ|ಸಿ.ಎಸ್.ಕರ್ಣನ್ ಪ್ರಕರಣದಲ್ಲಿ ಯಾವ ಹಿರಿಯ ನ್ಯಾಯವಾದಿಯೂ ಅವರ ಪರ ವಾದಿಸಲು ಬಂದಿರಲಿಲ್ಲ. ನನಗೆ ಯಾರೂ ಎಒಆರ್‌ಗಳಿಲ್ಲ ಎಂದು ಹೇಳಿದರು. ಆಗ ಕೋಪಗೊಂಡ ನ್ಯಾಯಪೀಠ “ಆ ಸಂದರ್ಭದಲ್ಲಿ ಈ ನಿಯಮದ ಬಗ್ಗೆ ಚರ್ಚೆಯಾಗಿರಲಿಲ್ಲ’ ಎಂದು ಹೇಳಿತು. ಇದರ ಹೊರತಾಗಿ ಯೂ ನ್ಯಾಯಮೂರ್ತಿಗಳ ವರ್ಗಾವಣೆ ಪ್ರಶ್ನಿಸಿ ಅದನ್ನು ಪರಿಶೀಲಿಸುವಂತೆ ಅರ್ಜಿ ಸಲ್ಲಿಸಿದ್ದಾಗಿ ನೆಡುಂಪಾರ ನ್ಯಾಯಪೀಠಕ್ಕೆ ಅರಿಕೆ ಮಾಡಿಕೊಂಡರು.