ಮುಂಬೈ: “ಭಾರತದಲ್ಲಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಬಲಿಷ್ಠ ಸರ್ಕಾರಗಳ ಅಗತ್ಯವಿತ್ತು, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಇಂದು ಬಲಿಷ್ಠವಾಗಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ” ಎಂದು ಕಾಂಗ್ರೆಸ್ ತೊರೆದು ಗುರುವಾರ ಶಿವಸೇನೆ ಸೇರ್ಪಡೆಯಾದ ಮಿಲಿಂದ್ ದಿಯೋರಾ ಹೇಳಿಕೆ ನೀಡಿದ್ದಾರೆ.
ಶಿವಸೇನೆಗೆ ಸೇರ್ಪಡೆಯಾದ ನಂತರ ಮಾತನಾಡಿದ ದಿಯೋರಾ, ”ಕಳೆದ 10 ವರ್ಷಗಳಲ್ಲಿ ಮುಂಬೈನಲ್ಲಿ ಒಂದೇ ಒಂದು ಭಯೋತ್ಪಾದಕ ದಾಳಿ ನಡೆದಿಲ್ಲ ಎಂದು ಹೇಳಲು ಇಷ್ಟಪಡುತ್ತೇನೆ. ಇದು ಮುಂಬೈಕರ್‌ಗಳ ಪ್ರಮುಖ ಸಾಧನೆಯಾಗಿದೆ” ಎಂದರು.
”ದೇಶವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಎಂಬ ಬಗ್ಗೆ ಈ ದೇಶಕ್ಕೆ ರಚನಾತ್ಮಕ ಸಲಹೆಗಳನ್ನು ನೀಡುತ್ತಿದ್ದ ಕಾಂಗ್ರೆಸ್ ಪಕ್ಷವು ಈಗ ಒಂದೇ ಗುರಿಯನ್ನು ಹೊಂದಿದೆ. ಪ್ರಧಾನಿ ಮೋದಿ ಏನು ಹೇಳಿದರೂ ಮತ್ತು ಮಾಡಿದರೂ ವಿರುದ್ಧವಾಗಿ ಮಾತನಾಡುವುದು. ನಾಳೆ ಕಾಂಗ್ರೆಸ್ ತುಂಬಾ ಒಳ್ಳೆಯ ಪಕ್ಷ ಎಂದು ಹೇಳಿದರೆ ಅದನ್ನೂ ವಿರೋಧಿಸುತ್ತಾರೆ. ನಾನು ಬೆಳವಣಿಗೆ, ಆಕಾಂಕ್ಷೆ, ಒಳಗೊಳ್ಳುವಿಕೆ ಮತ್ತು ರಾಷ್ಟ್ರೀಯತೆಗೆ ಲಾಭದ ರಾಜಕೀಯವನ್ನು ನಂಬುತ್ತೇನೆ. ನಾನು ನೋವಿನ ರಾಜಕೀಯವನ್ನು ನಂಬುವುದಿಲ್ಲ. ವೈಯಕ್ತಿಕ ದಾಳಿಗಳು, ಅನ್ಯಾಯ ಮತ್ತು ನಕಾರಾತ್ಮಕತೆಯನ್ನು ಒಪ್ಪುವುದಿಲ್ಲ” ಎಂದರು.
ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಮಹಾರಾಷ್ಟ್ರ ಸಿಎಂ ಮತ್ತು ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ”ಮಿಲಿಂದ್ ದಿಯೋರಾ ಇಂದು ನಿಮ್ಮ ಮನಸ್ಸಿನಲ್ಲಿ ಹೊಂದಿರುವ ಭಾವನೆಗಳು 1.5 ವರ್ಷಗಳ ಹಿಂದೆ ನಾನು ಹೊಂದಿದ್ದಂತೆಯೇ ಇದೆ. ನಿರ್ಧಾರ ತೆಗೆದುಕೊಳ್ಳಬೇಕಾದಾಗ ಇಂತಹ ಸಂದರ್ಭಗಳು ಉದ್ಭವಿಸುತ್ತವೆ” ಎಂದರು.
ಮಧ್ಯಪ್ರದೇಶದ ಸಚಿವ ಕೈಲಾಶ್ ವಿಜಯವರ್ಗಿಯಾ ಪ್ರತಿಕ್ರಿಯಿಸಿ”ಮಿಲಿಂದ್ ದಿಯೋರಾ ಅವರಂತಹ ವಿದ್ಯಾವಂತರು ಕಾಂಗ್ರೆಸ್ ನಾಯಕತ್ವ ದುರ್ಬಲವಾಗಿದೆ ಎಂದು ಅರ್ಥಮಾಡಿಕೊಂಡಿದ್ದಾರೆ. ಅವರಿಗೆ ಅಲ್ಲಿ ಭವಿಷ್ಯವಿಲ್ಲ. ಆಶಾವಾದಿ ವಿರೋಧವು ಉತ್ತಮ ಯೋಜನೆಗಳನ್ನು ಬೆಂಬಲಿಸುತ್ತದೆ” ಎಂದರು.
ರಾಹುಲ್ ಗೆ ಶಾಕ್
ರಾಹುಲ್ ಗಾಂಧಿ ಅವರು ಮಣಿಪುರದಿಂದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಆರಂಭಿಸಿದ ದಿನವೇ ಕಾಂಗ್ರೆಸ್ ಗೆ ಶಾಕ್ ಎಂಬಂತೆ 47 ರ ಹರೆಯದ ಪ್ರಬಲ ನಾಯಕ ಮಿಲಿಂದ್ ದಿಯೋರಾ ಎನ್ ಡಿಎ ಅಂಗಪಕ್ಷವನ್ನು ಸೇರಿರುವುದು ದೊಡ್ಡ ಶಾಕ್ ನೀಡಿದೆ. ಮಿಲಿಂದ್ ದಿಯೋರಾ ಯುಪಿಎ ಸರಕಾರದಲ್ಲಿ ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದರು.