ಇಸ್ರೇಲ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ “ ನ್ಯಾಯಾಂಗ ವ್ಯವಸ್ಥೆಯ ಬದಲಾವಣೆ” ಯೋಜನೆಯನ್ನು ಪ್ರಶ್ನಿಸಿದ್ದ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಬೆಂಜಮಿನ್ ವಿರುದ್ಧ ಇಸ್ರೇಲ್ ರಾಜಧಾನಿ ಟೆಲ್ ಅವೀವ್ ನಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆಯಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:’20 ವರ್ಷಗಳ ಹಿಂದೆ ನನಗೆ ಅರಿವಿರಲಿಲ್ಲ…’; ಮರು ಮದುವೆ ಬಗ್ಗೆ ಮಾತನಾಡಿದ ಶಿಖರ್ ಧವನ್
ಅಲ್ ಜಝೀರಾ ವರದಿ ಪ್ರಕಾರ, ರಕ್ಷಣಾ ಸಚಿವ ಗ್ಯಾಲಂಟ್ ಅವರನ್ನು ವಜಾಗೊಳಿಸಿದ ಹಾಗೂ ನ್ಯಾಯಾಂಗ ವ್ಯವಸ್ಥೆ ಬದಲಾವಣೆ ಕುರಿತ ಬೆಂಜಮಿನ್ ನಿರ್ಧಾರದ ವಿರುದ್ಧ ಸಾವಿರಾರು ಜನರು ಪ್ರತಿಭಟನೆ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಜೆರುಸಲೇಂನ ನೆತನ್ಯಾಹು ನಿವಾಸದ ಮುಂಭಾಗದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿರುವುದಾಗಿ ವರದಿ ವಿವರಿಸಿದೆ.
ದೇಶದಲ್ಲಿನ ನ್ಯಾಯಾಂಗ ವ್ಯವಸ್ಥೆ ಬದಲಾವಣೆ ಮಾಡಬೇಕೆಂಬ ನೆತನ್ಯಾಹು ಯೋಜನೆ ವಿರುದ್ಧ ಕಳೆದ ಒಂದು ತಿಂಗಳಿನಿಂದ ಇಸ್ರೇಲ್ ನಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಅಮೆರಿಕ ಮತ್ತು ಇತರ ಮೈತ್ರಿಕೂಟದ ದೇಶಗಳು ಎಚ್ಚರಿಕೆಯನ್ನು ನೀಡಿರುವುದಾಗಿ ವರದಿ ಹೇಳಿದೆ.
ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ವಜಾಗೊಳಿಸಿರುವ ಕ್ರಮದ ಬಗ್ಗೆ ಶ್ವೇತ ಭವನ ಕಳವಳ ವ್ಯಕ್ತಪಡಿಸಿದ್ದು, ತುರ್ತಾಗಿ ಸಂಧಾನ ನಡೆಸಬೇಕಾದ ಅಗತ್ಯವಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.
ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿಯಬೇಕಾದದ್ದು ಅಗತ್ಯವಾಗಿದ್ದು, ಇಸ್ರೇಲ್ ಬೆಳವಣಿಗೆ ತುಂಬಾ ಕಳವಳಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಇತ್ತೀಚೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ಜೊತೆ ಮಾತುಕತೆ ನಡೆಸಿದ್ದರು.