Advertisement

ಭದ್ರತಾ ಸೇವೆಯತ್ತ ಯೋಗ ಗುರು

03:20 AM Jul 13, 2017 | Team Udayavani |

ಡೆಹ್ರಾಡೂನ್‌: ಯೋಗ ಗುರು ಬಾಬಾ ರಾಮದೇವ್‌ ಈಗ ಇನ್ನೊಂದು ಹೊಸ ಉದ್ಯಮ ಕ್ಷೇತ್ರಕ್ಕೆ ಕಾಲಿಡುವ ತಯಾರಿಯಲ್ಲಿದ್ದಾರೆ! ದಿನ ಬಳಕೆ ವಸ್ತುಗಳ ಮಾರುಕಟ್ಟೆಯಲ್ಲಿ ವಿದೇಶಿ ಕಂಪನಿಗಳ ಜತೆಗೆ ಸ್ಪರ್ಧೆಯಲ್ಲಿರುವ ಬಾಬಾ ರಾಮದೇವ್‌ ಅವರು ಶೀಘ್ರದಲ್ಲೇ ಖಾಸಗಿ ಭದ್ರತಾ ಸೇವಾ ಉದ್ಯಮಕ್ಕೆ ಪ್ರವೇಶಿಸಲಿದ್ದಾರೆ. ಇದಕ್ಕಾಗಿಯೇ ‘ರಾಮದೇವ್‌ ಪರಾಕ್ರಮ್‌ ಸುರಕ್ಷಾ ಪ್ರೈವೇಟ್‌ ಲಿಮಿಟೆಡ್‌’ ಹೆಸರಿನ ಕಂಪನಿಯನ್ನೂ ನೋಂದಣಿ ಮಾಡಿಸಿದ್ದಾರೆ. ಜತೆ ಜೊತೆಗೇ ಹರಿದ್ವಾರದಲ್ಲಿರುವ ಅವರ ಪತಂಜಲಿ ಕಾಂಪ್ಲೆಕ್ಸ್‌ನಲ್ಲಿ ಸಾಕಷ್ಟು ಯುವಕ – ಯುವತಿಯರಿಗೆ ತರಬೇತಿ ನೀಡುವ ಪ್ರಕ್ರಿಯೆಯೂ ನಡೆಯುತ್ತಿದೆ.

Advertisement

ಈ ಬಗ್ಗೆ ಪತಂಜಲಿ ಗ್ರೂಪ್‌ ಮಾಹಿತಿ ನೀಡಿದ್ದು, “ರಾಮದೇವ್‌ ಅವರು ಈಗಾಗಲೇ ಆಯುರ್ವೇದ ಹಾಗೂ ಎಫ್ಎಂಸಿಜಿ ಉದ್ಯಮದಲ್ಲಿ ಭಾರಿ ಪ್ರಮಾಣದ ಮಾರುಕಟ್ಟೆಯನ್ನೇ ಸೃಷ್ಟಿಸಿಕೊಂಡಿದ್ದಾರೆ. ಈಗ ಖಾಸಗಿ ಭದ್ರತಾ ಸಿಬ್ಬಂದಿಗಳಿಗೆ ತಮ್ಮಲ್ಲಿಯೇ ವೃತ್ತಿಪರವಾಗಿ ತರಬೇತಿಗೊಳಿಸಿ, ಸೇವೆ ಆರಂಭಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಮೊದಲ ಹಂತದಲ್ಲಿ ಒಂದಿಷ್ಟು ಯುವಕ-ಯುವತಿಯರು ತರಬೇತಿ ಪಡೆದುಕೊಂಡು ಸೇವೆಗೆ ಸಿದ್ಧರಾಗಿದ್ದಾರೆ.’ ಎಂದಿದ್ದಾರೆ. 

ಶೇ.40ರಷ್ಟು ಚೇತರಿಕೆ: ಎಫ್ಐಸಿಸಿಐ ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಸದ್ಯಕ್ಕೆ ಸೆಕ್ಯೂರಿಟಿ ಗಾರ್ಡ್‌ಗಳನ್ನು ಪೂರೈಕೆ ಮಾಡುವ ಉದ್ಯಮ ಶೇ.40ರಷ್ಟು ಚೇತರಿಸಿಕೊಂಡಿದೆ. ಹೆಚ್ಚಾಕಡಿಮೆ ಐದು ದಶಲಕ್ಷ ಸೆಕ್ಯೂರಿಟಿ ಗಾರ್ಡ್‌ಗಳು ತರಬೇತಿ ಪಡೆದು ಬೇರೆ ಬೇರೆ ವಾಣಿಜ್ಯ ಮಳಿಗೆಗಳು, ಕೈಗಾರಿಕಾ ಪ್ರದೇಶ ಹಾಗೂ ಕಾರ್ಪೊರೆಟ್‌ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದಾಜು 40,000 ಕೋಟಿ ರೂ. ಇದಕ್ಕೆ ವಿನಿಯೋಗವಾಗುತ್ತಿದೆ. ಅಂದಾಜು 10,000 ಕೋಟಿ ರೂ.ನಷ್ಟು ಸೇವಾ ತೆರಿಗೆ, ಪಿಂಚಣಿ ಹಾಗೂ ವಿಮೆಗಳಿಗಾಗಿ ವ್ಯಯಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next