ವಾಡಿ: ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದಂತೆ, ಪ್ರವಾಹ ಬಂದು ಬದುಕು ಕಸಿದು ಹೋದ ಮೇಲೆ ರೋಗ ಭಯ ಆವರಿಸಿದೆ. ಭೀಕರ ನೆರೆ ಹಾವಳಿಗೆ ತುತ್ತಾಗಿ ತತ್ತರಿಸಿದ ಕಡಬೂರು ಗ್ರಾಮದಲ್ಲೀಗ ಪರಿಸರ ಕಲುಷಿತಗೊಂಡಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಭೀಮಾ ನದಿಯ ರಕ್ಕಸ ಪ್ರವಾಹಕ್ಕೆ ಒಂದು ವಾರಗಳ ಕಾಲ ಮುಳುಗಡೆಯಾಗಿದ್ದ ಚಿತ್ತಾಪುರ ತಾಲೂಕಿನ ಕಡಬೂರ ಗ್ರಾಮದಲ್ಲಿ ಬುಧವಾರದಿಂದ ನೀರು ಕಣ್ಮರೆಯಾಗಿದ್ದು, ನೂರೆಂಟು ಸಮಸ್ಯೆಗಳು ಹುಟ್ಟಿಕೊಂಡಿವೆ. ಜಲಪ್ರಳಯದಿಂದ ಗರಬಡಿದಂತಾಗಿದ್ದ ಗ್ರಾಮಸ್ಥರು, ಊರುಹೊಕ್ಕ ನೀರು ನೆನಪಿಸಿಕೊಂಡು ಈಗಲೂ ಬೆಚ್ಚಿಬೀಳುತ್ತಿದ್ದಾರೆ.
ನೆರೆ ನಿಂತ ಮೇಲೆ ಕುಡಿಯಲು ಶುದ್ಧ ನೀರಿಲ್ಲ. ಗಬ್ಬೆದ್ದ ವಾತಾವರಣದಲ್ಲಿ ಹಿಂಸೆ ಅನುಭವಿಸುತ್ತಿದ್ದೇವೆ. ಹಾವು, ಚೇಳು,ಕಪ್ಪೆಗಳ ಉಪಟಳ ಹೆಚ್ಚಾಗಿ ಭಯದ ಪರಿಸ್ಥಿತಿ ಸೃಷ್ಟಿಯಾಗಿದ್ದರೂ ಯಾರು ನಮ್ಮ ಗೋಳುಕೇಳಲು ಬರುತ್ತಿಲ್ಲ ಎಂದು ಗ್ರಾಮದ ಶರಣಮ್ಮ, ದ್ಯಾವಮ್ಮ, ಶಾಂತಮ್ಮ, ಶರಣಮ್ಮ, ಮಲ್ಲಮ್ಮ ಹಾಗೂ ಹಾಜಿಸಾಬ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದಾಗ ಹಿರಿಯ ಅಧಿಕಾರಿಗಳು, ಆರೋಗ್ಯಸಿಬ್ಬಂದಿ ಹಾಗೂ ಪೊಲೀಸರ ತಂಡವೇ ಗ್ರಾಮದಲ್ಲಿ ಬೀಡುಬಿಟ್ಟಿತ್ತು. ಗಂಜಿ ಕೇಂದ್ರತೆರೆದು ಟ್ಯಾಂಕರ್‌ಗಳ ಮೂಲಕ ಕುಡಿಯಲು ನೀರು ಸರಬರಾಜು ಮಾಡಲಾಗುತ್ತಿತ್ತು.
ಬುಧವಾರದಿಂದ ಗಂಜಿ ಕೇಂದ್ರ ಮುಚ್ಚಿದೆ. ಟ್ಯಾಂಕರ್ ನೀರು ಸರಬರಾಜು ಕೂಡ ಸ್ಥಗಿತಗೊಂಡಿದೆ. ಬದುಕು ಸಹಜ ಸ್ಥಿತಿಗೆ ಮರಳುವ ಮೊದಲೇ ಅಧಿಕಾರಿಗಳು ಏಕಾಏಕಿ ಸೌಲಭ್ಯ ಕಸಿದುಕೊಂಡಿದ್ದಾರೆ. ಗ್ರಾಮದಲ್ಲಿ ಕೆಟ್ಟ ವಾಸನೆ ಹಬ್ಬಿಕೊಂಡಿದೆ. ಮೂಗು ಮುಚ್ಚಿಕೊಂಡರೂ ತಲೆ ಸುತ್ತಿ ಬೀಳುವಂತಹ ಮೀನಿನ ಪಾಚಿ ವಾಸನೆ. ಪ್ರವಾಹ ಉಕ್ಕಿಸಿದ ರಾಶಿಗಟ್ಟಲೇ ಕಸ ಗ್ರಾಮದ ಬೀದಿಗಳನ್ನು ಮುಚ್ಚಿಸಿದೆ. ಕುಡಿಯಲು ನೀರಿನ ಸಮಸ್ಯೆಯಾಗಿ ಕಲುಷಿತ ನದಿ ನೀರನ್ನೇ ಬಳಕೆ ಮಾಡುತ್ತಿದ್ದೇವೆ. ನದಿಗೆ ಹೋಗುವ ದಾರಿಯಲ್ಲಿ ಮಹಾ ಹೂಳು ಆವರಿಸಿದ್ದು, ಸ್ವಚ್ಛತೆಗೆ ಕ್ರಮ ಕೈಗೊಂಡಿಲ್ಲ. ಹಾವು, ಚೇಳು ಸೇರಿದಂತೆ ಇನ್ನಿತ ವಿಷಜಂತುಗಳು ಮನೆಯೊಳಗೆ ನುಗ್ಗಿ ಪ್ರಾಣಭೀತಿ ಹುಟ್ಟಿಸಿವೆ. ಮಹ್ಮದ್ ರμàಕ್ ಎಂಬಾತ ಹಾವು ಕಡಿತಕ್ಕೆ ತುತ್ತಾಗಿದ್ದಾನೆ. ಊರಿನ ಹುಡುಗರು ಹಾವು-ಚೇಳುಗಳನ್ನು ಹುಡುಕಿ ಹುಡುಕಿ ಹೊಡೆಯುತ್ತಿದ್ದಾರೆ. ಪ್ರವಾಹ ನಮ್ಮನ್ನು ಬದುಕಲು ಬಿಡುತ್ತಿಲ್ಲ ಎಂದು ಗ್ರಾಮಸ್ಥರಾದ ಶರಣು ಪಸಾರ, ಸಾಬಣ್ಣ ಬನ್ನೇಟಿ, ಭೀಮರಾಯ ನರಿಬೋಳಿ, ಸಿದ್ರಾಮ, ಶರಣಪ್ಪ ಆಂದೋಲಾ ತಮ್ಮ ಅಳಲು ಹೇಳಿಕೊಂಡಿದ್ದಾರೆ.
ಪ್ರವಾಹ ತಗ್ಗಿದ ಮೇಲೆ ಗ್ರಾಮದಲ್ಲಿ ಹೂಳು ಮತ್ತು ಕಸ ಆವರಿಸುವುದು ಸಹಜ. ವಿಷಜಂತುಗಳೂ ಸಹ ಹರಿದಾಡುತ್ತವೆ. ದುರ್ವಾಸನೆ ಕೂಡ ಹಬ್ಬುತ್ತದೆ. ಇವು ಭೀಕರ ಪ್ರವಾಹದ ಪ್ರಾಕೃತಿಕ ಕೊಡುಗೆಗಳು. ಮೂರು ದಿನಗಳ ವರೆಗೆ ಕಡಬೂರಿನಲ್ಲಿ ಈ ದುಸ್ಥಿತಿ ಜೀವಂತವಿರುತ್ತದೆ. ಕಸ ಮತ್ತು ಹೂಳು ಒಣಗಿದ ನಂತರ ಇಡೀ ಗ್ರಾಮದಲ್ಲಿ ಸ್ವತ್ಛತೆ ಕೈಗೊಂಡು ಬ್ಲೀಚಿಂಗ್ ಸಿಂಪರಣೆ ಮಾಡುತ್ತೇವೆ. ಗಂಜಿ ಕೇಂದ್ರ ಬಂದ್ ಮಾಡಿದ್ದೇವೆ. ಆದರೆ, ಗ್ರಾಮಕ್ಕೆ ನೀರು ಪೂರೈಕೆ ಸ್ಥಗಿತಗೊಂಡಿದೆ ಎಂಬುದು ಸುಳ್ಳು ಆರೋಪ.
ಬಸಲಿಂಗಪ್ಪ ಡಿಗ್ಗಿ, ತಾಪಂ ಇಒ, ಚಿತ್ತಾಪುರ
–ಮಡಿವಾಳಪ್ಪ ಹೇರೂರ