Advertisement

GST ಆದಾಯ ನಷ್ಟ ಭರ್ತಿಗೆ ರಾಜ್ಯಗಳಿಗೆ ಎರಡು ಆಯ್ಕೆ ; ನಿರ್ಧಾರ ತಿಳಿಸಲು ಒಂದು ವಾರ ಕಾಲಾವಕಾಶ

07:17 PM Aug 27, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ಮತ್ತು ಅದಕ್ಕೆ ಸಂಬಂಧಿಸಿದ ಲಾಕ್ ಡೌನ್ ದೇಶದಲ್ಲಿ GST ಆದಾಯ ಸಂಗ್ರಹದ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ.

Advertisement

2021ರ ಹಣಕಾಸು ವರ್ಷದಲ್ಲಿ ಈ GST ಕೊರತೆ 2.35 ಲಕ್ಷ ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದ್ದು ಇದರಲ್ಲಿ 97 ಸಾವಿರ ಕೋಟಿ ರೂಪಾಯಿಗಳ ಕೊರತೆ ಅನುಷ್ಠಾನದಲ್ಲಿನ ನ್ಯೂನತೆಗಳ ಕಾರಣದಿಂದ ಕಾಣಿಸಿಕೊಂಡಿದ್ದರೆ ಉಳಿದ ಭಾರೀ ಮೊತ್ತದ ಕೊರತೆ ಕೋವಿಡ್ 19 ಕಾರಣದಿಂದಲೇ ಉಂಟಾಗಿರುವುದಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಇಂದು GST ಕೌನ್ಸಿಲ್ ನ 41ನೇ ಸಭೆಯು ನಡೆಯಿತು. ಸುಮಾರು 5 ತಾಸುಗಳವರೆಗೆ ನಡೆದ ಈ ಸಭೆಯಲ್ಲಿ ಹಲವು ವಿಚಾರಗಳ ಕುರಿತಾಗಿ ವಿಸ್ತೃತ ಚರ್ಚೆಯನ್ನು ನಡೆಸಲಾಯಿತು.

ಮತ್ತು ಈ ಸಭೆಯಲ್ಲಿ GST ಆದಾಯ ಕೊರತೆ ಅನುಭವಿಸುವ ರಾಜ್ಯಗಳಿಗೆ ಯಾವ ರೀತಿಯಲ್ಲಿ ಪರಿಹಾರವನ್ನು ನೀಡಬೇಕು ಎಂಬ ವಿಚಾರದ ಕುರಿತಾಗಿ ಪ್ರಮುಖವಾಗಿ ಚರ್ಚಿಸಲಾಯಿತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಈ ಭಾರೀ GST ಸಂಗ್ರಹ ಕೊರತೆಯ ಕಾರಣದಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯಗಳಿಗೆ ಕೇಂದ್ರದಿಂದ ನೀಡಬೇಕಾದ ಪರಿಹಾರ ಒಟ್ಟು ಮೊತ್ತ 3 ಲಕ್ಷ ಕೋಟಿ ರೂಪಾಯಿಗಳಾಗಿರಲಿದೆ ಎಂದು ರೆವೆನ್ಯೂ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಅವರು ತಿಳಿಸಿದ್ದಾರೆ.

Advertisement

ಈ 3 ಲಕ್ಷ ಕೋಟಿ ರೂಪಾಯಿಗಳಲ್ಲಿ 65 ಸಾವಿರ ಕೋಟಿ ರೂಪಾಯಿಗಳು ಸೆಸ್ ರೂಪದಲ್ಲಿ ರಾಜ್ಯಗಳಿಗೆ ಲಭಿಸುವ ನಿರೀಕ್ಷೆ ಇದ್ದರೆ ಇನ್ನುಳಿದ 2.35 ಲಕ್ಷ ಕೋಟಿ ರೂಪಾಯಿ ಕೊರತೆಯನ್ನು ಕೇಂದ್ರ ಸರಕಾರವೇ ರಾಜ್ಯಗಳಿಗೆ ಭರಿಸಬೇಕಿದೆ.

ಈ ಪರಿಹಾರ ಮೊತ್ತವನ್ನು ರಾಜ್ಯಸರಕಾರಗಳು ಪಡೆದುಕೊಳ್ಳಲು ಅವುಗಳ ಮುಂದೆ ಎರಡು ಅವಕಾಶಗಳನ್ನು ನೀಡುವ ಕುರಿತಾಗಿ ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು. ಮತ್ತು ಈ ಎರಡು ಅವಕಾಶಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಲು ರಾಜ್ಯಗಳಿಗೆ ಒಂದು ವಾರಗಳ ಅವಕಾಶವನ್ನು ನೀಡುವ ಕುರಿತಾಗಿಯೂ ಸಭೆ ನಿರ್ಧರಿಸಿತು.

ಮೊದಲ ಆಯ್ಕೆಯಾಗಿ, ರಾಜ್ಯಗಳು ಭಾರತೀಯ ರಿಸರ್ವ್ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ 97 ಸಾವಿರ ಕೋಟಿ ರೂಪಾಯಿಗಳನ್ನು ಸಾಲ ರೂಪದಲ್ಲಿ ಪಡೆದುಕೊಳ್ಳಬಹುದು ಮತ್ತು ಈ ಮೊತ್ತವನ್ನು ಐದು ವರ್ಷಗಳ ಬಳಿಕ ಮರುಪಾವತಿಸುವ ಅವಕಾಶವನ್ನೂ ಸಹ ರಾಜ್ಯಗಳಿಗೆ ನೀಡಲಾಗಿದೆ.

ಇನ್ನು ಎರಡನೇ ಆಯ್ಕೆಯಲ್ಲಿ, 2.35 ಲಕ್ಷ ಕೋಟಿ ರೂಪಾಯಿಗಳ ಪೂರ್ತಿ ಕೊರತೆ ಮೊತ್ತವನ್ನು ಸ್ಪೆಷಲ್ ವಿಂಡೋ ಅಡಿಯಲ್ಲಿ ರಾಜ್ಯಗಳು ಪಡೆದುಕೊಳ್ಳಬಹುದಾಗಿದೆ.

ಸದ್ಯಕ್ಕೆ ದೇಶದ ಆರ್ಥಿಕ ಪರಿಸ್ಥಿತಿಯು ವಿಶೇಶ ‘ದೈವೇಚ್ಛೆ’ ಸ್ಥಿತಿಯಲ್ಲಿ ನಡೆಯುತ್ತಿದೆ ಮತ್ತು ಇದು ಆರ್ಥಿಕ ಕುಸಿತಕ್ಕೆ ಕಾರಣವಾಗುವ ಎಲ್ಲಾ ಲಕ್ಷಣಗಳನ್ನೂ ತೋರಿಸುತ್ತಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೇ ಸಂದರ್ಭದಲ್ಲಿ ಅಬಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next