Advertisement

Udupi: ಭೈರತಿ ಮುಡಾ ಪ್ರಕರಣದ ದಾಖಲೆಗಳ ಸುಟ್ಟಿರುವುದು ಕರಂದ್ಲಾಜೆ ನೋಡಿದ್ದಾರಾ?: ಲಕ್ಷ್ಮೀ

02:33 AM Oct 20, 2024 | Team Udayavani |

ಉಡುಪಿ: ಮುಡಾ ಪ್ರಕರಣದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕಾರ್ಯ ಮಾಡುತ್ತಿದ್ದಾರೆ. ಶೋಭಾ ಕರಂದ್ಲಾಜೆ ಅವರು ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಸಚಿವ ಭೈರತಿ ಸುರೇಶ್‌ ಮುಡಾ ಪ್ರಕರಣದ ದಾಖಲೆಗಳನ್ನು ಸುಟ್ಟಿದ್ದಾರೆ ಎಂಬುದನ್ನು ಇವರು ನೋಡಿದ್ದಾರೆಯೇ? ಅಥವಾ ಕೆಮರಾ ಇಟ್ಟಿದ್ದಾರೆಯೇ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಶ್ನಿಸಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇ.ಡಿ. ದಾಳಿಯೇ ರಾಜಕೀಯ ಪ್ರೇರಿತವಾದುದು. ರಾಜಭವನ, ರಾಜ್ಯಪಾಲರು ತುಂಬಾ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವುದೇ ಕೇಂದ್ರ ಸರಕಾರ ಹಾಗೂ ಬಿಜೆಪಿಯ ಹುನ್ನಾರವಾಗಿದೆ ಎಂದರು.
ಪಂಚಮಸಾಲಿ 2ಎ ಮೀಸಲಾತಿ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉಪಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸಭೆಯಲ್ಲಿ ನಡೆದ ವಿಷಯವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.

ಬಿಜೆಪಿಗರು ಕೇಂದ್ರ ಸರಕಾರವನ್ನು ಪ್ರಶ್ನಿಸಲಿ
ರಾಜ್ಯ ಸರಕಾರದಿಂದ ಕರಾವಳಿಗೆ ಅನ್ಯಾಯ ಆಗುತ್ತಿದೆ. ಕಾಂಗ್ರೆಸ್‌ನಿಂದ ಬಿಡಿಗಾಸು ಅನುದಾನ ಇಲ್ಲ ಎಂಬ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರದಿಂದಾಗುವ ಅನ್ಯಾಯದ ಬಗ್ಗೆ ಬಿಜೆಪಿ ನಾಯಕರು ಯಾಕೆ ಧ್ವನಿ ಎತ್ತುತ್ತಿಲ್ಲ? ರಾಜ್ಯದ ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ ಜನರನ್ನು ದಾರಿ ತಪ್ಪಿಸಿ, ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುವ ಕೆಲಸ ಮಾತ್ರ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಆರೋಪ ಮಾಡುವುದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ ಎಂದರು.

ಬಿಪಿಎಲ್‌ ಪರಿಶೀಲನೆಗೆ ಐವನ್‌ ಸಮರ್ಥನೆ
ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಮಾತನಾಡಿ, ಬಿಜೆಪಿಯ ಅತಿಯಾದ ಆತ್ಮವಿಶ್ವಾಸಕ್ಕೆ ಉಪಚುನಾವಣೆಯಲ್ಲಿ ಜನರೇ ಉತ್ತರ ನೀಡುತ್ತಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಶ್ರೀಮಂತರಿಗೆ ಬಿಪಿಎಲ್‌ ಕಾರ್ಡ್‌ ನೀಡಲಾಗಿದೆ. ಹೀಗಾಗಿ ಅನರ್ಹರನ್ನು ಪಟ್ಟಿಯಿಂದ ಹೊರಗಿಡಲು ಪರಿಶೀಲಿಸಲಾಗುತ್ತದೆ. ಬಡವರ ಸೌಲಭ್ಯ ಶ್ರೀಮಂತರಿಗೆ ಕೊಡಲು ಬಿಜೆಪಿ ನಾಯಕರು ಒಪ್ಪುವರೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಗೆಲುವು ಖಚಿತ
ದಕ್ಷಿಣ ಕನ್ನಡ, ಉಡುಪಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ ಗೆಲುವು ಶತಃಸಿದ್ಧ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು. ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಶನಿವಾರ ಜರಗಿದ ಸಭೆಯಲ್ಲಿ ಮಾತನಾಡಿದ ಅವರು, ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ನಾವು ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಮತದಾರರು ಬೆಂಬಲಿಸುವ ವಿಶ್ವಾಸವಿದೆ ಎಂದರು. ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಮತ್ತಿತರರು ಇದ್ದರು.

Advertisement

ಕಸ್ತೂರಿ ರಂಗನ್‌ ವರದಿ ಬಗ್ಗೆ ಚರ್ಚೆ
ಡಾ| ಕಸ್ತೂರಿ ರಂಗನ್‌ ವರದಿ ಬಗ್ಗೆ ಈಗಾಗಲೇ ಸರಕಾರದ ಮಟ್ಟದಲ್ಲಿ ಸುದೀರ್ಘ‌ ಚರ್ಚೆಯಾಗಿದೆ. ಸದ್ಯ ನೀತಿಸಂಹಿತೆ ಇರುವ ಕಾರಣ ಈಗ ಯಾವುದೇ ಭರವಸೆ ನೀಡುವುದಿಲ್ಲ. ಅರಣ್ಯ ಸಚಿವ ಈಶ್ವರ ಖಂಡ್ರೆ ಜತೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next