ಬೆಂಗಳೂರು: ದೇವೇಗೌಡರ ಕುಟುಂಬವನ್ನು ಮುಗಿಸಿ ಆಯಿತು. ಇನ್ನು 82ರ ಹರೆಯದ, ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಕುಟುಂಬವನ್ನು ಮುಗಿಸಲು ಕುತಂತ್ರ ಮಾಡಲಾಗುತ್ತಿದೆ. ಆದರೆ ಈ ಯತ್ನ ಫಲಿಸದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ಕೇಂದ್ರದ ಬೃಹತ್ ಉದ್ದಿಮೆ ಮತ್ತು ಉಕ್ಕು ಖಾತೆಯ ಸಚಿವ ಎಚ್.ಡಿ. ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.
ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಅವರು ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಫೆಬ್ರವರಿಯಲ್ಲಿ ನೀಡಿದ್ದ ದೂರಿನ ಸಂಬಂಧ ಈವರೆಗೆ ಏನೂ ಮಾಡದೆ ಈಗ ಜಾಮೀನುರಹಿತ ವಾರಂಟ್ ಜಾರಿ ಮಾಡಲಾಗಿದೆ. ನಾಲ್ಕು ತಿಂಗಳಿನಿಂದ ಏನು ಮಾಡುತ್ತಿದ್ದರು? ಬಿಎಸ್‌ವೈ ವಿರುದ್ಧ ಕಾಂಗ್ರೆಸ್ ಸೇಡಿನ ರಾಜಕಾರಣ ಮಾಡುತ್ತಿದೆ. ಯಡಿಯೂರಪ್ಪ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ. ಆದರೆ ಈ ಪ್ರಯತ್ನ ಫಲಪ್ರದ ಆಗುವುದಿಲ್ಲ ಎಂದು ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು.
ದೇವೇಗೌಡರ ಕುಟುಂಬವನ್ನು ಮುಗಿಸಲು ಏನೇನು ಮಾಡಿದ್ದೀರಿ ಎಂದು ಗೊತ್ತಿದೆ. ಅದನ್ನು ಎದುರಿಸು ತ್ತೇವೆ. ಆ ಶಕ್ತಿ ನಮಗಿದೆ. ಸರಕಾರ ಯಾವ ರೀತಿ ಅಧಿಕಾರಿಗಳನ್ನು ಬಳಸಿ ಕೊಳ್ಳುತ್ತಿದೆ ಎಂಬುದು ಗೊತ್ತಿದೆ. ಇಂಥದ್ದೇ ಪ್ರಕರಣದಲ್ಲಿ ಮುರುಘಾ ಶರಣರನ್ನು ಏಕಾಏಕಿ ಬಂಧಿಸಲಾಗಿತ್ತು. ದೇವೇಗೌಡರ ಹೆಸರಿನಲ್ಲಿ ಅರ್ಚನೆ ಮಾಡಿದ್ದ ಕುಣಿಗಲ್‌ನ ಚೌಡೇಶ್ವರಿ ಮಠದ ಶ್ರೀಗಳನ್ನು ಪೋಕ್ಸೋ ಪ್ರಕರಣದಲ್ಲಿ ಬಂಧಿಸಿದ್ದೀರಿ. ನಿಮ್ಮದೂ ಒಂದು ಸರಕಾರವಾ ಎಂದು ಎಚ್.ಡಿ.ಕೆ ತರಾಟೆಗೆ ತೆಗೆದುಕೊಂಡರು.