Advertisement

ವಿವಿಗೂ ಕೋವಿಡ್ ಹೊಡೆತ, ಅಭಿವೃದ್ಧಿ ಕಾರ್ಯ ಕುಂಠಿತ : ಶೇ.35-40ರಷ್ಟು ಆದಾಯ ಕೊರತೆ

01:19 AM Dec 25, 2020 | sudhir |

ಬೆಂಗಳೂರು: ಕೊರೊನಾ ಹೊಡೆತ, ವಿದ್ಯಾರ್ಥಿಗಳ ದಾಖಲಾತಿ ವಿಳಂಬ ಹಾಗೂ ಸರಕಾರದ ಅನುದಾನದ ಕೊರತೆಯು ರಾಜ್ಯದ ವಿಶ್ವವಿದ್ಯಾನಿಲಯಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿದ್ದು, ವಿ.ವಿ.ಗಳು ಶೇ.35ರಿಂದ 40ರಷ್ಟು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.

Advertisement

ಬೆಂಗಳೂರು, ಮಂಗಳೂರು, ಮೈಸೂರು, ಧಾರವಾಡ, ಕುವೆಂಪು, ದಾವಣಗೆರೆ ಸಹಿತ ರಾಜ್ಯದ ಎಲ್ಲ ವಿವಿಗಳಿಗೆ ಅನುದಾನದ ಬಿಸಿ ಮುಟ್ಟಿದೆ. ಪ್ರತಿ ವರ್ಷ ಸರಕಾರ ಬಜೆಟ್‌ನಲ್ಲಿ ಬೋಧಕ, ಬೋಧಕೇತರ ಸಿಬಂದಿ ವರ್ಗದ ವೇತನ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತದೆ. ಆದರೆ ಕೊರೊನಾದಿಂದಾಗಿ ಸರಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ವಿವಿಗೆ ವೇತನಾನುದಾನ ಹೊರತುಪಡಿಸಿ, ಬೇರೆ ಕೆಲವು ವಿಭಾಗಕ್ಕೆ ನೀಡಬೇಕಿರುವ ಅನುದಾನ ಇನ್ನೂ ಮಂಜೂರಾಗಿಲ್ಲ. ಪ. ಜಾ., ಪ.ಪಂ.ದ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಎಸ್‌ಇಪಿ, ಟಿಎಸ್‌ಪಿ ಯೋಜನೆಯಡಿ ನೀಡಬೇಕಿರುವ ಅನುದಾನ ದಲ್ಲೂ ಕಡಿತ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ವಿವಿಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ, ಪರೀಕ್ಷಾ ಶುಲ್ಕ, ಕಾಲೇಜುಗಳ ಮಾನ್ಯತೆ, ಮಾನ್ಯತೆ ನವೀಕರಣ ಶುಲ್ಕದ ಜತೆಗೆ ಹಾಸ್ಟೆಲ್‌ ಶುಲ್ಕ, ಸ್ನಾತಕೋತ್ತರ ಕೇಂದ್ರಗಳಲ್ಲಿ ವಿವಿಧ ಶುಲ್ಕ, ಸಂಶೋಧನಾಧ್ಯಯನ ಶುಲ್ಕ ಮುಂತಾದವು ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಂದ ಸಂಗ್ರಹವಾಗುತ್ತವೆ. ಆದರೆ, ಪ್ರಸಕ್ತ ಸಾಲಿನಲ್ಲಿ ಆನ್‌ಲೈನ್‌ ತರಗತಿಯೇ ಹೆಚ್ಚಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ದಾಖಲಾತಿ ಶುಲ್ಕ ಪಾವತಿಸಿಲ್ಲ. ಆನ್‌ಲೈನ್‌ ತರಗತಿಗಳಿಗೆ ವಿವಿಗಳು ಶುಲ್ಕ ವಿಧಿಸುವಂತಿಲ್ಲ. ಕಾಲೇಜುಗಳ ಮಾನ್ಯತೆ, ಮಾನ್ಯತೆ ನವೀಕರಣದ ಶುಲ್ಕ ಪಾವತಿ ಈಗಷ್ಟೆ ಆರಂಭವಾಗಿದೆ. 10 ತಿಂಗಳುಗಳಿಂದ ಹಾಸ್ಟೆಲ್‌ಗ‌ಳು ಮುಚ್ಚಿರುವುದರಿಂದ ಅದರ ಶುಲ್ಕವೂ ಬಂದಿಲ್ಲ ಎಂದು ಕುಲಪತಿಯೊಬ್ಬರು ತಿಳಿಸಿದ್ದಾರೆ.

ಅಭಿವೃದ್ಧಿ ಕಾರ್ಯ ಕುಂಠಿತ
ಈ ಹಿಂದೆ ಸರಕಾರ ಅನುದಾನ ನೀಡಿರುವ ಹಾಗೂ ವಿವಿಯ ಆಡಳಿತ ಮಂಡಳಿಯ ಒಪ್ಪಿಗೆಯಿಂದ ಕಾರ್ಯ ರೂಪಕ್ಕೆ ಬರಬೇಕಿರುವ ಅಭಿವೃದ್ಧಿ ಕಾರ್ಯಗಳು ಹೊರತು ಬೇರೆ ಕೆಲಸಗಳು ನಡೆಯುತ್ತಿಲ್ಲ ಎಂದು ಕುಲಸಚಿವರೊಬ್ಬರು ತಿಳಿಸಿದ್ದಾರೆ.

ಕೊರೊನಾದಿಂದ ವಿವಿ ಆದಾಯದಲ್ಲಿ ಶೇ.40ರಷ್ಟು ಕಡಿಮೆಯಾಗಿದೆ. ಇದು ಕೇವಲ ಒಂದು ವಿಶ್ವವಿದ್ಯಾನಿಲಯಕ್ಕೆ ಸೀಮಿತವಲ್ಲ. ಮುಂದೆ ಸುಧಾರಿಸುವ ಸಾಧ್ಯತೆಯಿದೆ.
-ಡಾ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ,  ಕುಲಪತಿ, ಮಂಗಳೂರು ವಿಶ್ವವಿದ್ಯಾನಿಲಯ

Advertisement

ದಾಖಲಾತಿ, ಪರೀಕ್ಷಾ ಶುಲ್ಕ ಹಾಗೂ ಇತರ ಕೆಲವು ಮೂಲಗಳಿಂದ ವಿವಿಗೆ ಬರುತ್ತಿದ್ದ ಆದಾಯ ಕಡಿಮೆಯಾಗಿದೆ. ಹೀಗಾಗಿ ಆರ್ಥಿಕವಾಗಿ ಸ್ವಲ್ಪ ಕುಸಿತವಾಗಿದ್ದು, ಮುಂದಿನ ದಿನಗಳಲ್ಲಿ ಸುಧಾರಿಸುವ ಸಾಧ್ಯತೆಯಿದೆ.
-ಪ್ರೊ| ಕೆ.ಆರ್‌.ವೇಣುಗೋಪಾಲ್‌, ಕುಲಪತಿ, ಬೆಂಗಳೂರು ವಿಶ್ವವಿದ್ಯಾನಿಲಯ

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಯಾವುದೇ ರೀತಿಯ ಆರ್ಥಿಕ ಹಿನ್ನಡೆಯಾಗಿಲ್ಲ. ದಾಖಲಾತಿ ಹಾಗೂ ಇತರೆ ಪ್ರಕ್ರಿಯೆಗಳು ಎಂದಿನಂತೆಯೇ ನಡೆಯುತ್ತಿದೆ.
-ಡಾ| ಎಸ್‌.ಸಚ್ಚಿದಾನಂದ, ಕುಲಪತಿ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ

ಪ್ರತಿವರ್ಷ ಶೇ.10ರಷ್ಟು ಶುಲ್ಕ ಏರಿಕೆ ಮಾಡಲಾಗುತ್ತದೆ. ಆದರೆ, ಈ ವರ್ಷ ಯಾವುದೇ ಶುಲ್ಕ ಹೆಚ್ಚಿಸಿಲ್ಲ. ಅಭಿವೃದ್ಧಿ ಕಾಮಗಾರಿಗಾಗಿ ಹಿಂದಿನ ವರ್ಷ ಅನುದಾನ ಬಿಡುಗಡೆ ಮಾಡಿದೆ. ಈ ವರ್ಷದ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಬೇಕಿದೆ.
-ಡಾ| ಟಿ.ಡಿ.ಕೆಂಪರಾಜು, ಕುಲಪತಿ, ಬೆಂಗಳೂರು ಉತ್ತರ ವಿವಿ

 ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next