ಹೈದರಾಬಾದ್:ಸುಮಾರು ಒಂದು ವಾರಗಳ ಕಾಲ ಭರ್ಜರಿ ಪ್ರಚಾರಕ್ಕೆ ಸಾಕ್ಷಿಯಾಗಿದ್ದ ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣೆಯ ಮತದಾನ ಮಂಗಳವಾರ(ಡಿಸೆಂಬರ್ 01, 2020) ಬೆಳಗ್ಗೆ 7ಗಂಟೆಯಿಂದ ಆರಂಭಗೊಂಡಿದೆ.
ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದ್ದು, ಭಾರತೀಯ ಜನತಾ ಪಕ್ಷ ಜಿಎಚ್ ಎಂಸಿ ತನ್ನ ವಶಕ್ಕೆ ಪಡೆಯಬೇಕೆಂಬ ಸವಾಲಿನೊಂದಿಗೆ ರಾಷ್ಟ್ರ ನಾಯಕರು ಪ್ರಚಾರದ ಅಖಾಡಕ್ಕಿಳಿಯುವ ಮೂಲಕ ಹೈವೋಲ್ಟೇಜ್ ಚುನಾವಣೆಯಾಗಿ ಮಾರ್ಪಟ್ಟಿತ್ತು.
ಮಹಾನಗರ ಪಾಲಿಕೆಯ ಚುನಾವಣೆಯ ಇತಿಹಾಸದಲ್ಲಿಯೇ ಇಷ್ಟೊಂದು ಪ್ರಮಾಣದ ಮಹತ್ವ ಪಡೆದಿಲ್ಲವಾಗಿತ್ತು. ಆದರೆ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಈ ಬಾರಿ ಟಿಆರ್ ಎಸ್, ಬಿಜೆಪಿ ಹಾಗೂ ಅಸಾದುದ್ದೀನ್ ಒವೈಸಿಯ ಎಐಎಂಐಎಂ ಪಕ್ಷ ಸವಾಲಾಗಿ ಸ್ವೀಕರಿಸಿದೆ.
ಈ ಚುನಾವಣೆಯಲ್ಲಿ 74 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಜಿಎಚ್ ಎಂಸಿ 150 ವಾರ್ಡ್ ಗಳನ್ನು ಹೊಂದಿದ್ದು, 1122 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಸಂಜೆ 6ಗಂಟೆವರೆಗೆ ಮತದಾನ ನಡೆಯಲಿದ್ದು, ಡಿಸೆಂಬರ್ 4ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ:ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
2016ರ ಫೆಬ್ರುವರಿಯಲ್ಲಿ ನಡೆದ ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್ ಎಸ್ 99 ಸ್ಥಾನ ಪಡೆದಿದ್ದು, ಅಸಾದುದ್ದೀನ್ ಒವೈಸಿಯ ಎಐಎಂಐಎಂ 44 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು. ಬಿಜೆಪಿ 04 ಹಾಗೂ ಕಾಂಗ್ರೆಸ್ 02, ಟಿಡಿಪಿ ಒಂದು ಸ್ಥಾನದಲ್ಲಿ ಮಾತ್ರ ಜಯ ಸಾಧಿಸಿತ್ತು.