ಹೊಸದಿಲ್ಲಿ : ಅಕ್ರಮ ವಲಸಿಗರನ್ನು ಗುರುತಿಸುವ ಅಸ್ಸಾಂ ಎನ್‌ಆರ್‌ಸಿ, ವಿರೋಧ ಪಕ್ಷಗಳ ಭಾರೀ ಟೀಕೆ, ಆಕ್ರೋಶಕ್ಕೆ ಗುರಿಯಾಗಿರುವ ನಡುವೆಯೇ, ಇದೀಗ ಹರಿಯಾಣ ಸ್ವಯಂ ಪ್ರೇರಣೆಯಿಂದ ಎನ್‌ಆರ್‌ಸಿ ರೂಪಿಸಲು ಮುಂದಾಗಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, “ಈ ಕೆಲಸವನ್ನು ಕೇಂದ್ರ ಸರಕಾರ ಮಾಡಬೇಕಾಗಿದೆಯಾದರೂ ನಾವೇ ಈ ವಿಷಯದಲ್ಲಿ ಮುಂದಡಿ ಇಡಲು ಬಯಸಿದ್ದೇವೆ. ಕೇಂದ್ರ ಸರಕಾರ ನಮಗೆ ಈ ಬಗ್ಗೆ ಸೂಕ್ತ ನಿರ್ದೇಶಗಳನ್ನು ಕೊಟ್ಟರೆ ನಾವದನ್ನು ಪಾಲಿಸುತ್ತೇವೆ’ ಎಂದು ಹೇಳಿದರು.
ಕೇಂದ್ರ ಸರಕಾರ ನಿರ್ಧರಿಸಿದರೆ ನಾವು ನಮ್ಮದೇ ಆದ ಎನ್‌ಆರ್‌ಸಿ ಹೊಂದಲು ಬಯಸುತ್ತೇವೆ ಎಂದಿರುವ ಸಿಎಂ ಖಟ್ಟರ್, ರಾಷ್ಟ್ರ ಮಟ್ಟದಲ್ಲಿ ಕೂಡ ಆರ್‌ಆರ್‌ಸಿ ಆಗಬೇಕಾದ ಅಗತ್ಯವಿದೆ ಎಂದು ಹೇಳಿದರು.
ಅಸ್ಸಾಂ ಎನ್‌ಆರ್‌ಸಿ ಅಂತಿಮ ಕರಡು ಹೊರ ಬಂದ ಬಳಿಕದಲ್ಲಿ ರಾಜ್ಯದಲ್ಲಿನ ಸುಮಾರು 40 ಲಕ್ಷ ಜನರು ಅತಂತ್ರರಾಗಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷಗಳು ಭಾರೀ ದೊಡ್ಡ ಗುಲ್ಲೆಬ್ಬಿಸಿವೆ. ಈ 40 ಲಕ್ಷದಲ್ಲಿ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿರುವುದು ವಿವಾದಕ್ಕೆ ಕಾರಣವಾಗಿದೆ.
ಮಮತಾ ಬ್ಯಾನರ್ಜಿ ಅವರ ತೃಣ ಮೂಲ ಕಾಂಗ್ರೆಸ್ ಪಕ್ಷ ಅಸ್ಸಾಂ ಎನ್‌ಆರ್‌ಸಿ ಯನ್ನು ಪಶ್ಚಿಮ ಬಂಗಾಲದಲ್ಲಿ ಮಾಡಿದರೆ ಅಂತಃಕಲಹ ಸ್ಫೋಟಗೊಂಡೀತು, ರಕ್ತಪಾತ ವಾದೀತು ಎಂದು ಹುಯಿಲೆಬ್ಬಿಸಿದ್ದರು.