Advertisement

ಕ್ರೀಡಾಳುಗಳಿಂದ ಹಣ; ನಿರ್ಧಾರ ಹಿಂಪಡೆದ ಹರಿಯಾಣ

06:00 AM Jun 09, 2018 | Team Udayavani |

ಸೋನೆಪತ್‌: ಒಲಿಂಪಿಕ್ಸ್‌, ಏಶ್ಯನ್‌ ಗೇಮ್ಸ್‌, ಕಾಮನ್ವೆಲ್ತ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಕೈತುಂಬ ಹಣ, ಉದ್ಯೋಗ ನೀಡಿ ನೆಮ್ಮದಿಯ ಬದುಕು ಕಟ್ಟಿಕೊಟ್ಟ ಹರಿಯಾಣ ಸರಕಾರದ ವಿರುದ್ಧ ಅಲ್ಲಿನ ಕ್ರೀಡಾಪಟುಗಳೇ ಈಗ ತಿರುಗಿ ಬಿದ್ದಿದ್ದಾರೆ. ಇದಕ್ಕೆ ಸರಕಾರದ ಒಂದು “ಅವಸರದ ನಿರ್ಧಾರ’ ಕಾರಣವಾಯಿತು. 

Advertisement

ಹೌದು, ರಾಜ್ಯದ ಕ್ರೀಡಾ ಅಭಿವೃದ್ಧಿಗೆ ಹರಿಯಾಣ ಸರಕಾರ ಕ್ರೀಡಾಪಟುಗಳು ವಿವಿಧ ಕೂಟ ಗಳಿಂದ ಗೆದ್ದ ದುಡ್ಡು ಮತ್ತು ಜಾಹೀರಾತಿನಿಂದ ಬರುವ ಹಣದಲ್ಲಿ ಮೂರನೇ ಒಂದು ಭಾಗವನ್ನು ಸರಕಾರಕ್ಕೆ ನೀಡಲು ಕೇಳಿರುವುದು! ಸರಕಾರ ಈ ನಿರ್ಧಾರವನ್ನು ಪ್ರಕಟಿಸಿ ಸುತ್ತಿದ್ದಂತೆಯೇ ಕ್ರೀಡಾಪಟುಗಳು ಆಕ್ರೋಶಗೊಂಡಿದ್ದಾರೆ. ಸರಕಾರದ ಕ್ರಮವನ್ನು ಹಿಗ್ಗಾಮಗ್ಗಾ ಟೀಕಿಸಿದ್ದಾರೆ. ಬೆನ್ನಲ್ಲೇ ಹರಿಯಾಣ ಸರಕಾರ ತನ್ನ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಂಡಿದೆ.

ಕ್ರೀಡಾಪಟುಗಳಿಂದ ವ್ಯಾಪಕ ಟೀಕೆ
ಬಾಕ್ಸರ್‌ ವಿಜೇಂದರ್‌ ಸಿಂಗ್‌ ಹಾಗೂ ಅಖೀಲ್‌ ಕುಮಾರ್‌ ಇವರಿಬ್ಬರೂ ಹರಿಯಾಣದಲ್ಲಿ ಡಿಎಸ್‌ಪಿ ಹುದ್ಧೆ ಹೊಂದಿದ್ದಾರೆ. ಹಾಕಿ ಆಟಗಾರ ಸರ್ದಾರ್‌ ಸಿಂಗ್‌, ಕುಸ್ತಿ ಪಟುಗಳಾದ ಗೀತಾ, ಬಬಿತಾ ಪೋಗಟ್‌ ಕೂಡ ಹರಿಯಾಣ ಪೊಲೀಸ್‌ ಇಲಾಖೆಯ ನೌಕರರಾಗಿದ್ದಾರೆ. ಸರ ಕಾರದ ನಿರ್ಧಾರದಿಂದ ಅವರೆಲ್ಲ ತೀವ್ರ ಬೇಸರಕ್ಕೆ ಒಳಗಾಗಿದ್ದಾರೆ. ಇಂಥದೊಂದು ಕ್ರಮ ಆ್ಯತ್ಲೀಟ್‌ಗಳ ಅಭ್ಯಾಸಕ್ಕೆ ತೊಂದರೆಯುಂಟು ಮಾಡುತ್ತದೆ. ನಮ್ಮ ಕುಟುಂಬದವರು ನಮ್ಮನ್ನು ಇಲ್ಲಿ ತನಕ ತರಲು ಎಷ್ಟು ಕಷ್ಟಪಟ್ಟಿದ್ದಾರೆ, ಸರಕಾರ ಕೂಡಲೇ ಈ ಕ್ರಮವನ್ನು ವಾಪಸ್‌ ಪಡೆದುಕೊಳ್ಳಬೇಕು ಎಂದು ಗೀತಾ ಪೋಗಟ್‌ ಒತ್ತಾಯಿಸಿದರು.

ಸರಕಾರದ ಉದ್ದೇಶವೇನು?
ವೃತ್ತಿಪರ ಕ್ರೀಡೆ ಹಾಗೂ ವಿವಿಧ ವಾಣಿಜ್ಯ ಜಾಹೀರಾತುಗಳಿಂದ ಬರುವ ಹಣದಲ್ಲಿ 3ನೇ ಒಂದು ಭಾಗ ಹಣವನ್ನು ಹರಿಯಾಣ ನ್ಪೋರ್ಟ್ಸ್ ಕೌನ್ಸಿಲ್‌ಗೆ
ಕ್ರೀಡಾಪಟುಗಳು ನೀಡಬೇಕು. ಭವಿಷ್ಯದ ದೂರದೃಷ್ಟಿ ಇಟ್ಟುಕೊಂಡು ನಿರ್ಧಾರಕ್ಕೆ ಬರಲಾಗಿದೆ. ಸಂಗ್ರಹಗೊಂಡ ಹಣವನ್ನು ರಾಜ್ಯದ ಸಮಗ್ರ ಕ್ರೀಡಾ ಅಭಿವೃದ್ಧಿಗೆ ಬಳಸಲಾಗುವುದು. ಉದ್ಯೋಗದಲ್ಲಿರುವ ಕ್ರೀಡಾಪಟುಗಳು ಕೂಡ ಹಣವನ್ನು ನೀಡಬೇಕಾಗುತ್ತದೆ ಎಂದು ಯುವಜನ ಮತ್ತು ಕ್ರೀಡಾ ಇಲಾಖೆ ಸರಕಾರದ ಪ್ರಧಾನ ಕಾರ್ಯದರ್ಶಿ ಅಶೋಕ್‌ ಕೆಂಮ್ಕಾ ಪತ್ರ ಮೂಲಕ ತಿಳಿಸಿದ್ದರು. ವೆಬ್‌ಸೈಟ್‌ನಲ್ಲಿ ಈ ನೋಟಿಸ್‌ ಪ್ರಕಟವಾಗಿಲ್ಲ. ಆದರೆ ಕೆಲವು ಕ್ರೀಡಾಪಟುಗಳಿಗೆ ಸರಕಾರದಿಂದ ನೋಟಿಸ್‌ ತಲುಪಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next