Advertisement

NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್‌ ನಿವಾಸಕ್ಕೆ ಬಂದ ಜಾಧವ್!

09:27 PM Apr 08, 2024 | Team Udayavani |

ಯಾದಗಿರಿ: ರಾಜ್ಯ ರಾಜಕಾರಣದಲ್ಲಾದ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಆರಂಭದಿಂದಲೂ ವಿರೋಧಿಸುತ್ತಾ ಬಂದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅವರು ಬಿಜೆಪಿ ಪಕ್ಷವು ಮೈತ್ರಿ ಧರ್ಮ ಪಾಲನೆ ಮಾಡುತ್ತಿಲ್ಲ, ನನ್ನ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂಬ ಹೇಳಿಕೆ ನೀಡಿದ ಬೆನ್ನಲ್ಲೆ ಹೊಸದೊಂದು ಸಂಚಲನ ಮೂಡಿಸಿದ್ದರು.

Advertisement

ಮೂರು ದಿನಗಳ ಹಿಂದಷ್ಟೆ ರಾಯಚೂರು ಸಂಸದ-ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಶಾಸಕ ಶರಣಗೌಡ ಕಂದಕೂರ ಅವರ ಮನೆಗೆ ಭೇಟಿ ನೀಡಿದ್ದರು. ಇದೀಗ ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ಸೋಮವಾರ ಸಂಜೆ ಶಾಸಕ ಕಂದಕೂರ ಮನೆಗೆ ಭೇಟಿ ನೀಡಿ ಸುದೀರ್ಘವಾದ ಮಾತುಕತೆ ನಡೆಸಿದರು.

ಚರ್ಚೆಯ ಬಳಿಕ ಪ್ರತಿಕ್ರಿಯೆ ನಿಡಿದ ಶಾಸಕ ಕಂದಕೂರು, ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗದೊಂದಿಗೆ ಚರ್ಚಿಸಿ ಲೋಕ ಕಣಕ್ಕೆ ಇಳಿಯುವ ಎಲ್ಲಾ ತಯಾರಿಯನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.

ಮಂಗಳವಾರ ಎಚ್.ಡಿ ಕುಮಾರಸ್ವಾಮಿಯವರ ಜೊತೆ ಚರ್ಚಿಸಿ ಚುನಾವಣಾ ಪ್ರಚಾರದಲ್ಲಿ ನಮ್ಮ ಪಕ್ಷದ ನಾಯಕರು ಭಾಗವಹಿಸುವ ಬಗ್ಗೆ ವಿವರವಾಗಿ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.

ಹೊಸ ಶಕ್ತಿ : ಡಾ. ಉಮೇಶ್ ಜಾಧವ್
ಗುರುಮಠಕಲ್ ಕ್ಷೇತ್ರದ ಶಾಸಕರಾದ ಶರಣಗೌಡ ಕಂದಕೂರ್ ಭೇಟಿಯಿಂದ ವಿಶ್ವಾಸ ಇಮ್ಮಡಿಗೊಂಡಿದ್ದು ಜೆಡಿಎಸ್-ಬಿಜೆಪಿ ಮೈತ್ರಿಕೂಟವು ದಾಖಲೆಯ ಮತಗಳಿಂದ ಮುನ್ನಡೆ ಸಾಧಿಸಿ ಕಾಂಗ್ರೆಸ್ಸಿಗೆ ಮುಖಭಂಗ ಮಾಡಲಿದೆ ಎಂದು ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಯುಗಾದಿಯ ಮುನ್ನಾ ದಿನವಾದ ಸೋಮವಾರ ಶಾಸಕರ ಮನೆಗೆ ಖುದ್ದಾಗಿ ಭೇಟಿ ನೀಡಿ ಶುಭಾಶಯ ಕೋರಿ ಮಹತ್ವದ ಮಾತುಕತೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಈ ಭೇಟಿ ಮೈತ್ರಿ ಕೂಟದ ವಿಶ್ವಾಸವನ್ನು ಹೆಚ್ಚಳ ಮಾಡಿದೆ. ಮಾತ್ರವಲ್ಲ ಶಾಸಕರು ತನ್ನ ಪೂರ್ಣ ಸಹಕಾರ ನೀಡಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ತಂತ್ರಗಳನ್ನು ರೂಪಿಸಲು ಪಕ್ಷದ ಪ್ರಮುಖರ ಜೊತೆ ಮಂಗಳವಾರ ಸಭೆ ನಡೆಸಿ ಕಾರ್ಯ ಸೂಚಿಯನ್ನು ಕಾರ್ಯಕರ್ತರಿಗೆ ನೀಡಲಿದ್ದಾರೆ ಎಂದು ಹೇಳಿದರು.

ಜಾಧವ್ ಭೇಟಿಗೂ ಮೊದಲು, ಜೆಡಿಎಸ್ ಮುಖಂಡರ ಜತೆ ಮೀಟಿಂಗ್
ಕಲಬುರಗಿ ಜಿಲ್ಲಾ ಜೆಡಿಎಸ್ ನಾಯಕರ ದಂಡು ಶಾಸಕ ಶರಣಗೌಡ ಪಾಟೀಲ್ ಕಂದಕೂರ ಅವರ ಮನೆಗೆ ಸೋಮವಾರ ಭೇಟಿ ನೀಡಿತ್ತು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ, ಯುವ ನಾಯಕರಾದ ಶಿವಕುಮಾರ ನಾಟೀಕಾರ, ಕೃಷ್ಣಾರೆಡ್ಡಿ ಇತರರು ಶಾಸಕ ಕಂದಕೂರ ಜತೆ ಮೈತ್ರಿಕೂಟ ಹಾಗೂ ಲೋಕಸಭೆ ಚುನಾವಣೆ ಬಗ್ಗೆ ಸುಧೀರ್ಘ ಮಾತುಕತೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next