ಮಂಡ್ಯ: 48 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ ಜಲಾಶಯದಿಂದ ದಾಖಲೆ ಪ್ರಮಾಣದ 530 ಟಿಎಂಸಿ ನೀರು ಹರಿದು ಹೋಗಿರುವುದು ದಾಖಲಾಗಿದೆ.
ಜುಲೈ 20ರಂದು ಕೆಆರ್‌ಎಸ್ ಜಲಾಶಯ ಗರಿಷ್ಠ ಮಟ್ಟ 124.80 ಅಡಿಗೆ ಭರ್ತಿಯಾಗಿತ್ತು. ಅಂದಿನಿಂದ ಆಗಸ್ಟ್ 3ರವರೆಗೂ ಗರಿಷ್ಠ ಮಟ್ಟ ಕಾಯ್ದುಕೊಂಡಿದೆ. ಆ.4ರಂದು ಜಲಾಶಯದ ಒಳಹರಿವು 67,712 ಕ್ಯೂಸೆಕ್ ಹರಿದು ಬರುತ್ತಿರುವುದರಿಂದ ಹೊರಹರಿ ವನ್ನು 68,100 ಕ್ಯೂಸೆಕ್‌ಗೆ ಹೆಚ್ಚಿಸಲಾಗಿತ್ತು.
ಧಾರಾಕಾರ ಮಳೆಗೆ ಒಳಹರಿವು ಹೆಚ್ಚಳ: ಆಗಸ್ಟ್ 1ಕ್ಕೆ ಒಳಹರಿವು 23,081 ಕ್ಯೂಸೆಕ್ ಇತ್ತು. ಈಗ ಪ್ರಸ್ತುತ 74,726 ಕ್ಯೂಸೆಕ್ ಹರಿದು ಬರುತ್ತಿದೆ. ಇದರಿಂದ ಹೊರಹರಿವನ್ನು 78,316 ಕ್ಯೂಸೆಕ್‌ಗೆ ಏರಿಸಲಾಗಿದೆ. ಆ.2ರಂದು 30,505 ಕ್ಯೂಸೆಕ್‌ಗೆ ಏರಿತು. 3ರಂದು ಏಕಾಏಕಿ 58,062 ಕ್ಯೂಸೆಕ್‌ಗೆ ಏರಿಕೆಯಾಯಿತು. 4ರಂದು 68,586 ಕ್ಯೂಸೆಕ್ ಹರಿದು ಬರುತ್ತಿತ್ತು. ಇದರಿಂದ ಹೊರಹರಿವನ್ನು 80 ಸಾವಿರ ಕ್ಯೂಸೆಕ್‌ಗೆ ಏರಿಸಲಾಗಿತ್ತು. ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲೂ ಮುಂದುವರಿದಿದೆ.
ಒಂದೇ ವರ್ಷಕ್ಕೆ ಎರಡನೇ ಬಾರಿ ಭರ್ತಿ: ಆ.6 ರಂದು 74,068 ಕ್ಯೂಸೆಕ್‌ಗೆ ಏರಿಕೆ ಕಂಡಿತ್ತು. ನಂತರ ಅಲ್ಲಿಂದ ಆ.18ಕ್ಕೆ 9,144 ಕ್ಯೂಸೆಕ್‌ಗೆ ಇಳಿದಿತ್ತು. 19 ರಂದು ಏರಿಕೆ ಕಂಡಿದ್ದ ಒಳಹರಿವು 31ಕ್ಕೆ 21562 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಸೆ.3ಕ್ಕೆ 26247 ಕ್ಯೂಸೆಕ್‌ಗೆ ಏರಿತ್ತು. ನಂತರ ಅ.18ರಂದು ಒಂದೇ ವರ್ಷದಲ್ಲಿ ಎರಡನೇ ಬಾರಿಗೆ ಜಲಾಶಯ ಭರ್ತಿ ಯಾಗಿತ್ತು. ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ತಲುಪಿತ್ತು. ಗರಿಷ್ಠ ಮಟ್ಟ ಕಾಯ್ದುಕೊಂಡ ಜಲಾಶಯ: ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಜಲಾಶಯ ಗರಿಷ್ಠ ಮಟ್ಟ ಕಾಯ್ದುಕೊಂಡು ಆಕ್ಟೋಬರ್‌ನಲ್ಲೂ ಮುಂದು ವರಿದಿದೆ. ಕಾವೇರಿ ಕೊಳ್ಳದಲ್ಲಿ ವಿಪರೀತ ಮಳೆ ಆಗುತ್ತಿ ರುವುದರಿಂದ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಇತಿಹಾಸದಲ್ಲಿಯೇ 72 ದಿನಗಳ ಕಾಲ 124 ಅಡಿ ಗರಿಷ್ಠ ನೀರಿನ ಮಟ್ಟ ಕಾಯ್ದುಕೊಂಡಿದೆ.
ಕಳೆದ ವರ್ಷವೂ ಹೆಚ್ಚುವರಿ ನೀರು: ಕಳೆದ ವರ್ಷವೂ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿದಿತ್ತು. ಸುಮಾರು 100 ಟಿಎಂಸಿ ಹೆಚ್ಚುವರಿ ನೀರು ಹರಿದು ಹೋಗಿತ್ತು. 177.25 ಟಿಎಂಸಿಗಿಂತ 275 ಟಿಎಂಸಿ ನೀರು 2021 ಜೂನ್‌ನಿಂದ 2022ರ ಮೇ ಅಂತ್ಯದ ವರೆಗೂ ಹರಿದಿತ್ತು. 352.75 ಟಿಎಂಸಿ ಹೆಚ್ಚುವರಿ ನೀರು: ಮುಂಗಾರು ಮಳೆ ಆರಂಭಗೊಂಡ ಜೂನ್‌ನಿಂದಲೂ ಅ.21ರ ವರೆಗೂ 352.75 ಟಿಎಂಸಿ ಹೆಚ್ಚುವರಿ ನೀರು ಹರಿದು ಹೋಗಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಕರ್ನಾ ಟಕದಿಂದ ತಮಿಳುನಾಡಿಗೆ 177.25 ಟಿಎಂಸಿ ನೀರು ಕೊಡಬೇಕಿದೆ. ಆದರೆ, ಈಗಾಗಲೇ 352.75 ಟಿಎಂಸಿ ನೀರು ಹರಿದು ಹೋಗಿದೆ. ಜೂನ್‌ನಲ್ಲಿ 9.19 ಟಿ ಎಂಸಿ, ಜುಲೈನಲ್ಲಿ 31.24 ಟಿಎಂಸಿ, ಆಗಸ್ಟ್‌ನಲ್ಲಿ 45.95 ಟಿಎಂಸಿ, ಸೆಪ್ಟಂಬರ್‌ನಲ್ಲಿ 36.76 ಟಿಎಂಸಿ, ಅಕ್ಟೋಬರ್‌ನಲ್ಲಿ 20.22 ಟಿಎಂಸಿ, ನವೆಂಬರ್‌ನಲ್ಲಿ 13.78 ಟಿಎಂಸಿ, ಡಿಸೆಂಬರ್‌ನಲ್ಲಿ 7.35 ಟಿಎಂಸಿ, ಜನವರಿಯಿಂದ ಮೇವರೆಗೆ ಪ್ರತಿ ತಿಂಗಳು 2.50 ಟಿಎಂಸಿ ನೀರು ಕೊಡಬೇಕಿದೆ.
ನವೆಂಬರ್‌ವರೆಗೂ ಮಳೆ ಸಾಧ್ಯತೆ : ಪ್ರಸ್ತುತ ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯು ನವೆಂಬರ್‌ವರೆಗೂ ಹೀಗೆಯೇ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಜಲಾಶಯಕ್ಕೆ ಮತ್ತೆ ಒಳ ಹರಿವು ಬರಲಿದೆ ಎಂದು ಹವಾಮಾನ ತಜ್ಞರು ಅಂದಾಜು ಮಾಡಿದ್ದಾರೆ. ಹೀಗಾಗಿ ಜಲಾಶಯದ ಒಳ ಮತ್ತು ಹೊರ ಹರಿವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ.
ಮೂರು ಗೇಟ್‌ಗಳಲ್ಲಿ ಹೊರ ಹರಿವು: ಪ್ರಸ್ತುತ ಕೆಆರ್‌ಎಸ್ ಜಲಾಶಯದಿಂದ 80 ಮಟ್ಟದ ಮೂರು ಗೇಟ್‌ಗಳಲ್ಲಿ ನೀರನ್ನು ಕಾವೇರಿ ನದಿ ಮತ್ತು ವಿಶ್ವೇಶ್ವರಯ್ಯ ನಾಲೆಗೆ ಬಿಡಲಾಗುತ್ತಿದೆ. ಮೂರು ದಿನಗಳ ಹಿಂದೆ 7 ಗೇಟ್‌ಗಳಲ್ಲಿ ಹೊರ ಹರಿವನ್ನು ಬಿಡಲಾಗಿತ್ತು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಹಾಗೂ ಜಲಾಶಯದ ಕೆಳಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆಆರ್ ಎಸ್ ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರುತ್ತಿದೆ. ಇದರಿಂದ ನದಿಗೆ ಹೊರಹರಿವು ಹೆಚ್ಚಿಸಲಾಗಿದೆ. ಕಳೆದ 48 ವರ್ಷಗಳ ಇತಿಹಾಸದಲ್ಲಿ ತಮಿಳುನಾಡಿಗೆ ಜೂನ್‌ನಿಂದ ಇದುವರೆಗೂ 530 ಟಿಎಂಸಿ ನೀರು ಹರಿದು ಹೋಗಿದೆ.
– ಶಂಕರೇಗೌಡ, ವ್ಯವಸ್ಥಾಪಕ ನಿರ್ದೇಶಕ, ಕಾವೇರಿ ನೀರಾವರಿ ನಿಗಮ.