ಕಾರವಾರ:2018ರ ಡಿಸೆಂಬರ್ ನಲ್ಲಿ ನಾಪತ್ತೆಯಾಗಿದ್ದ ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ನ ಅವಶೇಷಗಳು ಬರೋಬ್ಬರಿ ನಾಲ್ಕು ತಿಂಗಳು ಕಳೆದ ಮೇಲೆ ಮಹಾರಾಷ್ಟ್ರದ ಮಾಲ್ವಾಣ ಸಮುದ್ರ ತೀರದಿಂದ 30 ಕಿಲೋ ಮೀಟರ್ ದೂರದ ಸಮುದ್ರದ ಆಳದಲ್ಲಿ ದೊರಕಿದ್ದು, ಇದರೊಳಗಿದ್ದ 7 ಮೀನುಗಾರರು ಬದುಕಿರುವ ಸಾಧ್ಯತೆ ಕಡಿಮೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ನಾಪತ್ತೆಯಾಗಿದ್ದ ಬೋಟ್ ಪತ್ತೆ ಕಾರ್ಯಾಚರಣೆ ತಂಡದಲ್ಲಿ ಭಾಗಿಯಾಗಿದ್ದ ಭಟ್ ಅವರು ಶುಕ್ರವಾರ ಕಾರವಾರದ ನೌಕನೆಲೆ ಸೀಬರ್ಡ್ ಗೆ ಬಂದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದರು.
ಸುವರ್ಣ ತ್ರಿಭುಜ ಬೋಟ್ ಶೋಧ ಕಾರ್ಯಾಚರಣೆಗೆ ನನ್ನ ಹಾಗೂ ಇತರ ಒಂಬತ್ತು ಮಂದಿ ಮೀನುಗಾರರನ್ನು ನೌಕಾಪಡೆ ಅಧಿಕಾರಿಗಳು ಭಾನುವಾರ ರಾತ್ರಿ ಕರೆದುಕೊಂಡು ಹೋಗಿದ್ದರು. ಸುಮಾರು ನಾಲ್ಕೈದು ದಿನಗಳ ಕಾಲ ಆಳ ಸಮುದ್ರದಲ್ಲಿ ನುರಿತ ಮುಳುಗುತಜ್ಞರು ಹಾಗೂ ಆಧುನಿಕ ತಂತ್ರಜ್ಞಾನ ಬಳಸಿ ಶೋಧ ಕಾರ್ಯ ನಡೆಸಿದ್ದು, ಬುಧವಾರದಂದು ಬೋಟ್ ನ ಅವಶೇಷಗಳು ಪತ್ತೆಯಾಗಿದ್ದವು ಎಂದು ವಿವರಿಸಿದ್ದಾರೆ.
ಶೋಧ ಕಾರ್ಯಾಚರಣೆಯನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಸುವರ್ಣ ತ್ರಿಭುಜ ಬೋಟ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ನೌಕಾಪಡೆಯ ಅಧಿಕಾರಿಗಳು ಹಾಗೂ ಸಹಕರಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.