Advertisement

25 ವರ್ಷ ಬಳಿಕ ಬಿಳಿಕೆರೆ ದೊಡ್ಡ ಕೆರೆ ಭರ್ತಿ

07:28 AM Feb 13, 2019 | |

ಹುಣಸೂರು: ಬರಿದಾಗಿದ್ದ ತಾಲೂಕಿನ ಬಿಳಿಕೆರೆ ಗ್ರಾಮದ ದೊಡ್ಡ ಕೆರೆಯು 25 ವರ್ಷಗಳ ಬಳಿಕ ನೀರು ತುಂಬಿ ಕೋಡಿ ಬಿದ್ದಿದ್ದು, ಸುತ್ತಮುತ್ತಲಿನಲ್ಲಿ ಅಂತರ್ಜಲ ವೃದ್ಧಿಯಾಗಿ ಆ ಭಾಗದ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.

Advertisement

ಮೈಸೂರು ಹೆದ್ದಾರಿ ಪಕ್ಕದಲ್ಲೇ ಇರುವ ಈ ಕೆರೆ 131 ಎಕರೆ ವಿಸ್ತೀರ್ಣವಿದ್ದು, ಒಂದೆಡೆ ಬರ ಮತ್ತೂಂದೆಡೆ ಕೆರೆಗೆ ನೀರು ಹರಿಯುವ ನಾಲೆಯನ್ನು ಮುಚ್ಚಿದ್ದರಿಂದಾಗಿ ನೀರಿನ ಹರಿವು ನಿಂತು ಹೋಗಿತ್ತು. ನಂತರದಲ್ಲಿ ಸಂಪೂರ್ಣ ಬರಿದಾಗಿತ್ತು. ಇದನ್ನು ಮನಗಂಡ ಅರಣ್ಯ ಇಲಾಖೆ ಸಹ ಸಸಿ ನೆಟ್ಟು ನೆಡುತೋಪನ್ನಾಗಿಸಿತ್ತು.

ಈ ಹಿಂದಿನ ಸರ್ಕಾರದಲ್ಲಿ ಶಾಸಕ, ಸಂಸದೀಯ ಕಾರ್ಯದರ್ಶಿಯಾಗಿದ್ದ ಎಚ್‌.ಪಿ.ಮಂಜುನಾಥ್‌ ಅವರ ಮಹತ್ವಾಕಾಂಕ್ಷಿ ಏತ ನೀರಾವರಿ ಯೋಜನೆಗೆ ಸಣ್ಣ ನೀರಾವರಿ ಇಲಾಖೆ ಹಸಿರು ನಿಶಾನೆ ತೋರಿತ್ತು. ಇದರಿಂದ ತಾಲೂಕಿನ ಹೊಸರಾಮನಹಳ್ಳಿ ಬಳಿ ಹರಿಯುವ ಲಕ್ಷ್ಮಣತೀರ್ಥ ನದಿಯಿಂದ 7.46 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಯಿಂದ 17 ಎಕರೆ ವಿಸ್ತೀರ್ಣದ ಜೀನಹಳ್ಳಿಕೆರೆ,

ಬಿಳಿಕೆರೆಯ ದೊಡ್ಡ ಕೆರೆ ಹಾಗೂ ಹಳೇಬೀಡು ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು,  ಕೆರೆಗೆ ನೀರು ತುಂಬಿಸುವ ಯೋಜನೆ ಸಾಕಾರಗೊಂಡಿತು. ಜೀನಹಳ್ಳಿ ಕೆರೆ ತುಂಬಿ ಬಿಳಿಕೆರೆ ಕೆರೆಗೂ ನೀರು ಹರಿದಿತ್ತು. ಇದೀಗ ಬಿಳಿಕೆರೆ ಕೆರೆ ಭರ್ತಿಯಾಗಿದ್ದು,

ಕೆರೆಯಲ್ಲಿ 32.77 ಮಿ.ಲೀ. ಘನ ಅಡಿ ನೀರು ಸಂಗ್ರಹವಾಗಿದ್ದು, ಕೋಡಿ ಮೇಲೆ ನೀರು ಹರಿಯುತ್ತಿದ್ದು, ಇದೀಗ ಹಳೇಬೀಡು ಕೆರೆಗೆ ನೀರು ಹರಿಯುತ್ತಿದೆ. ಬಿಳಿಕೆರೆ ಕೆರೆ ಮುಂಭಾಗದ ಅಚ್ಚುಕಟ್ಟು ರೈತರು ಬಿಳಿಕೆರೆ ಕೆರೆಯ ಸೋರು ನೀರಿನಿಂದಲೇ ಎರಡು ಭತ್ತದ ಬೆಳೆ ತೆಗೆಯುತ್ತಿದ್ದಾರೆ. 

Advertisement

ಬಿಳಿಕೆರೆ ಕೆರೆ ಹಾಗೂ ಜೀನಹಳ್ಳಿ ಕೆರೆ ಭರ್ತಿಯಾದ್ದರಿಂದ ಕಳೆದ ವರ್ಷದಿಂದಲೇ ಕೆರೆಯ ಸುತ್ತಮುತ್ತಲ ಗ್ರಾಮಗಳ ಬೋರ್‌ವೆಲ್‌ಗ‌ಳಲ್ಲಿ ಅಂತರ್ಜಲ ವೃದ್ಧಿಸಿದ್ದು, ಸದಾ ಬರದ ಬೇಗೆಯಲ್ಲಿ ಬೇಯುತ್ತಿದ್ದ ಬಿಳಿಕೆರೆ ಸುತ್ತಮುತ್ತಲ ಹಳ್ಳಿಗಳಲ್ಲಿ ಜಾನುವಾರುಗಳು ಮತ್ತು ಕುಡಿಯುವ ನೀರಿಗೆ ಸಂಜೀವಿನಿಯಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಈಗಾಗಲೇ ಎರಡು ಕೆರೆಗಳು ಭರ್ತಿಯಾಗಿರುವುದರಿಂದ ಹಳೇಬೀಡು ಕೆರೆಗೆ ಕೋಡಿ ನೀರು ಹರಿದು ಹೋಗಲು ಮುಚ್ಚಿ ಹೋಗಿರುವ ಕಾಲುವೆಯನ್ನು ದುರಸ್ತಿಗೊಳಿಸಿ ಕೆರೆ ತುಂಬಿಸಲಾಗುತ್ತಿದೆ ಎಂದು ಎಇಇ ಸುರೇಶ್‌ ತಿಳಿಸಿದ್ದಾರೆ.

ಬಿಳಿಕೆರೆ ಹಾಗೂ ಜೀನಹಳ್ಳಿ ಕೆರೆಗೆ ಕಳೆದ ವರ್ಷ ನೀರು ತುಂಬಿಸಿದ್ದರಿಂದ ಸುತ್ತಮುತ್ತಲಿನ ಬೋರ್‌ವೆಲ್‌ಗ‌ಳಲ್ಲಿ ಅಂತರ್ಜಲ ಹೆಚ್ಚಿದೆಯಲ್ಲದೇ, ತೋಟಗಳಲ್ಲಿ ಮತ್ತೆ ಹಸಿರು ಚಿಗುರೊಡೆದಿದ್ದು, ಇನ್ನಾದರೂ ನಮ್ಮ ಕಷ್ಟ ತೀರುವ ಕಾಲ ಸನ್ನಿಹಿತವಾಗಿದೆ ಎಂದು ಮಲ್ಲಿನಾಥಪುರ ರೈತ ಬೀರಲಿಂಗೇಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next