ಕೊಟ್ಟಾಯಂ: ಇಡೀ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ಕೋವಿಡ್ 19 ಮಹಾಮಾರಿಗೆ ಹೆಚ್ಚಾಗಿ ವಯೋವೃದ್ಧರು ಬಲಿಯಾಗುತ್ತಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಈ ಆತಂಕದ ನಡುವೆ ಕೇರಳದ ಪಟ್ಟಣಂತಿಟ್ಟಾದ 93 ವರ್ಷದ ಥೋಮಸ್ ಅಲಿಯಾಸ್ ಕುಂಜಾವರಾಚನ್ ಮತ್ತು 88 ವರ್ಷದ ಮರಿಯಮ್ಮ ಬರೋಬ್ಬರಿ 25 ದಿನಗಳ ಕಾಲ ಆಸ್ಪತ್ರೆಯಲ್ಲಿ ಮಾರಕ ಕೋವಿಡ್ 19 ವೈರಸ್ ಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ವಾಪಸ್ ಆಗುವ ಮೂಲಕ ರಾಜ್ಯ ವೈದ್ಯಕೀಯ ಕ್ಷೇತ್ರದಲ್ಲಿ ಇತಿಹಾಸ ಬರೆದಿರುವುದಾಗಿ ವರದಿ ತಿಳಿಸಿದೆ.
ವಯೋವೃದ್ಧ ದಂಪತಿ ಕೋವಿಡ್ 19 ವೈರಸ್ ನಿಂದ ಚೇತರಿಸಿಕೊಂಡು ಇದೀಗ ಆರೋಗ್ಯವಂತರಾಗಿದ್ದಾರೆ. ಜಾಗತಿಕವಾಗಿ ಕೋವಿಡ್ 19 ವೈರಸ್ 60ಕ್ಕಿಂತ ಹೆಚ್ಚು ವಯಸ್ಸಿನವರಿಗೆ ತುಂಬಾ ಅಪಾಯಕಾರಿ ಎಂದು ವರದಿಯಾಗಿತ್ತು.
ಮನೆ ತಲುಪಿದ ಥೋಮಸ್ ಗೆ ತಮ್ಮ ಖುಷಿಯನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲವಾಗಿತ್ತು…ಆ್ಯಂಬುಲೆನ್ಸ್ ನಿಂದ ಕೆಳಗಿಳಿಯುತ್ತಿದ್ದಂತೆಯೇ ರಿಜೋಮೋನೆ ಎಂದು ಕೂಗಿ ಕರೆದಿದ್ದರು…ಇದು ಮೊಮ್ಮಗನ ಹೆಸರು. ಮೋನ್ಸೈ ಅಬ್ರಾಹಂ ಕುಟುಂಬ ಇಟಲಿಯಿಂದ ವಾಪಸ್ ಆಗಿತ್ತು. ಇಡೀ ಕುಟುಂಬ ಕೋವಿಡ್ 19ನಿಂದ ಗುಣಮುಖರಾದ ನಂತರ ಕುಟುಂಬದ ಸದಸ್ಯರು ಒಟ್ಟು ಸೇರಿದ್ದರು ಎಂದು ವರದಿ ತಿಳಿಸಿದೆ.
ಮೋನ್ಸೈ (55ವರ್ಷ), ಪತ್ನಿ ರೇಮಾನಿ ಮೋನ್ಸೈ(53ವರ್ಷ), ಪುತ್ರ ರಿಜೋ(25ವರ್ಷ) ಕೆಲವು ದಿನಗಳ ಹಿಂದಷ್ಟೇ ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿದ್ದರು. ಇದೀಗ 25 ದಿನಗಳ ನಂತರ ಕುಟುಂಬದ ಹಿರಿಯ ಸದಸ್ಯರಾದ ಥೋಮಸ್ ಮತ್ತು ಮರಿಯಮ್ಮಾ ಮನೆಗೆ ವಾಪಸ್ ಆಗುವ ಮೂಲಕ ಇಡೀ ಕುಟುಂಬದಲ್ಲಿ ಸಂತಸ ಇಮ್ಮಡಿಯಾಗಿದೆ ಎಂದು ತಿಳಿಸಿವೆ.
ನನಗೀಗ ದೊಡ್ಡ ನಿರಾಳತೆ ಸಿಕ್ಕಂತಾಗಿದೆ. ನಾನು ಇಟಲಿಯಿಂದ ಊರಿಗೆ ಬಂದ ಉದ್ದೇಶವೇ ನನ್ನ ತಂದೆಯನ್ನು ನೋಡಲು. ಆದರೆ ಕೋವಿಡ್ 19 ಸೋಂಕು ಇಡೀ ನಮ್ಮ ಕುಟುಂಬದ ಸಂತೋಷವನ್ನೇ ಕಿತ್ತುಕೊಂಡುಬಿಟ್ಟಿತ್ತು. ಎರಡು ಆಸ್ಪತ್ರೆಗಳಲ್ಲಿನ ಐಸೋಲೇಶನ್ ವಾರ್ಡ್ ನಲ್ಲಿ ನಾವು ಚಿಕಿತ್ಸೆ ಪಡೆಯುವಂತಾಗಿತ್ತು. ನನ್ನ ತಂದೆ ಮತ್ತು ತಾಯಿಯ ಆರೋಗ್ಯ ಸ್ಥಿತಿ ನೋಡಿ ಚಿಂತೆಯಾಗಿತ್ತು. ದೇವರ ದಯೆಯಿಂದ ಅವರು ಚೇತರಿಸಿಕೊಂಡಿದ್ದಾರೆ ಎಂದು ಮೋನ್ಸೈ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.