ಹೊಸದಿಲ್ಲಿ: ದೇಶವನ್ನೇ ಬೆಚ್ಚಿಬೀಳಿಸಿದ್ದ ದಿಲ್ಲಿ ಫ್ರಿಡ್ಜ್ ಮರ್ಡರ್ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾ ವಿರುದ್ಧ ದಿಲ್ಲಿ ಸಾಕೇತ್ ನ್ಯಾಯಾಲಯ ಮಂಗಳವಾರ ಶ್ರದ್ಧಾಳ ಹತ್ಯೆ ಹಾಗೂ ಸಾಕ್ಷ್ಯಾಧಾರಗಳ ನಾಶಕ್ಕೆ ಯತ್ನಿಸಿ ರುವ ಆರೋಪವನ್ನು ನಿಗದಿಪಡಿಸಿದೆ.
ಪ್ರಕರಣ ಸಂಬಂಧಿಸಿದಂತೆ ಪ್ರಾಸಿಕ್ಯೂ ಷನ್ ವತಿಯಿಂದ ಸಲ್ಲಿಕೆಯಾಗಿರುವಂಥ ದಾಖಲೆಗಳು, ಸಾಕ್ಷ್ಯಾಧಾರಗಳು, ವಾದಗಳು ಸಮರ್ಪಕವಾಗಿರುವ ಹಿನ್ನೆಲೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಮನೀಶ್ ಕುರಾನಾ ಅವರು, ಅಫ್ತಾಬ್ ವಿರುದ್ಧ ಐಪಿಸಿ ಸೆಕ್ಷನ್ 302, 201ರ ಅನ್ವಯ ಆರೋಪಗಳನ್ನು ನಿಗದಿ ಪಡಿಸಿದ್ದಾರೆ.
ನ್ಯಾಯಾಲಯ ನಿಗದಿ ಪಡಿಸಿರುವ ಆರೋಪಗಳನ್ನು ಆರೋಪಿ ಅಫ್ತಾಬ್ ತಿರಸ್ಕರಿಸಿದ್ದಾನೆ. ಅಲ್ಲದೇ, ಪ್ರಕರಣದಲ್ಲಿ ವಿಚಾರಣೆ ಎದುರಿಸಲು ತಾನು ಸಿದ್ಧವಾಗಿರುವುದಾಗಿಯೂ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರಕರಣ ಕುರಿತ ಮುಂದಿನ ವಿಚಾರಣೆಯನ್ನು ಜೂನ್ 1ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ.
ಮತ್ತೊಂದೆಡೆ, ಆರೋಪಿ ಅಫ್ತಾಬ್ ವಿರುದ್ಧದ ವಿಚಾರಣೆಯನ್ನು ಶೀಘ್ರ ಆರಂಭಿಸುವಂತೆ ಹಾಗೂ ಆತನನ್ನು ಗಲ್ಲಿಗೇರಿಸುವಂತೆ ಶ್ರದ್ಧಾರ ತಂದೆ ವಿಕಾಸ್ ವಾಕರ್ ಮನವಿ ಮಾಡಿದ್ದಾರೆ.