Advertisement

ಆಫ್ರಿಕಾ ದೇಶದ ಕತೆ; ಸೋಮಾರಿಗಳ ರಾಜ

12:30 AM Feb 24, 2019 | |

ದೇಶವನ್ನು ಆಳುತ್ತಿದ್ದ ಅನಂಗ್‌ ಎಂಬ ರಾಜನ ಆಡಳಿತದಿಂದ ಪ್ರಜೆಗಳು ತುಂಬ ನೊಂದಿದ್ದರು. ದುಡಿಯುವ ಜನರಿಗೆ ಕೆಲಸವಿರಲಿಲ್ಲ. ರೈತರು ಬೆವರಿಳಿಸಿ ಬೆಳೆದ ಫ‌ಲ ವಸ್ತುಗಳಿಗೆ ಬೆಲೆ ಸಿಗುತ್ತಿರಲಿಲ್ಲ. ಇದರ ಚಿಂತೆಯಿಲ್ಲದೆ ಅನಂಗ್‌ ಪ್ರಜೆಗಳ ಮೇಲೆ ದುಬಾರಿ ತೆರಿಗೆ ಹೇರುತ್ತಿದ್ದ. ಅದನ್ನು ಕೊಡಲು ಕಷ್ಟ ಎಂದವರ ಮೇಲೆ ದಯೆ ತಾಳದೆ ಕಠಿನವಾಗಿ ದಂಡಿಸುತ್ತಿದ್ದ. ಅವನ ಆಳ್ವಿಕೆಯಿಂದ ಮುಕ್ತಿ ಕೊಡು ಎಂದು ಜನರು ದೇವರನ್ನು ಕೈ ಮುಗಿದು ಕೇಳಿಕೊಳ್ಳುತ್ತಿದ್ದರು. ಆಗ ಒಂದು ದಿನ ಅನಾನ್ಸ್‌ ಎಂಬ ಅಲೆಮಾರಿ ಯುವಕ ಜನರ ಬಳಿಗೆ ಬಂದು ಕುಡಿಯಲು ನೀರು ಕೇಳಿದ. “”ಬಾವಿಗಳೆಲ್ಲ ಬತ್ತಿ ಹೋಗಿವೆ. ಆಳುವ ರಾಜನಿಗೆ ಕರುಣೆಯಿಲ್ಲ. ಬಾವಿಗಳನ್ನು ತೋಡಿಸಿ ನೀರು ಕೊಡುವ ಕೆಲಸ ಮಾಡಲಿಲ್ಲ. ಊಟಕ್ಕೆ ಅನ್ನವಿಲ್ಲ” ಎಂದು ಎಲ್ಲರೂ ಕಣ್ಣೀರು ತುಂಬಿ ಹೇಳಿದರು.

Advertisement

ಯುವಕ ಮುಗುಳ್ನಕ್ಕ. “”ಪ್ರಜೆಗಳಿಗೆ ಹಿತ ನೀಡದ ರಾಜನನ್ನು ಇನ್ನೂ ಯಾಕೆ ಸಿಂಹಾಸನದ ಮೇಲೆ ಕುಳಿತಿರಲು ಬಿಟ್ಟಿದ್ದೀರಿ? ಹಸಿದ ಜನರು ಒಟ್ಟು ಸೇರಿದರೆ ಅವನನ್ನು ಇಳಿಸಿ ಸಮುದ್ರಕ್ಕೆ ತೆಗೆದುಕೊಂಡು ಹೋಗಿ ಎಸೆಯಬಹುದು. ಮೊದಲು ಈ ಕೆಲಸ ಮಾಡಿ. ಸುಭಿಕ್ಷೆ ಬರುತ್ತದೆ” ಎಂದು ನೀತಿ ಹೇಳಿದ. ಅವನ ಮಾತಿನಿಂದ ಪ್ರಜೆಗಳಿಗೆ ಹುರುಪು ಬಂದಿತು. ರಾಜನನ್ನು ಹೊಂಡ ತೆಗೆದು ಅದರಲ್ಲಿ ಅವನನ್ನು ತಲೆಕೆಳಗಾಗಿ ನಿಲ್ಲಿಸಿ ಮಣ್ಣು ಮುಚ್ಚಿದರು. ಯುವಕನ ಬಳಿಗೆ ಬಂದರು. “ನೀನು ಹೇಳಿದಂತೆಯೇ ಮಾಡಿದ್ದೇವೆ. ಇನ್ನು ನಮಗೆಲ್ಲ ಹಿತ ನೀಡುವ ಹೊಸ ರಾಜನೊಬ್ಬನನ್ನು ಆಯ್ಕೆ ಮಾಡಲು ನೀನೇ ಸಹಾಯ ಮಾಡಬೇಕು” ಎಂದು ಹೇಳಿದರು.

ಅನಾನ್ಸ್‌ , “ರಾಜನ ಆಯ್ಕೆ ಮಾಡುವುದು ಕಷ್ಟವಿಲ್ಲ. ನಿಮಗೆ ಉತ್ತಮವಾಗಿ ಯಾರು ನಿಮ್ಮನ್ನು ಪರಿಪಾಲಿಸಬಲ್ಲ ಎಂಬ ಭರವಸೆಯಿದೆಯೋ ಅವನನ್ನು ಹುಡುಕಿ ಆರಿಸಿಕೊಳ್ಳಿ” ಎಂದು ಹೇಳಿದ. ಜನರೆಲ್ಲ ಅವನನ್ನೇ ಸುತ್ತುವರೆದರು. 

“ನೀನೇ ಸಿಂಹಾಸನವನ್ನೇರಿ ನಮ್ಮನ್ನು ಸುಖದಿಂದ ಇರುವಂತೆ ನೋಡಿಕೊಳ್ಳಬೇಕು” ಎಂದು ದುಂಬಾಲು ಬಿದ್ದರು. ಅನಾನ್ಸ್‌ ಸ್ವಲ್ಪ$ ಹೊತ್ತು ಯೋಚಿಸಿದ. ಅಲೆಮಾರಿಯಾದ ತನಗೆ ಸುಲಭವಾಗಿ ಅಧಿಕಾರ ಸಿಗುವುದಾದರೆ ನಿರಾಕರಿಸುವುದು ಜಾಣತನವಲ್ಲ ಎಂದು ಲೆಕ್ಕ ಹಾಕಿ, ಒಪ್ಪಿಗೆ ಸೂಚಿಸಿದ.

ಪ್ರಜೆಗಳು ಅನಾನ್ಸ್‌ನನ್ನು ರಾಜನಾಗಿ ಮಾಡಿಕೊಂಡರು. ಅವನು ಅವರೊಂದಿಗೆ, “”ನೀವು ಸುಖವಾಗಿರಲು ನಾನು ಏನು ಮಾಡಬೇಕು ಹೇಳಿ, ಹಾಗೆಯೇ ನಡೆದುಕೊಳ್ಳುತ್ತೇನೆ. ಹಿಂದಿನ ರಾಜ ನಿಮ್ಮೆಲ್ಲರ ಹಿತಕ್ಕಾಗಿ ವೆಚ್ಚ ಮಾಡದೆ ಉಳಿಸಿದ ಹಣ ಬೊಕ್ಕಸದಲ್ಲಿದೆ. ನಿಮಗಾಗಿ ಅದನ್ನು ಖರ್ಚು ಮಾಡುತ್ತೇನೆ” ಎಂದು ಹೇಳಿದ.

Advertisement

“”ನಮಗೆ ಸದ್ಯಕ್ಕೆ ಊಟ ಮಾಡಲು ದವಸ ಧಾನ್ಯಗಳಿಲ್ಲ. ಅರಮನೆಯಿಂದ ನಿತ್ಯವೂ ಉಚಿತವಾಗಿ ಅದನ್ನು ಕೊಡುವ ವ್ಯವಸ್ಥೆ ಮಾಡಿದರೆ ನಮ್ಮ ಕೆಲಸಗಳನ್ನು ಮಾಡಿಕೊಂಡಿರಲು ಅನುಕೂಲವಾಗುತ್ತದೆ” ಎಂದರು ಪ್ರಜೆಗಳು. 

“”ಅದಕ್ಕೇನಂತೆ. ಹೊಟ್ಟೆಯ ಚಿಂತೆ ನೀಗಿದರೆ ಬುದ್ಧಿಯೂ ಚುರುಕಾಗುತ್ತದೆ. ತುಂಬ ಕೆಲಸ ಮಾಡಬಹುದು. ನಾಳೆಯಿಂದ ಅರಮನೆಗೆ ಬಂದು ಊಟಕ್ಕೆ ಬೇಕಾದುದನ್ನು ತೆಗೆದುಕೊಂಡು ಹೋಗಿ” ಎಂದು ಅನಾನ್ಸ್‌ ಔದಾರ್ಯ ತೋರಿಸಿದ. ಆದರೆ, ಧಾನ್ಯ ಕೊಂಡುಹೋಗಲು ಪ್ರಜೆಗಳು ಅರಮನೆಗೆ ಬರಲಿಲ್ಲ. “”ಸೇವಕರ ಮೂಲಕ ಎಲ್ಲರ ಮನೆಗಳಿಗೂ ದವಸ ಧಾನ್ಯಗಳನ್ನು ಕಳುಹಿಸು” ಎಂದು ಮನೆಯಿಂದಲೇ ಕೂಗಿ ಹೇಳಿದರು.

ಅನಾನ್ಸ್‌ ಎಲ್ಲರ ಮನೆಗಳಿಗೂ ಕಾಳುಗಳನ್ನು ಕಳುಹಿಸಿದ. ಆದರೆ ಜನರು ಅದನ್ನು ಸ್ವೀಕರಿಸಲಿಲ್ಲ. “”ಕೇವಲ ಧಾನ್ಯಗಳಿದ್ದರೆ ಊಟ ಸಿದ್ಧವಾಗುವುದೆ? ಪಾತ್ರೆಗಳು ಬರಲಿ” ಎಂದರು. ಅನಾನ್ಸ್‌ ಪಾತ್ರೆಗಳನ್ನು ಕಳುಹಿಸಿದ. “”ಪಾತ್ರೆ ಇದ್ದರೆ ಸಾಕೆ? ಒಲೆಗೆ ಕಟ್ಟಿಗೆ ಬೇಡವೆ? ಅದೂ ಬರಲಿ” ಎಂದು ಜನ ಕುಳಿತಲ್ಲಿಗೇ ಬೇಕಾದುದನ್ನೆಲ್ಲ ಅರಮನೆಯಿಂದ ತರಿಸಿಕೊಂಡರು. ಹೊಟ್ಟೆ ತುಂಬ ಊಟ ಮಾಡಿದರು. ಕಣ್ಣು ತೂಕಡಿಸತೊಡಗಿತು. ಮತ್ತೆ ಮೆತ್ತಗಿನ ಹಾಸಿಗೆ ಕಳುಹಿಸಲು ಕೂಗಿದರು. ಅವರು ಕೇಳಿದುದನ್ನೆಲ್ಲ ದಿನವೂ ಅನಾನ್ಸ್‌ ಕೊಡುತ್ತ ಬಂದ. ಜನ ಸಾಲದೆಂಬಂತೆ ಅವನಿಗೆ, “”ನಮ್ಮ ಇಷ್ಟಾರ್ಥಗಳನ್ನು ಕೊಡದೆ ಹೋದರೆ ಹಿಂದಿನ ರಾಜನಿಗೆ ಏನು ಮಾಡಿದ್ದೇವೋ ನಿನಗೂ ಅದನ್ನೇ ಮಾಡುತ್ತೇವೆ” ಎಂದು ಎಚ್ಚರಿಸಿಬಿಟ್ಟರು.

ವರ್ಷ ಕಳೆಯುವಾಗ ತುಂಬಿದ ಬೊಕ್ಕಸ ಖಾಲಿಯಾಯಿತು. ಜನರೆಲ್ಲರೂ ಸೋಮಾರಿಗಳಾದರು. ಬೀದಿಯ ಕಸ ಗುಡಿಸುವವರಿಲ್ಲದೆ ಕೊಳೆಯಿಂದ ತುಂಬಿ ಹೋಯಿತು. ಜನಗಳೂ ಸ್ನಾನ ಮಾಡಲಿಲ್ಲ. ಎತ್ತು, ದನಗಳ ಮೈ ತೊಳೆಸಲಿಲ್ಲ. ಉದ್ಯೋಗಗಳು ನಿಂತುಹೋದವು. ಶಾಲೆಗಳಿಗೆ ಮಕ್ಕಳು ಬರಲಿಲ್ಲ. ಇದೊಂದು ಸೋಮಾರಿಗಳ ರಾಜ್ಯವೆಂದೇ ಮನೆಮಾತಾಯಿತು. ಅನಾನ್ಸ್‌ ಮದುವೆ ಮಾಡಿಕೊಳ್ಳಲು ಹುಡುಗಿ ಹುಡುಕಲು ಹೊರಟಾಗ ಯಾವ ದೇಶದ ರಾಜಕುಮಾರಿಯು ಕೂಡ ಅವನ ಕೈ ಹಿಡಿಯಲು ಒಪ್ಪಲಿಲ್ಲ. “”ದುಡಿಯದ ಜನಗಳಿರುವ ಸೋಮಾರಿಗಳ ರಾಜನ ಕೈ ಹಿಡಿದರೆ ನಮ್ಮ ಬದುಕು ಹಾಳಾಗುತ್ತದೆ. ನಮಗಿಂತಹ ಸಂಬಂಧ ಬೇಡ” ಎಂದು ನಿರಾಕರಿಸಿದರು.ಆಗ ಒಂದು ದಿನ ಬಿರುಗಾಳಿ ಬಂದಿತು. ದೈತ್ಯ ಗಾತ್ರದ ಒಂದು ಮರ ಬುಡದಿಂದಲೇ ಕುಸಿದು ಬಿದ್ದಿತು. ಮರದ ಕೊಂಬೆಗಳ ನಡುವೆ ಊರಿನ ಜನರು ಸೆರೆಯಾದರು. 

ಆದರೆ, ಒಬ್ಬನಾದರೂ ಕೊಡಲಿ ತಂದು ಮರದ ಕೊಂಬೆಗಳನ್ನು ಕತ್ತರಿಸಲಿಲ್ಲ. ನೀರು ತರಲು ಬಾವಿಗೆ ಹೋಗಬೇಕಿದ್ದರೆ ಆ ಕೆಲಸ ಮಾಡಬೇಕಿತ್ತು. “”ನೀರು ಕುಡಿಯದಿದ್ದರೂ ಚಿಂತೆಯಿಲ್ಲ. ಕೊಡಲಿ ಹಿಡಿದು ಕೆಲಸ ಮಾಡಲು ನಮ್ಮಿಂದ ಆಗದು” ಎಂದು ಸುಮ್ಮನೆ ಕುಳಿತರು. ಮನೆಗಳಿಗೆ ಅಕಸ್ಮಾತಾಗಿ ಬೆಂಕಿ ಬಿದ್ದಿತು. ಆರಿಸಲು ನೀರೇ ಇರಲಿಲ್ಲ. ಆದರೂ ಸೋಮಾರಿಗಳಾದ ಜನರು ನೀರು ತರುವ ಕೆಲಸಕ್ಕೆ ಮುಂದಾಗಲಿಲ್ಲ. ಮನೆಗಳು ಸುಟ್ಟು ಕರಕಲಾಗಿ ಹೋದವು.

ಆಗ ಒಬ್ಬಳು ಹುಡುಗಿ ರಾಜ ಅನಾನ್ಸ್‌ ಬಳಿಗೆ ಬಂದಳು. “”ಕಾಲವು ಕೆಡುವುದಕ್ಕೆ ರಾಜನೇ ಕಾರಣ ಎನ್ನುತ್ತಾರಲ್ಲ. ನೀನು ಇಡೀ ದೇಶವನ್ನು ಹಾಳು ಮಾಡಿಬಿಟ್ಟೆ. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕಿತ್ತು. ದುಡಿದು ತಯಾರಿಸಿದ ವಸ್ತುವಿಗೆ ಉತ್ತಮ ಬೆಲೆ ನೀಡಬೇಕಿತ್ತು. ಎಲ್ಲರಿಗೂ ಉಚಿತವಾಗಿ ಕೊಡುವ ಪದ್ಧತಿ ಆರಂಭಿಸಿದ ಕಾರಣ ಯಾವುದು ಕೂಡ ನಮ್ಮಲ್ಲಿ ಉತ್ಪನ್ನವಾಗದಂತೆ ಮಾಡಿಬಿಟ್ಟೆ” ಎಂದು ಹೇಳಿದಳು. ಅನಾನ್ಸ್‌ “”ತಪ್ಪು ಮಾಡಿದೆ” ಎಂದು ಒಪ್ಪಿಕೊಂಡ.ಹುಡುಗಿ ಅವನಿಗೆ ಒಂದು ಉಪಾಯ ಹೇಳಿಕೊಟ್ಟಳು. “”ನೀನು ಮರವನ್ನು ಕಡಿದು ನಿಧಿಯನ್ನು ತಂದವರು ಅದನ್ನು ತೆಗೆದುಕೊಂಡು ಹೋಗಬಹುದು ಎಂಬ ಮಾತನ್ನು ತಿಳಿಸು” ಎಂದು ಹೇಳಿಕೊಟ್ಟಳು.

ಅನಾನ್ಸ್‌ ಜನರನ್ನು ಕರೆದು ಹುಡುಗಿ ಹೇಳಿಕೊಟ್ಟ ಮಾತುಗಳನ್ನು ಹೇಳಿದ. ಆದರೆ ಸೋಮಾರಿಗಳಾದ ಜನರಲ್ಲಿ ಒಬ್ಬನು ಕೂಡ ಮುಂದೆ ಬರಲಿಲ್ಲ. ಆಗ ಹುಡುಗಿಯೇ ಕೊಡಲಿ ತಂದಳು ಮರದ ಬಳಿಗೆ ಹೋಗಿ ಪೊಟರೆಯನ್ನು ಕತ್ತರಿಸಿ ಅದರೊಳಗಿದ್ದ ನಿಧಿಯ ಗಂಟನ್ನು ಹೊರಗೆ ತಂದು ಹೆಗಲಿಗೇರಿಸಿಕೊಂಡಳು. ರಾಜನೊಂದಿಗೆ, “”ಬೊಕ್ಕಸ ಬರಿದಾದ ಊರಿನಲ್ಲಿ ಯಾಕೆ ಕುಳಿತಿರುವೆ? ನನ್ನೊಂದಿಗೆ ಬಾ. ಬರಗಾಲದಿಂದ ತತ್ತರಿಸಿದ ನಮ್ಮ ಊರಿನಲ್ಲಿ ಈ ಹಣದಿಂದ ಕೆರೆ-ಬಾವಿಗಳನ್ನು ತೋಡಿಸಿ ಹಸಿರಿನ ಗಿಡಗಳನ್ನು ನೆಟ್ಟು ಸುಖದಿಂದ ಜೀವನ ನಡೆಸುವಂತೆ ಮಾಡೋಣ” ಎಂದು ಕರೆದಳು.

ಆಗ ಜನಗಳೆಲ್ಲ ಓಡಿಬಂದರು. ಉಚಿತವಾಗಿ ಕೊಡುವ ಯಾವುದೂ ನಮಗೆ ಬೇಡ. ನಮ್ಮ ಶ್ರಮದಿಂದ ಸುಂದರವಾದ ದೇಶ ಕಟ್ಟಲು ನಮ್ಮೊಂದಿಗೆ ನೀವಿರಬೇಕು” ಎಂದು ಕೇಳಿಕೊಂಡರು. ಅನಾನ್ಸ್‌ ಆ ಹುಡುಗಿಯನ್ನು ಮದುವೆಯಾಗಿ ಅಲ್ಲಿಯೇ ನಿಂತ.

– ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next