ಕೇರಳ: ಉತ್ತರ ಕೇರಳದ ಕಣ್ಣೂರು ಜಿಲೆಯ ಕಣಿಚಾರ್ ಪ್ರದೇಶದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಎರಡು ಫಾರ್ಮ್ ಗಳಲ್ಲಿ ಇರುವ ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಇದನ್ನೂ ಓದಿ:ಅಮರನಾಥ ಯಾತ್ರೆ ವೇಳೆ 300 ಅಡಿ ಪ್ರಪಾತಕ್ಕೆ ಬಿದ್ದು ಯಾತ್ರಿಕ ಮೃತ್ಯು, ಇನ್ನೋರ್ವನಿಗೆ ಗಾಯ
ಮಲೆಯಂಪಾಡಿಯಲ್ಲಿರುವ ಖಾಸಗಿ ಫಾರ್ಮ್ ಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿರುವುದಾಗಿ ಜಿಲ್ಲಾ ಪಶುಸಂಗೋಪನಾ ಅಧಿಕಾರಿಗಳು ದೃಢಪಡಿಸಿದ್ದಾರೆ.
ಅದೇ ರೀತಿ ಸುಮಾರು 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಇನ್ನೊಂದು ಫಾರ್ಮ್ ನಲ್ಲಿರುವ ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶ ನೀಡಿದ್ದು, ಶಿಷ್ಟಾಚಾರದ ನಿಯಮದಂತೆ ಆ ಹಂದಿಗಳನ್ನು ಹೂಳಲು ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.
ಹಂದಿ ಸಾಕಾಣೆ ಕೇಂದ್ರದ ಒಂದು ಕಿಲೋ ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸೋಂಕು ಪತ್ತೆಯಾದ ಸ್ಥಳವೆಂದು ಘೋಷಿಸಲಾಗಿದೆ. ಮತ್ತು 10 ಕಿಲೋ ಮೀಟರ್ ವ್ಯಾಪ್ತಿವರೆಗಿನ ಪ್ರದೇಶವನ್ನು ಕಣ್ಗಾವಲು ವಲಯ ಎಂದು ಘೋಷಿಸಲಾಗಿದೆ.
ಈ ಪ್ರದೇಶದಲ್ಲಿನ ಹಂದಿಗಳ ಮಾರಾಟ ಮತ್ತು ಸಾಗಾಟವನ್ನು ಮೂರು ತಿಂಗಳ ಕಾಲದವರೆಗೆ ನಿಷೇಧಿಸಲಾಗಿದೆ ಎಂದು ವರದಿ ತಿಳಿಸಿದೆ. ಫಾರ್ಮ್ ಗಳಲ್ಲಿ ಸೋಂಕಿಗೆ ಒಳಗಾಗಿರುವ ಹಂದಿಗಳನ್ನು ಬೇರೆ ಫಾರ್ಮ್ ಗಳಿಂದ ಖರೀದಿಸಲಾಗಿತ್ತೇ ಎಂಬ ಬಗ್ಗೆ ಶೀಘ್ರವೇ ವರದಿ ಸಲ್ಲಿಸುವಂತೆ ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.