Advertisement
ಪ್ರಾಣಿಗಳೆಲ್ಲ ಚಿಂತೆಗೊಳಗಾದವು. ಈ ಸರ್ವಾಧಿಕಾರಿಯ ಒಡೆತನದಲ್ಲಿ ಬದುಕುವುದು ಹೇಗೆ? ಎಂದು ತಿಳಿಯದೆ ಒದ್ದಾಡಿದವು. ಒಂದು ಸರೋವರದ ದಡದಲ್ಲಿ ಅವು ಒಟ್ಟುಗೂಡಿ ಸಭೆ ನಡೆಸಿದವು. ಇದರಿಂದ ಪಾರಾಗಲು ಮುಂದೆ ಏನು ಮಾಡಬೇಕೆಂದು ಪ್ರಾಣಿಗಳು ಮಾತುಕತೆ ನಡೆಸುತ್ತಿರುವಾಗ ಸನಿಹದ ಮರದ ತುದಿಯಲ್ಲಿ “ಕಿಚಕಿಚ’ ಎಂದು ಯಾರೋ ನಗುವುದು ಕೇಳಿಸಿತು. ಮೇಲೆ ನೋಡಿದರೆ ಮಂಗ ಅಲ್ಲಿ ಕುಳಿತುಕೊಂಡು ತಮಾಷೆ ಮಾಡುತ್ತ ನಗುತ್ತ ಇರುವುದು ಕಂಡಿತು.
Related Articles
Advertisement
ಸಿಂಹವು ಮಂಗನಿರುವ ಮರದ ಬಳಿಗೆ ಹೋಯಿತು. ಮಂಗನೊಂದಿಗೆ, “”ಇಳಿಯೋ ಕೆಳಗೆ? ಏನು ಹೇಳಿದೆ ನೀನು, ನಾನು ನಿನ್ನ ಸೇವಕನಾಗಿದ್ದೆನಂತೆ. ಹೀಗೆ ಪ್ರಾಣಿಗಳ ಬಳಿ ಹೇಳಿಕೊಂಡೆಯಾ?” ಎಂದು ಕೇಳಿತು. ಮಂಗ ಮರದಿಂದ ಕೆಳಗಿಳಿಯಿತು. ಸಿಂಹದ ಕಾಲುಗಳ ಬಳಿ ಹೊರಳಾಡಿತು. “”ಎಲ್ಲಾದರೂ ಉಂಟೆ? ವನರಾಜನ ಬಗೆಗೆ ಅಪಚಾರದ ಮಾತು ಹೇಳಿದವರ ನಾಲಿಗೆ ಬಿದ್ದು ಹೋಗಲಿ. ನನ್ನ ಮೇಲೆ ಆಗದವರು ಹಾಕಿದ ಅಪವಾದವಿದು. ನಾನು ಇಂಥ ಮಾತೇ ಹೇಳಿಲ್ಲ” ಎಂದು ನಯವಿನಯದಿಂದ ಹೇಳಿಕೊಂಡಿತು.
“”ಹೌದೆ? ಹಾಗಾದರೆ ನನ್ನ ಜೊತೆಗೆ ನಡೆದು ಬಾ. ಅಲ್ಲಿರುವ ಪ್ರಾಣಿಗಳ ಸಮಕ್ಷಮದಲ್ಲಿ ನಿನ್ನ ವಿಚಾರಣೆಯಾಗಲಿ. ಸತ್ಯ ಹೊರಬೀಳುತ್ತದೆ. ಇಂಥ ಮಾತು ನೀನು ಆಡಿಲ್ಲವಾದರೆ ಕ್ಷಮಿಸುತ್ತೇನೆ. ಸಟೆಯಾಡಿದವರ ಬಾಲವನ್ನು ಕತ್ತರಿಸುತ್ತೇನೆ. ಈಗಲೇ ಹೊರಡು” ಎಂದು ಗರ್ಜಿಸಿತು ಸಿಂಹ.
“”ಜೀಯಾ, ನಿಮ್ಮೊಂದಿಗೆ ನಡೆದುಕೊಂಡು ಬರಲು ನನಗೆ ಶಕ್ತಿಯಿಲ್ಲ. ವಾತ ರೋಗದಿಂದಾಗಿ ನಾಲ್ಕು ಹೆಜ್ಜೆಯಿಡಲೂ ಕಷ್ಟವಾಗಿದೆ. ದೊಡ್ಡವರಾದ ತಾವು ಉದಾರವಾಗಿ ನನ್ನನ್ನು ನಿಮ್ಮ ಬೆನ್ನಮೇಲೆ ಕೂಡಿಸಿಕೊಂಡರೆ ನಾನು ತಪ್ಪಿಸಿಕೊಳ್ಳಲು ಅವಕಾಶವೂ ಇಲ್ಲ. ಸಲೀಸಾಗಿ ಅಲ್ಲಿಗೆ ಹೋಗಲೂ ಸಾಧ್ಯ” ಎಂದು ಮಂಗ ಅಸಹಾಯನಾಗಿ ಹೇಳಿತು. “”ಸರಿ, ನನ್ನ ಬೆನ್ನ ಮೇಲೆ ಕುಳಿತುಕೋ” ಎಂದು ಸಿಂಹವು ಅದನ್ನು ಬೆನ್ನಿನ ಮೇಲೆ ಕೂಡಿಸಿಕೊಂಡು ಹೊರಟಿತು. ಕೊಂಚ ಮುಂದೆ ಬಂದಾಗ ಮಂಗವು, “”ಒಡೆಯಾ, ಬೆನ್ನಿನ ಮೇಲೆ ಕುಳಿತುಕೊಳ್ಳುವಾಗ ಮೈ ವಾಲುತ್ತಿದೆ, ಬೀಳುತ್ತೇನೆಂಬ ಭಯವಾಗಿದೆ. ಕಾಡಿನ ಬಿಳಲುಗಳಿಂದ ಒಂದು ಅಂಬಾರಿ ಮಾಡಿ ತಾವು ಬೆನ್ನಿನ ಮೇಲಿಟ್ಟುಕೊಂಡರೆ ಕುಳಿತುಕೊಳ್ಳಲು ಸುಲಭ. ಇಲ್ಲವಾದರೆ ಮುಂದೆ ಬರುವುದು ಸಾಧ್ಯವಾಗದು” ಎಂದಿತು ಮಂಗ. “”ಆಗಲಿ” ಎಂದು ಸಿಂಹವು ಬಿಳಲುಗಳ ಅಂಬಾರಿ ಮಾಡಿ ಬೆನ್ನಿಗೇರಿಸಿತು. ಅದರಲ್ಲಿ ಕುಳಿತು ಮಂಗ ಮುಂದೆ ಹೊರಟಿತು.
ಸ್ವಲ್ಪ ದೂರ ಸಾಗಿದಾಗ ಮಂಗವು, “”ವನರಾಜಾ, ಈ ಅಂಬಾರಿ ಅಲುಗಾಡುತ್ತಿದೆ, ಬೀಳುತ್ತೇನೆಂಬ ಭಯವಾಗುತ್ತಿದೆ. ಇದಕ್ಕೊಂದು ಹಗ್ಗ ಹಾಕಿ ನಿಮ್ಮ ಕೊರಳಿಗೆ ಕಟ್ಟಿಕೊಳ್ಳಬೇಕು. ನಿಮ್ಮ ಮೂಗಿಗೊಂದು ಕಡಿವಾಣ ಹಾಕಿ ನನ್ನ ಕೈಯಲ್ಲಿ ಕೊಟ್ಟರೆ ಭದ್ರವಾಗಿ ಅಲ್ಲಿಗೆ ತಲುಪಬಹುದು” ಎಂದು ಹೇಳಿತು. ಸಿಂಹವು ಹಾಗೆಯೇ ಮಾಡಿತು. ಅಂಬಾರಿಯನ್ನು ಸಿಂಹದ ಕೊರಳಿಗೆ ಕಟ್ಟಿ, ಮೂಗಿನ ಕಡಿವಾಣ ಹಿಡಿದುಕೊಂಡು ಮಂಗ ಕುಳಿತಿತು.
ಹೀಗೆ ಸಿಂಹವು ಮಂಗದೊಂದಿಗೆ ಪ್ರಾಣಿಗಳ ಬಳಿಗೆ ಹೋಯಿತು. ಪ್ರಾಣಿಗಳು ದೊಡ್ಡದಾಗಿ ನಗುತ್ತ, “”ಮಂಗ ಹೇಳಿದ ಮಾತು ನಿಜ. ಈ ಸಿಂಹಕ್ಕೆ ಧಿಕ್ಕಾರವಿರಲಿ. ಇದು ಮಂಗನಿಗೆ ಸೇವೆ ಮಾಡುತ್ತಿದ್ದುದು ದಿಟ ಎಂಬುದಕ್ಕೆ ಈಗ ಅದನ್ನು ಹೊತ್ತುಕೊಂಡು ಬಂದಿರುವುದೇ ಸಾಕ್ಷ್ಯವಲ್ಲವೆ?” ಎಂದು ಗೇಲಿ ಮಾಡಿದವು. ತಾನು ಮೋಸ ಹೋಗಿರುವುದು ಸಿಂಹಕ್ಕೆ ಅರ್ಥವಾಯಿತು. ಅದು ಮಂಗನ ಮೇಲೆ ಕೋಪಗೊಂಡು ಕೊಲ್ಲಲು ಪ್ರಯತ್ನಿಸುವಾಗ ಮಂಗ ಮರದ ಮೇಲೆ ಹಾರಿ ತಪ್ಪಿಸಿಕೊಂಡಿತು. ಸಿಂಹಕ್ಕೆ ನಾಚುಗೆಯಾಯಿತು. ಒಂದು ಮಂಗನನ್ನು ಬೆನ್ನಿನಲ್ಲಿ ಹೊತ್ತುತಂದ ತನ್ನನ್ನು ಯಾವ ಪ್ರಾಣಿಗಳೂ ಗೌರವಿಸುವುದಿಲ್ಲ ಎಂದು ಅರಿತುಕೊಂಡು ತಲೆ ತಗ್ಗಿಸಿ ಆ ಕಾಡನ್ನು ಬಿಟ್ಟು ಓಡಿಹೋಯಿತು. ಮೃಗಗಳಿಗೆ ನೆಮ್ಮದಿಯಾಯಿತು.
ಪ. ರಾಮಕೃಷ್ಣ ಶಾಸ್ತ್ರಿ