Advertisement
“ಅಫ್ಘಾನ್ ನಾಗರಿಕರಲ್ಲಿ ಕೆಲವರ ಪಾಸ್‌ಪೋರ್ಟ್ ಗಳು ಕಳೆದುಹೋಗಿರುವ ವರದಿಗಳ ಆಧಾರದಲ್ಲಿ ಇ-ವೀಸಾ ಜಾರಿಗೊಳಿಸಲಾಗಿದೆ. ಭಾರತಕ್ಕೆ ಆಗಮಿಸಲು ಬಯಸುವ ಅಫ್ಘನ್ನರಿಗೆ ಈ ಹಿಂದೆ ನೀಡಲಾಗಿದ್ದ ವೀಸಾಗಳು ತತ್‌ಕ್ಷಣದಿಂದ ಜಾರಿಗೊಳ್ಳುವಂತೆ ರದ್ದಾಗಿದ್ದು, ಅವರೆಲ್ಲರೂ ಇ-ವೀಸಾಕ್ಕಾಗಿ indianvisaonline.gov.in, ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು” ಎಂದು ಸಚಿವಾಲಯ ತಿಳಿಸಿದೆ.
Related Articles
Advertisement
ಮಹಿಳೆಯರಿಗೆ ಎಚ್ಚರಿಕೆ: ಮಹಿಳೆಯರಿಗೆ ಗೌರವ ಕೊಡೋದು ಹೇಗೆ ಎಂಬುದು ನಮ್ಮ ಸೈನಿಕರಿಗೆ ಗೊತ್ತಿಲ್ಲ. ಹಾಗಾಗಿ, ಅಫ್ಘಾನಿಸ್ಥಾನದ ಉದ್ಯೋಗಸ್ಥ ಮಹಿಳೆಯರು ಮನೆಯಲ್ಲೇ ಇರಬೇಕು ಎಂದು ತಾಲಿಬಾನ್ ನಾಯಕ ಝಬೀವುಲ್ಲಾ ಮುಜಾಹೀದ್ ಎಚ್ಚರಿಸಿದ್ದಾರೆ.
ಚೀನ-ತಾಲಿಬಾನ್ ಮಾತುಕತೆ: ಬೀಜಿಂಗ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನಿºನ್, “ಅಫ್ಘಾನಿಸ್ಥಾನದಲ್ಲಿ ಬರಲಿರುವ ತಾಲಿಬಾನ್ ಸರಕಾರದೊಂದಿಗೆ ಚೀನ ಸ್ನೇಹದಿಂದ, ಸಹಕಾರದಿಂದ ಮುಂದುವರಿಯಲಿದೆ’ ಎಂದಿದ್ದಾರೆ.
ಬೈಡನ್ ಪ್ರತ್ಯುತ್ತರ: “ಆ. 31ರೊಳಗೆ ಅಫ್ಘಾನಿಸ್ಥಾನ ದಲ್ಲಿರುವ ಅಮೆರಿಕ ಸೇನೆಯನ್ನು ಹಾಗೂ ಅಲ್ಲಿನ ನಿರಾಶ್ರಿತರನ್ನು ಏರ್‌ಲಿಫ್ಟ್ ಮಾಡಲು ನಿರ್ಧರಿಸಲಾಗಿದೆ. ಆದರೆ, ಅದು ತಾಲಿಬಾನಿಗಳು ನೀಡುವ ಸಹಕಾರದ ಮೇಲೆ ಅವಲಂಬಿತ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ. ಇತ್ತೀಚೆಗೆ ತಾಲಿಬಾನಿಗಳು, ಆ. 31ರೊಳಗೆ ಅಫ್ಘಾನಿಸ್ಥಾನವನ್ನು ಅಮೆರಿಕ ಸಂಪೂರ್ಣವಾಗಿ ತೊರೆಯಬೇಕು ಎಂದು ಆಗ್ರಹಿಸಿದ್ದಕ್ಕೆ ಹೀಗೆ ಹೇಳಿದ್ದಾರೆ.
200 ನಾಯಿ, ಬೆಕ್ಕುಗಳ ಏರ್‌ಲಿಫ್ಟ್! :
ಹಿಂದೊಮ್ಮೆ ಬ್ರಿಟನ್ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯ ಅನಂತರ ಕೆಲವು ವರ್ಷಗಳ ಹಿಂದೆ ಕಾಬೂಲ್‌ನಲ್ಲಿ ನೌಝಾದ್ ಎಂಬ ನಿರ್ಗತಿಕ ಪ್ರಾಣಿಗಳ ಸಾಕಾಣಿಕೆ ಕೇಂದ್ರವನ್ನು ತೆರೆದಿದ್ದ ಮರಿನ್ ಪೌಲ್ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ಕಾಬೂಲ್‌ನಿಂದ ತಾವು ಸಾಕಿರುವ ಸುಮಾರು 200 ನಾಯಿಗಳು, ಬೆಕ್ಕುಗಳನ್ನು ಬ್ರಿಟನ್‌ಗೆ ಸಾಗಿಸಲು ಅವರು ನಿರ್ಧರಿಸಿದ್ದು, ಕ್ರೌಂಡ್-ಫಂಡಿಂಗ್ ಮೂಲಕ ವಿಮಾನವೊಂದನ್ನು ಬಾಡಿಗೆ ಪಡೆದು ಅದರಲ್ಲಿ ಈ ಪ್ರಾಣಿಗಳು, ತಮ್ಮ ಸಿಬಂದಿ, ತಾವು, ತಮ್ಮ ಕುಟುಂಬದೊಂದಿಗೆ ಪ್ರಯಾಣ ಬೆಳೆಸಲು ಅವರು ನಿರ್ಧರಿಸಿದ್ದಾರೆ. ಇದಕ್ಕೆ “ಆಪರೇಷನ್ ಆರ್ಕ್’ ಎಂದೂ ಅವರು ಹೆಸರಿಟ್ಟಿದ್ದಾರೆ. ಆದರೆ, ಇದು ವಿವಾದಕ್ಕೆ ಕಾರಣವಾಗಿದೆ. ಅಫ್ಘಾನಿಸ್ಥಾನದಲ್ಲಿರುವ ಅನೇಕ ಬ್ರಿಟನ್ ನಾಗರಿಕರು ಸ್ವದೇಶಕ್ಕೆ ಮರಳಲು ಅವಕಾಶ ಸಿಗದೆ ಪರಿತಪಿಸುತ್ತಿರುವಾಗ, ಅವರನ್ನು ಕರೆತರುವುದನ್ನು ಬಿಟ್ಟು ಪ್ರಾಣಿಗಳನ್ನು ತರುವುದಕ್ಕೆ ಮೊದಲು ಆದ್ಯತೆ ನೀಡುವುದು ಸರಿಯಲ್ಲ ಎಂದು ಬ್ರಿಟನ್ ರಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬೆನ್ ವ್ಯಾಲೆಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲಿಬಾನಿಗಳು ಬದಲಾಗಿಲ್ಲ :
ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳ ಆಡಳಿತ ಬರಲಿದೆ ಎಂಬುದನ್ನು ಭಾರತ ಮೊದಲೇ ಊಹಿಸಿತ್ತು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜ| ಬಿಪಿನ್ ರಾವತ್ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅವರು ಇಷ್ಟು ಕ್ಷಿಪ್ರವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಇರಲಿಲ್ಲ. ತಾಲಿಬಾನ್‌ನಿಂದ ಎದುರಾಗಲಿರುವ ಬೆದರಿಕೆಯನ್ನೂ ಸಮರ್ಥವಾಗಿ ಎದುರಿಸಲಾಗುತ್ತದೆ ಎಂದರು. ಕ್ವಾಡ್ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಜಗತ್ತಿನಲ್ಲಿ ನಡೆಯುವ ಹೋರಾಟಕ್ಕೆ ಮತ್ತಷ್ಟು ಬೆಂಬಲ ನೀಡಬೇಕು ಎಂದರು. ಆದರೆ, ತಾಲಿಬಾನಿಗಳು ಅಫ್ಘಾನಿಸ್ಥಾನ ವಶಪಡಿಸಿಕೊಂಡ ಅನಂತರ ಅವರಿಂದ ಆಗುತ್ತಿರುವ ಅನ್ಯಾಯಗಳನ್ನು ನೋಡಿದರೆ ಕಳೆದ 20 ವರ್ಷಗಳಲ್ಲಿ ಅವರೇನೂ ಬದಲಾಗಿಲ್ಲ ಎನ್ನಿಸುತ್ತಿದೆ ಎಂದರು.