Advertisement
ಅಫ್ಘಾನಿಸ್ಥಾನದ ಒಂದೊಂದೇ ನಗರಗಳನ್ನು ಮಿಂಚಿನ ವೇಗದಲ್ಲಿ ತಾಲಿಬಾನ್ ಉಗ್ರರು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದಂತೆ ನಾಗರಿಕರು ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ. ತಾವು ಏನಾಗಬಾರದೆಂದು ಭಾವಿಸಿದ್ದೆವೋ, ಅದುವೇ ನಡೆಯುತ್ತಿದೆ ಎಂಬ ಆತಂಕದಲ್ಲೇ “ಮುಂದೇನು’ ಎಂಬ ಪ್ರಶ್ನಾರ್ಥಕ ಚಿಹ್ನೆ ಎಲ್ಲರ ಮೊಗವನ್ನೂ ಆವರಿಸಿಕೊಂಡಿದೆ.
Related Articles
Advertisement
ಮಹಿಳಾ ಬ್ಯಾಂಕರ್‌ಗಳಿನ್ನು ಮನೆಗೇ ಸೀಮಿತ! :
ತಾಲಿಬಾನ್ ಆಡಳಿತದಲ್ಲಿ ಯಾವ ಕಾರಣಕ್ಕೂ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ತಾವು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ರಕ್ಷಣೆ ನೀಡುತ್ತೇವೆ ಎಂದಿದ್ದ ಉಗ್ರರು, ಈಗ ಉದ್ಯೋಗ ಮಾಡುತ್ತಾ ಸ್ವಾವಲಂಬಿಯಾಗಿದ್ದ ಮಹಿಳೆಯರನ್ನು ಒತ್ತಾಯಪೂರ್ವಕವಾಗಿ ಕೆಲಸ ಬಿಡಿಸುತ್ತಿದ್ದಾರೆ. ಹಲವು ಬ್ಯಾಂಕುಗಳ ಶಾಖೆಗಳಿಗೆ ನುಗ್ಗಿರುವ ಶಸ್ತ್ರಧಾರಿ ಉಗ್ರರು, ಅಲ್ಲಿದ್ದ ಎಲ್ಲ ಮಹಿಳಾ ಉದ್ಯೋಗಿಗಳನ್ನು ಮನೆಗೆ ಬಿಟ್ಟು ಬಂದಿದ್ದಾರೆ. ಜತೆಗೆ ಇನ್ನು ಯಾವತ್ತೂ ಉದ್ಯೋಗಕ್ಕೆ ಹೋಗುವಂತಿಲ್ಲ ಎಂದು ಎಚ್ಚರಿಸಿದ್ದಾರೆ. ಅಲ್ಲದೇ, ಅವರ ಹುದ್ದೆಗಳನ್ನು ಆ ಮಹಿಳೆಯರ ಪುರುಷ ಸಂಬಂಧಿಕರಿಗೆ ನೀಡುವಂತೆ ಸೂಚಿಸಿದ್ದಾರೆ.
ಸಿದ್ದಿಕಿ ನಮ್ಮ ಒಪ್ಪಿಗೆ ಪಡೆದಿರಲಿಲ್ಲ: ತಾಲಿಬಾನ್ ಉಗ್ರರ ಸ್ಪಷ್ಟನೆ :
ತಾಲಿಬಾನ್‌ಗಳಿಂದ ಇತ್ತೀಚೆಗೆ ಹತರಾದ ಭಾರತೀಯ ಪತ್ರಕರ್ತ ಡ್ಯಾನಿಶ್ ಸಿದ್ದಿಕಿ ಅವರಿಗೆ ಸಂಬಂಧಿಸಿ ಹೊಸ ಹೇಳಿಕೆಯೊಂದನ್ನು ತಾಲಿಬಾನ್ ನೀಡಿದೆ. ಅಫ್ಘಾನ್ ಸೇನೆ ಮತ್ತು ತಾಲಿಬಾನ್ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದಾಗ, ಗುಂಡು ತಾಕಿ ಸಿದ್ದಿಕಿ ಮೃತಪಟ್ಟರು. ಅವರು ನಮ್ಮೊಂದಿಗೆ ಸಮನ್ವಯತೆ ಸಾಧಿಸದ್ದೇ ಅವರ ಸಾವಿಗೆ ಕಾರಣ. ನಮ್ಮ ಪ್ರದೇಶಕ್ಕೆ ಕಾಲಿಡುವ ಪ್ರತಿಯೊಬ್ಬ ಪತ್ರಕರ್ತರೂ ನಮ್ಮೊಂದಿಗೆ ಸಮನ್ವಯತೆ ಸಾಧಿಸಿ, ಒಪ್ಪಿಗೆ ಪಡೆಯಬೇಕು ಎಂದು ನಾವು ಎಷ್ಟೋ ಬಾರಿ ಹೇಳಿದ್ದೆವು. ಆದರೆ ಅದನ್ನು ಸಿದ್ದಿಕಿ ಮಾಡಲಿಲ್ಲ ಎಂದು ತಾಲಿಬಾನ್ ಹೇಳಿದೆ.
ಲಸಿಕೆ ಪಡೆಯುವಂತಿಲ್ಲ! :
ತಾಲಿಬಾನ್ ಹಿಡಿತದಲ್ಲಿರುವ ಪೂರ್ವ ಅಫ್ಘಾನ್‌ನ ಪಕ್ತಿಯಾದಲ್ಲಿ ಕೊರೊನಾ ಲಸಿಕೆಗೆ ಉಗ್ರರು ನಿಷೇಧ ಹೇರಿದ್ದಾರೆ. ಪಕ್ತಿಯಾ ಪ್ರಾದೇಶಿಕ ಆಸ್ಪತ್ರೆಯಲ್ಲಿ ಈ ಕುರಿತ ನೋಟಿಸ್ ಅಂಟಿಸಲಾಗಿದೆ. ಯಾರು ಕೂಡ ಲಸಿಕೆಯನ್ನು ಸ್ವೀಕರಿಸುವಂತೆಯೂ ಇಲ್ಲ, ವಿತರಣೆ ಮಾಡುವಂತೆಯೂ ಇಲ್ಲ ಎಂಬ ಖಡಕ್ ಸೂಚನೆಯನ್ನು ಉಗ್ರರು ನೀಡಿದ್ದಾರೆ.